Sunday, June 4, 2023
Homeಫೋಕಸ್ ಸ್ಟೋರಿಕಳಸ: ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೇ ಸಂಚಾರಕ್ಕೆ ಪರದಾಡುವ ಗ್ರಾಮಸ್ಥರು, ಇನ್ನಾದರೂ ದೊರಕಬೇಕಿದೆ ಶಾಶ್ವತ ಪರಿಹಾರ

ಕಳಸ: ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೇ ಸಂಚಾರಕ್ಕೆ ಪರದಾಡುವ ಗ್ರಾಮಸ್ಥರು, ಇನ್ನಾದರೂ ದೊರಕಬೇಕಿದೆ ಶಾಶ್ವತ ಪರಿಹಾರ

ಕಳಸ: (ನ್ಯೂಸ್ ಮಲ್ನಾಡ್ ವರದಿ) ತುರ್ತು ಅಥವಾ ಇನ್ನಾವುದೇ ಅಗತ್ಯ ಸಂದರ್ಭಗಳಲ್ಲಿ ಪ್ರಮುಖವಾಗಿ ಸಂಚರಿಸಲು ಅಗತ್ಯವಿರುವ ಮೂಲಭೂತ ಸೌಕರ್ಯ ರಸ್ತೆಗಾಗಿ ಜನರು ಪರಿತಪಿಸುತ್ತಾ, ಅಧಿಕಾರಿಗಳನ್ನು ಮನವಿ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊಸೂರು ಗ್ರಾಮದ ಜನರು ನಿತ್ಯ ಸಂಚಾರ ಮಾಡಲು ಸರಿಯಾದ ರಸ್ತೆ ಇಲ್ಲದೇ ಪರದಾಡುವ ಸ್ಥಿತಿ ತಲೆದೊರಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ಪ್ರತೀ ವರ್ಷದ ಮಳೆಗಾಲದ ಅವಧಿಯಲ್ಲಿ ಇಲ್ಲಿನ ಜನರಿಗೆ ತೀವ್ರ ರಸ್ತೆ ಸಮಸ್ಯೆ ಉಂಟಾಗುತ್ತದೆ, ಸಂಪೂರ್ಣ ವಾಗಿ ರಸ್ತೆಯನ್ನು ದುರಸ್ತಿ ಮಾಡಲು ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಈ ರಸ್ತೆಗೆ ಪಂಚಾಯತ್ ವತಿಯಿಂದ ತಾತ್ಕಲಿಕವಾಗಿ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು – ಕವೀಶ್, ಕಳಸ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ.

ಕಳಸ ತಾಲೂಕಿನ ಹೊಸೂರು ಗ್ರಾಮದ ಜನ ತಮ್ಮ ಊರಿಗೆ ತಾವೇ ರಸ್ತೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ರಸ್ತೆ ಕೊಚ್ಚಿ ಹೋಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ, ಈ ರಸ್ತೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜನರು ಒತ್ತಾಯ ನಡೆಸುತ್ತಿದ್ದರೂ ಕೂಡ ಯಾವುದೇ ಪರಿಹಾರಕ್ರಮಗಳು ಅಥವಾ ವ್ಯವಸ್ಥೆಗಳನ್ನು ಕಾಣದೇ ಇರುವುದು ಅತ್ಯಂತ ದುರಾದೃಷ್ಟಕರ ಸಂಗತಿ.

ಹೊಸೂರು ಗ್ರಾಮದಲ್ಲಿ ಸುಮಾರು 25 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕರು ಆದಿವಾಸಿಗಳು. ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳು ಕೊಚ್ಚಿ ಹೋಗಿ ಇವರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಗೆ ಸುತ್ತಮುತ್ತಲಿನ ಗುಡ್ಡದ ಮಣ್ಣು ಜರಿದು ರಸ್ತೆಯೇ ಇಲ್ಲದಂತಾಗುತ್ತದೆ. ಈ ಹೊಸೂರು ಗ್ರಾಮದಿಂದ ಮುಖ್ಯ ರಸ್ತೆಗೆ ಸುಮಾರು ನಾಲ್ಕೈದು ಕಿಮೀ ದೂರವಿದ್ದು, ಇಲ್ಲಿನ ಜನರು ನಡೆದುಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಈ ಮಾರ್ಗ ಕಲ್ಕೋಡು, ಕಾರ್ಲೆ, ಅಬ್ಬಿಕೂಡಿಗೆ, ಹೊರನಾಡು ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆಯಾದರೂ ರಸ್ತೆ ಸರಿ ಪಡಿಸಲು ಅಧಿಕಾರಿವರ್ಗ, ಜನಪ್ರತಿನಿಧಿಗಳು ಮುಂದೆ ಬಾರದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕೆ ಸಂಚಾರ ಕಡಿಮೆಯಾಗಿದೆ. ಇಲ್ಲಿನ ಜನರು ಅನಿವಾರ್ಯವಾಗಿ ಓಡಾಡಲೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ, ಬೇರೆ ಗತಿ ಅಥವಾ ಪರ್ಯಾಯ ಮಾರ್ಗವಿಲ್ಲದೇ ಇಲ್ಲಿ ಸಾಗಲೆಬೇಕಿದೆ.

ಇಲ್ಲಿನ ಜನರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ತಾವು ಬೆಳೆದ ಭತ್ತ, ಅಡಕೆ, ಕಾಫಿ, ಮೆಣಸು ಮಾರುಕಟ್ಟೆಗೆ ಸಾಗಾಟ ಮಾಡಲು ಸರಿಯಾದ ರಸ್ತೆ ಇಲ್ಲದೆ ರೈತರೇ ಐದು ಕಿಮೀ ಗಳಷ್ಟು ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಜಮೀನಿಗೆ ತೆರಳಲು ಕಷ್ಟಪಡುವ ಪರಿಸ್ಥಿತಿ. ಮಳೆಗಾಲದಲ್ಲಂತೂ ರಸ್ತೆ ಇಲ್ಲದೆ ಮಕ್ಕಳು, ವಯೋವೃದ್ಧರು, ಮಹಿಳೆಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗೌರವಾನ್ವಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಈ ಕುರಿತು ಸೂಕ್ತವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ.

Most Popular

Recent Comments