ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಆಸ್ತಿ ಮಾರಿದ ಹಣದ ವಿಚಾರವಾಗಿ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಇಬ್ಬರು ಸಾವಿಗೀಡಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.
ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 12 ಲಕ್ಷ ರೂ. ಹಣಕಾಸಿನ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ. ಪಾಪಿ ಪುತ್ರ ಆಸ್ತಿ ಹಣಕ್ಕಾಗಿ ತನ್ನ ತಂದೆಯನ್ನೇ ಕೊ ಲೆ ಮಾಡಿದ್ದಾನೆ. ಜೊತೆಯಲ್ಲಿ ಆಸ್ತಿ ಮಾರಾಟದ ಮಧ್ಯವರ್ತಿಯನ್ನು ಕೊಂದುಹಾಕಿದ್ದಾನೆ. ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸಂತೋಷ್ ನ ತಂದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಈ ವೇಳೆ ಸಂತೋಷ್ ತನ್ನ ತಾಯಿಯ ಮೇಲೂ ಗಂಭೀರವಾಗಿ ಹಲ್ಲೆ ಮಾಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂದೆಯನ್ನೇ ಕೊಂದ ಈ ಪಾಪಿಯ ಹೆಸರು ಸಂತೋಷ್. ತಂದೆಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಕಾರ್ತಿಕ್ (45) ಎಂಬವರು ಮಧ್ಯಸ್ಥಿಕೆ ವಹಿಸಿದ್ದರು. ಆಸ್ತಿ ಮಾರಿ ಬಂದ ಹಣದಲ್ಲಿ ಪಾಲಿನ ವಿಚಾರವಾಗಿ ಜಗಳ ಹುಟ್ಟಿಕೊಂಡಿದ್ದು, ಈ ಸಂದರ್ಭದಲ್ಲಿ ಸಂತೋಷ್ ತನ್ನ ತಂದೆ ಭಾಸ್ಕರ್ ಗೌಡ, ತಾಯಿ ಹಾಗೂ ಮಧ್ಯವರ್ತಿ ಕಾರ್ತಿಕ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಮೂವರಿಗೂ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ತಂದೆ ಹಾಗೂ ಕಾರ್ತಿಕ್ ಸಾವಿಗೀಡಾಗಿದ್ದಾರೆ. ತಾಯಿ ಸ್ಥಿತಿ ಗಂಭೀರವಾಗಿದೆ. ಮಚ್ಚಿನಿಂದ ಹಲ್ಲೆ ನಡೆಸಿ ಸಂತೋಷ್ ನೇರವಾಗಿ ಠಾಣೆಗೆ ಹೋಗಿದ್ದಾನೆ. ಈ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.