Friday, June 9, 2023
Homeಬಯಲುಸೀಮೆಪ್ರವಾಹ ಪೀಡಿತ ಮಲ್ಲಾಪುರಕ್ಕೆ ಭೇಟಿ ನೀಡದ ಸಿಎಂ ಬೊಮ್ಮಾಯಿ - ಬೇಸರ ವ್ಯಕ್ತ ಪಡಿಸಿದ ಗ್ರಾಮಸ್ಥರು.

ಪ್ರವಾಹ ಪೀಡಿತ ಮಲ್ಲಾಪುರಕ್ಕೆ ಭೇಟಿ ನೀಡದ ಸಿಎಂ ಬೊಮ್ಮಾಯಿ – ಬೇಸರ ವ್ಯಕ್ತ ಪಡಿಸಿದ ಗ್ರಾಮಸ್ಥರು.

ಕಾರವಾರ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ರೂ.200ಕೋಟಿ ಪರಿಹಾರ ಘೋಷಿಸಿದ ಬಸವರಾಜ ಬೊಮ್ಮಾಯಿಯವರು, ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಾರವಾರದ ಮಲ್ಲಾಪುರಕ್ಕೆ ಭೇಟಿ ನೀಡದಿದ್ದ ಕಾರಣದಿಂದ ಗ್ರಾಮಸ್ಥರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಕಾರವಾರದ ಮಲ್ಲಾಪುರ ಗ್ರಾಮ ಪಂಚಾಯಿತಿ ಅಡಿಯಲ್ಲಿ ಒಟ್ಟು 8 ಗ್ರಾಮಗಳಿದ್ದು ಈ ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಪ್ರವಾಹ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಒಟ್ಟು 200 ಮನೆಗಳು ನಾಶವಾಗಿದ್ದು, 2000 ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂತಹ ಅನಾಹುತವಾದರೂ ತಮ್ಮ ಗ್ರಾಮಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡದಿರುವುದಕ್ಕೆ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕಳೆದ ಗುರುವಾರ ಮುಖ್ಯಮಂತ್ರಿ ಬೊಮ್ಮಾಯಿಯವರು ಪ್ರವಾಹ ಪೀಡಿತ ಅಂಕೋಲಾ, ಯೆಲ್ಲಾಪುರ ಹಾಗೂ ಅರೆಬೈಲ್ ಘಾಟ್ ರಸ್ತೆ ಕುಸಿತವಾಗಿದ್ದಂತಹ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಕಾರವಾರಕ್ಕೂ ಮುಖ್ಯಮಂತ್ರಿಗಳು ಭೇಟಿ ನೀಡಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಪ್ರವಾಸ ರದ್ದುಗೊಳಿಸಿ ದೆಹಲಿಗೆ ಭೇಟಿ ನೀಡಿದ್ದರು.

ಈ ನಡುವೆ ಮಲ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ್ ಬಂಡೇಕರ್‌ರವರು ಮಾತನಾಡಿ, 2019 ರ ಪ್ರವಾಹದ ನಂತರ ಅಧಿಕಾರದಲ್ಲಿರುವ ಯಾವುದೇ ನಾಯಕರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ನೂತನ ಮುಖ್ಯಮಂತ್ರಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡುವ ವಿಶ್ವಾಸವಿತ್ತು. ಅದರೆ, ನಿರಾಸೆಯುಂಟಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದನೆ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಅತೀಯಾಗಿ ಸುರಿದ ಮಳೆ ಹಾಗೂ ಕದ್ರಾ ಅಣೆಕಟ್ಟಿನಿಂದ 2.7 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ. ಒಳಹರಿವು ಹೆಚ್ಚಾಗಿದ್ದರಿಂದ ಅಣೆಕಟ್ಟು ಕ್ರೆಸ್ಟ್ ಗೇಟ್‌ಗಳನ್ನು ತೆರೆಯಬೇಕಾಗಿ ಬಂದಿತ್ತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ರಂಗಸ್ವಾಮಿಯವರು ತಿಳಿಸಿದ್ದಾರೆ.

ಉಪ ಆಯುಕ್ತರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಪ್ರತೀವರ್ಷ ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಲೇ ಇರುತ್ತದೆ. ಸರ್ಕಾರ ಇಡೀ ಗ್ರಾಮ ಪಂಚಾಯತಿಯನ್ನೇ ಸ್ಥಳಾಂತರ ಮಾಡಲಿ ಎಂದು ತನುಜಾ ಅವರು ಹೇಳಿದ್ದಾರೆ.

ಹೈಡಲ್ ಪವರ್ ಉತ್ಪಾದಿಸುವ ಸಲುವಾಗಿ ಕಾಳಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಆದರೆ ಹತ್ತಿರದಲ್ಲಿ ಕೈಗಾ ಅಣುಸ್ಥಾವರ ಕಾರ್ಯನಿರ್ವಹಿಸುತ್ತಿರುವುದರಿಂದ ಕದ್ರಾ ಅಣೆಕಟ್ಟೆಯಲ್ಲಿರುವಂತಹ ಜಲವಿದ್ಯುತ್ ಘಟಕವನ್ನು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.

ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅವರು ಮಾತನಾಡಿ, ಕೆಪಿಸಿಎಲ್ ಅಧಿಕಾರಿಗಳು ಯಾವುದೇ ಮುನ್ಸೂಚನೆಗಳನ್ನು ನೀಡದೆ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.ಹಾಗೂ ಮಲ್ಲಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಅಂಕೋಲಾದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಾನು ಪ್ರಯತ್ನಿಸಿದ್ದೆ, ಆದರೆ, ಅಲ್ಲಿ ಹೆಚ್ಚಿನ ಭದ್ರತೆಯಿದ್ದರಿಂದ ಹತ್ತಿರ ಕೂಡ ಹೋಗಲು ಸಾಧ್ಯವಾಗಲಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Most Popular

Recent Comments