Sunday, June 4, 2023
Homeಫೋಕಸ್ ಸ್ಟೋರಿದೀಪಾವಳಿ ಹಬ್ಬದ ನೆಪದಲ್ಲಿ ಪ್ರಯಾಣಿಕರನ್ನು ದಿವಾಳಿಯಾಗಿಸುತ್ತಿರುವ ಖಾಸಗಿ ಬಸ್ ಸಂಸ್ಥೆಗಳು | ಕಣ್ಮುಚ್ಚಿ ಕುಳಿತ ಸಾರಿಗೆ...

ದೀಪಾವಳಿ ಹಬ್ಬದ ನೆಪದಲ್ಲಿ ಪ್ರಯಾಣಿಕರನ್ನು ದಿವಾಳಿಯಾಗಿಸುತ್ತಿರುವ ಖಾಸಗಿ ಬಸ್ ಸಂಸ್ಥೆಗಳು | ಕಣ್ಮುಚ್ಚಿ ಕುಳಿತ ಸಾರಿಗೆ ಇಲಾಖೆ

ನೀವು ಬೇರೆ ಊರಿನಲ್ಲಿ ಉದ್ಯೋಗ ನಿಮಿತ್ತ ವಾಸವಿದ್ದು ನಿಮಗೆ ಕಂಪನಿ ದೀಪಾವಳಿ ಬೋನಸ್ ನೀಡಿದೆಯಾ? ಹಾಗಾದರೆ ಹೆಚ್ಚು ಖುಷಿ ಪಡುವಂತಿಲ್ಲ ಏಕೆಂದರೆ ನಿಮ್ಮ ಬೋನಸ್ ವಸೂಲಿಗೆ ಖಾಸಗಿ ಬಸ್ ಸಂಸ್ಥೆಗಳು ಕಾದು ಕುಳಿತಿವೆ, ಇನ್ನು ಪತ್ರಿಕೆ ಟಿವಿಗಳಲ್ಲಿ ಖಡಕ್ ಎಚ್ಚರಿಕೆ ನೀಡುವ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳು ಕಂಡೂ ಕಾಣದಂತ ಪೇಪರ್ ಹುಲಿಗಳಂತಾಗಿದ್ಧಾರೆ ಅಷ್ಟೇ.

ಸಾಮಾನ್ಯ ದಿನಗಳಲ್ಲಿ 500ರಿಂದ 600 ಹಾಗೂ ವೀಕೆಂಡ್ ದಿನಗಳಲ್ಲಿ 600ರಿಂದ 800ರೂ ಇರುವ ಬಸ್ ದರ ಈಗ ಏಕಾಏಕಿ 1200ರಿಂದ 2000 ವರೆಗೆ ತಲುಪಿದೆ.

ಎಲ್ಲರಿಗೂ ಅನಿವಾರ್ಯತೆ ಇರುವುದರಿಂದ ಮೂರು ಪಟ್ಟು ದರ ತೆತ್ತು ಪ್ರಯಾಣಿಸುತ್ತಿದ್ದರೆ, ಕೆಲವರು ಪರಿಚಯಸ್ಥರ ವಾಹನ ಯಾವುದಾದರೂ ಸಿಗಬಹುದಾ ಎಂದು ನೋಡುತ್ತಿದ್ದಾರೆ. ಇನ್ನೂ ಹಲವರು ಬಸ್ಸಿಗೆ ಕೊಡಲು ಅಷ್ಟೆಲ್ಲಾ ದುಡ್ಡಿಲ್ಲ ಎಂದು ಹಬ್ಬಕ್ಕೆ ಊರಿಗೆ ತೆರಳದೆ ಮಹಾನಗರಗಳಲ್ಲೇ ಉಳಿದಿದ್ದಾರೆ.

ವ್ಯವಹಾರ ಧರ್ಮ ಪಾಲಿಸಿ:

ಯಾವುದಕ್ಕೇ ಆದರೂ ವ್ಯಾಪಾರ ಧರ್ಮ ಎಂದಿರುತ್ತದೆ, ಕೆಲವು ಸಂದರ್ಭಗಳಲ್ಲಿ ಬಸ್ ಗಳು ಖಾಲಿ ಓಡುತ್ತವೆ ಹಾಗಾಗಿ ಹಬ್ಬದ ದಿನಗಳಲ್ಲಿ ಸ್ವಲ್ಪ ಮಟ್ಟಿನ ದರ ಏರಿಕೆ ಸಾಮಾನ್ಯ ಆದರೆ ಇಂತಹ ಸಂದರ್ಭ ಉಪಯೋಗಿಸಿಕೊಂಡು ಮೂರು, ನಾಲ್ಕು ಪಟ್ಟು ದರ ವಸೂಲಾತಿ ಮಾಡುವುದು ವ್ಯಾಪಾರ ಧರ್ಮವಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ತಮ್ಮ ಕುಟುಂಬಕ್ಕೆ ಒಂದೆರಡು ಬಿಟ್ಟಿ ಸೀಟು ಪಡೆದುಕೊಂಡಿದ್ದಾರೇನೋ ಎನಿಸುತ್ತಿದೆ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ.

ಶೃಂಗೇರಿ ಇಂದ ಬೆಂಗಳೂರಿಗೆ ಎರಡು ಸಾವಿರ: ಸಾಮಾನ್ಯ ದಿನಗಳಲ್ಲಿ ಇಲ್ಲದ GRP Travels ಎಂಬ ಬಸ್ ಒಂದು ಹಬ್ಬದ ದಿನದಂದು ಸರ್ವೀಸ್ ಕೊಡುತ್ತಿದ್ದು ಶೃಂಗೇರಿ ಇಂದ ಬೆಂಗಳೂರಿಗೆ ಬರೊಬ್ಬರಿ 2000 ದರ ನಿಗದಿ ಮಾಡಿದೆ.

ಶೃಂಗೇರಿಯಿಂದ ಬೆಂಗಳೂರು ಹಾಗೂ ಬೆಂಗಳೂರು ಟು ಶೃಂಗೇರಿ ಸಾಮಾನ್ಯ ದರ 600 – 700ರೂಗಳು.

ಹಬ್ಬದ ದರ:

  • GRP Travels ₹2,000
  • LV Travels ₹1,599
  • SRS Travels ₹1,499
  • Sugama Travels ₹1,300
  • Navadurga ₹1,000

ತೀರ್ಥಹಳ್ಳಿಯಿಂದ ಬೆಂಗಳೂರು ಹಾಗೂ ಬೆಂಗಳೂರು ಟು ತೀರ್ಥಹಳ್ಳಿ ಸಾಮಾನ್ಯ ದರ 600 – 700

ಹಬ್ಬದ ದರ:

  • Sri balaji holidays ₹1,600
  • Sri Sai ₹1,100
  • Sri Durgamba travels ₹1550
  • SRS ₹1,500

ಚಿಕ್ಕಮಗಳೂರು ಟು ಬೆಂಗಳೂರು ಹಾಗೂ ಬೆಂಗಳೂರು ಟು ಚಿಕ್ಕಮಗಳೂರು ಸಾಮಾನ್ಯ ದರ 500 – 600ರೂಗಳು.

ಹಬ್ಬದ ದರ:

  • AG Roadlines ₹1,500
  • Cauvery ₹1,199
  • LV travels ₹1,550

ಮಡಿಕೇರಿ ಟು ಬೆಂಗಳೂರು ಹಾಗೂ ಬೆಂಗಳೂರು ಟು ಮಡಿಕೇರಿ ಸಾಮಾನ್ಯ ದರ 500-600ರೂಗಳು.

ಹಬ್ಬದ ದರ:

  • Asian ₹1670
  • Manu tourist ₹1200

ಪರವಾನಗಿ ರದ್ದು ಮಾಡುವ ಎಚ್ಚರಿಕೆ: ಸಾರಿಗೆ ಸಚಿವ ಶ್ರೀರಾಮುಲು ದುಪ್ಪಟ್ಟು ಹಣ ವಸೂಲಿ ಮಾಡುವ ಬಸ್ ಗಳ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ. ಆದರೆ ಕಳೆದ ವರ್ಷ ಸಹ ಇಂತಹುದೇ ಎಚ್ಚರಿಕೆ ನೀಡಿ 60 ಪ್ರಕರಣ ದಾಖಲಿಸಲಾಗಿತ್ತು ಆದರೆ ಇಂದಿಗೂ ಅವುಗಳ ಕುರಿತು ಕಠಿಣ ಕ್ರಮ ಕೈಗೊಂಡಿಲ್ಲ.

ಈ ವಸೂಲಿ ಹೀಗೆಯೇ ಮುಂದುವರೆದರೆ ಬದುಕು ಜಟಕಾ ಬಂಡಿ ಎಂಬಂತೆ ನೀವು ಮತ್ತೆ ಜಟಕಾ ಬಂಡಿ ಏರುವ ಸಂದರ್ಭ ಬಂದರೂ ಬರಬಹುದು.

Most Popular

Recent Comments