Sunday, June 4, 2023
Homeಫೋಕಸ್ ಸ್ಟೋರಿಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ, ರೈತ ಕಂಗಾಲು

ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ, ರೈತ ಕಂಗಾಲು

(ನ್ಯೂಸ್ ಮಲ್ನಾಡ್ ವರದಿ)ಜಾನುವಾರುಗಳಿಗೆ ಅಂಟಿರುವ ಚರ್ಮಗಂಟು ರೋಗ ಎಲ್ಲೆಡೆ ಬಹಳಷ್ಟು ವ್ಯಾಪಿಸಿದ್ದು ಇದು ರೈತಾಪಿ ವರ್ಗವನ್ನು ಆತಂಕಕ್ಕೀಡುಮಾಡಿದೆ.

ರೋಗಪೀಡಿತ ಜಾನುವಾರುಗಳಿಗೆ ಆರಂಭದಲ್ಲಿ ಮೈಯಲ್ಲಿ ಗಂಟು ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ಅದು ಮೈತುಂಬಾ ಆವರಿಸಿಕೊಳ್ಳುತ್ತದೆ, ನಂತರ ಆ ಗಂಟುಗಳು ಒಡೆದು ಅದರಿಂದ ಕೀವು ಬರಲು ಪ್ರಾರಂಭವಾಗುತ್ತದೆ. ಜ್ವರ, ಕಣ್ಣು ಕಿವಿ ಮೂಗು ಸೋರುವುದು ನಂತರ ಮೇವು ತಿನ್ನುವುದು ಕಡಿಮೆಯಾಗುತ್ತದೆ, ಅದರಿಂದಾಗಿ ಹಾಲು ನೀಡುವ ಪ್ರಮಾಣ ಸಹ ಕಡಿಮೆಯಾಗುತ್ತದೆ.
ಕೆಲವೊಮ್ಮೆ ದೇಹದಲ್ಲಿ ಗಂಟು ಕಾಣಿಸಿಕೊಳ್ಳದೆ ಸಹ ಇರಬಹುದು, ಆಹಾರ ತಿನ್ನದೇ ಇರುವುದು, ಮೈ ಊತ, ನಿಲ್ಲಲು ನಡೆಯಲು ಆಗದೆ ಇರುವುದು ಸಹ ರೋಗಲಕ್ಷಣಗಳಾಗಿರುವ ಸಾಧ್ಯತೆ ಇದೆ.
ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಜಾನುವಾರು ಸಾವನ್ನಪ್ಪುವ ಸಾಧ್ಯತೆ ಕಡಿಮೆ ಇರುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವುದರಿಂದ ರೋಗವನ್ನು ತಡೆಯಬಹುದು.

ರೋಗ ಬರುವುದಕ್ಕೂ ಮೊದಲು ನಿಯಂತ್ರಣ ಸಾಧ್ಯ:
ಚರ್ಮಗಂಟು ರೋಗ ನಿರೋಧಕ ಲಸಿಕೆ ಹಾಕುವ ಮೂಲಕ ಇದನ್ನು ತಡೆಯಬಹುದುದು, ಆದರೆ ಮಾಹಿತಿ ಕೊರತೆಯಿಂದ ಬಹಳಷ್ಟು ಜನರು ಇದನ್ನು ಹಾಕಿಸಿಲ್ಲ.

ಸೊಳ್ಳೆಗಳಿಂದ ಹರಡುತ್ತದೆ:
ಈ ರೋಗ ಹರಡಲು ಸೊಳ್ಳೆಗಳೇ ಪ್ರಮುಖ ಕಾರಣ, ಸೊಳ್ಳೆ ನಿಯಂತ್ರಣ ರೋಗ ತಡೆಗಟ್ಟಲು ಬಹುಮುಖ್ಯ ಪಾತ್ರ ವಹಿಸುತ್ತದೆ, ಕೊಟ್ಟಿಗೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು, ಸಾಧ್ಯವಾದರೆ ದಿನಕ್ಕೆರಡು ಬಾರಿ ಸ್ವಚ್ಛ ಮಾಡಬೇಕು. ಸಂಜೆ ನಂತರ ಕೊಟ್ಟಿಗೆಯಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹೊಗೆ ಹಾಕುವ ಮೂಲಕ ತಡೆಗಟ್ಟಬಹುದು.
ಅಕಸ್ಮಾತ್ ಒಂದು ಕೊಟ್ಟಿಗೆಯಲ್ಲಿ ಒಂದು ಹಸುವಿಗೆ ರೋಗ ಬಂದರೆ, ಆಗ ಉಳಿದ ಹಸುಗಳಿಗೆ ಲಸಿಕೆ ಹಾಕಿದರೆ ಹೆಚ್ಚು ಪ್ರಯೋಜನವಿಲ್ಲ ಮೊದಲೇ ಹಾಕಿಸಬೇಕು ಎನ್ನುತ್ತಾರೆ ತಜ್ಞರು.

ರೋಗ ನಿರೋಧಕ ಶಕ್ತಿ ಕಡಿಮೆ ಇರುವ ದನಗಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ, ಉಳಿದಂತೆ ಮನೆಮದ್ದು ಮಾಡಿದಲ್ಲಿ ಗುಣವಾಗುವ ಎಲ್ಲಾ ಸಾಧ್ಯತೆಗಳಿವೆ.

ಈ ರೋಗಕ್ಕೆ ನಿರ್ದಿಷ್ಟವಾದ ಔಷಧವಿಲ್ಲ ಆದರೆ ಆರೋಗ್ಯ ಇಲಾಖೆಯ ಸೂಚನೆಯಂತೆ ಕೆಲವು ಮನೆಮದ್ದುಗಳನ್ನು ಮಾಡುವ ಮೂಲಕ ರೋಗವನ್ನು ನಿವಾರಿಸಬಹುದು, ಅವುಗಳೆಂದರೆ.

  • ವೀಳ್ಯದ ಎಲೆ-10
  • ಉಪ್ಪು -10 ಗ್ರಾಂ
  • ಕಾಳು ಮೆಣಸು – 10 ಗ್ರಾಂ
  • ಬೆಲ್ಲ -50 ಗ್ರಾಂ

ಈ ಸಾಮಾಗ್ರಿಗಳನ್ನು ರುಬ್ಬಿ ದಿನಕ್ಕೆ 2 ಬಾರಿ ತಿನ್ನಿಸುವುದು

  • ಮೆಹಂದಿಸೊಪ್ಪು -1 ಹಿಡಿ
  • ಅರಿಶಿಣ – 20 ಗ್ರಾಂ
  • ತುಳಸಿ ಸೊಪ್ಪು – 1 ಹಿಡಿ
  • ಒಳ್ಳೆ ಬೇವಿನ ಸೊಪ್ಪು – 1 ಹಿಡಿ
  • ಬೆಳ್ಳುಳ್ಳಿ – 10 ಎಸಳು

ಈ ಸಾಮಾಗ್ರಿಗಳನ್ನು 500 ಮಿ.ಲೀ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ತಣ್ಣಗೆ ಮಾಡಿ ಗಾಯಗಳಿಗೆ ದಿನಕ್ಕೆ 3 ಬಾರಿ ಹಚ್ಚಬೇಕು.

ಹೀಗೆ ಒಂದು ವಾರದಿಂದ ಹದಿನೈದು ದಿನಗಳ ಕಾಲ ಮಾಡಿದಲ್ಲಿ ಕಾಯಿಲೆ ಗುಣಮುಖವಾಗುವುದು.

ಮನುಷ್ಯರಿಗೆ ಹರಡುತ್ತದೆಯೇ?;
ಇಲ್ಲ, ಇದು ಮನುಷ್ಯರಿಗೆ ಹರಡುವ ಕಾಯಿಲೆ ಆಗಿರುವುದಿಲ್ಲ

ಹಾಲಿನಿಂದ ಹರಡುವುದಿಲ್ಲ:

ಈ ರೋಗ ಬಂದ ದನಗಳ ಹಾಲನ್ನು ಕಾಯಿಸಿ ಆರಿಸಿ ಬಳಸಿದಲ್ಲಿ ಅದರಿಂದ ಕುಡಿದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ,

ತಲೆನೋವಾದ ಸಿಬ್ಬಂದಿ ಕೊರತೆ:

ಒಂದೆಡೆ ಕಾಲುಬಾಯಿ ರೋಗ ಸೇರಿದಂತೆ ಜಾನುವಾರುಗಳಿಗೆ ಬರುತ್ತಿರುವ ರೋಗಗಳನ್ನು ತಡೆಗಟ್ಟಲು ಸವಾಲಾಗಿದ್ದು, ಮತ್ತೊಂದೆಡೆ ಪಶುವೈದ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ವೈದ್ಯರು ಒಳಗೊಂಡಂತೆ ಬಹಳಷ್ಟು ಹುದ್ದೆಗಳು ಖಾಲಿ ಇವೆ, ಇದರಿಂದಾಗಿ ಈಗಿರುವ ಸಿಬ್ಬಂದಿಗಳಿಗೆ ಅತಿಯಾದ ಕಾರ್ಯ ಒತ್ತಡವಿದ್ದು, ಎಲ್ಲೆಡೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಇದು ಸಹ ರೋಗ ಹೆಚ್ಚು ಹರಡಲು ಒಂದು ಕಾರಣ

ಉದಾಹರಣೆಗೆ ಶೃಂಗೇರಿಯಲ್ಲಿ 6 ವೈದ್ಯರು ಇರಬೇಕೆಂಬ ಆದೇಶವಿದೆ ಆದರೆ ಕೇವಲ ಒಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ಪಶುವೈದ್ಯ ಇನ್ಸ್ಪೆಕ್ಟರ್, ಪಶುವೈದ್ಯ ಇನ್ಸ್ಪೆಕ್ಟರ್, ಸಹಾಯಕರು, ಸೇರಿದಂತೆ ಅರ್ಧದಷ್ಟು ಸಿಬ್ಬಂಧಿಗಳು ಸಹ ಸೇವೆಗೆ ಲಭ್ಯವಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಸರ್ಕಾರ ಎಚ್ಚೆತ್ತು ಸಿಬ್ಬಂದಿ ನೇಮಕ ಮಾಡಬೇಕಾಗಿದೆ.

ಮೆಡಿಸಿನ್ ಕೊರತೆ:

ಇನ್ನು ಇತ್ತೀಚೆಗೆ ಕೆಲವು ತಿಂಗಳಿಂದ ಪಶುವೈದ್ಯ ಆಸ್ಪತ್ರೆಗಳಲ್ಲಿ ಅವಶ್ಯಕ ಮೆಡಿಸಿನ್ ಸಿಗುತ್ತಿಲ್ಲ, ಮೆಡಿಕಲ್ ಗೆ ಬರೆದು ಕೊಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಈ ಕುರಿತು ಸಾಕಷ್ಟು ರೈತರು ನ್ಯೂಸ್ ಮಲ್ನಾಡ್ ಗೆ ಸಹ ಸಂಪರ್ಕ ಮಾಡಿದ್ದು, ಆಸ್ಪತ್ರೆಯಲ್ಲಿ ಕೇಳಿದರೆ ಸಪ್ಲೈ ಇಲ್ಲ ಎಂದು ಮೆಡಿಕಲ್ ಗೆ ಬರೆದು ಕೊಡುತ್ತಿದ್ದಾರೆ ಎಂದು ದೂರಿದ್ದರು.
ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಸಂಸದರು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಪರಿಹರಿಸಬೇಕಿದೆ.

Most Popular

Recent Comments