Saturday, May 18, 2024
Homeಮಲ್ನಾಡ್ ಬುಲೆಟಿನ್ಮಲೆನಾಡಿನ ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಬುಲೆಟಿನ್

ಮಲೆನಾಡಿನ ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಬುಲೆಟಿನ್

ಚಿಕ್ಕಮಗಳೂರು:

ಪುತ್ತೂರು: ಪಡುಮಲೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ

ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮದ ಪಡುಮಲೆಯ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಫೆ.25ರಿಂದ ಮಾರ್ಚ್ 6ರ ತನಕ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ತಿಳಿಸಿದರು. ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಜನವರಿಯಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿತ್ತು. 6 ಕೋಟಿಯಷ್ಟು ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದಿವೆ. ಕಗ್ಗಲ್ಲು, ಕೆಂಪು ಪಾಲಿಶು ಕಲ್ಲುಗಳಿಂದ ಕಾಷ್ಠಶಿಲ್ಪ ಕೆತ್ತನೆಗಳಿರುವ ಸಾಗುವಾನಿ ಮರದ ಮಾಡಿಗೆ ತಾಮ್ರದ ಹೊದಿಕೆಯಿರುವ ಗರ್ಭಗುಡಿ, ಸಾಗುವಾನಿ ಮರದ ಸುಂದರ ಕಾಷ್ಠ ಕೆತ್ತನೆಗಳುಳ್ಳ ಹಾಗೂ ತಾಮ್ರ ಹೊದಿಕೆಯ ತೀರ್ಥ ಮಂಟಪ, ಸುತ್ತು ಪೌಳಿಯಲ್ಲಿ ಮಹಾಗಣಪತಿ ಗುಡಿ ನಿರ್ಮಾಣಗೊಂಡಿದೆ. ದೇವಳದ ಎದುರು ಭಾಗದಲ್ಲಿ ಎರಡು ಅಂತಸ್ತಿನ ರಾಜಗೋಪುರ, ಸುತ್ತುಪೌಳಿಗೆ ಪಾರಂಪರಿಕ ರೂಪು ನೀಡಲಾಗಿದೆ. ರಾಜಾಂಗಣದಲ್ಲಿ ಶಾಸ್ತಾರ ಗುಡಿ ನಿರ್ಮಿಸಲಾಗಿದೆ ಎಂದರು. 2.5 ಕೋಟಿಗೂ ಅಧಿಕ ಮೌಲ್ಯದ ಮರಗಳನ್ನು ಬಳಸಿಕೊಂಡು, ಸುಂದರ ಕೆತ್ತನೆಯೊಂದಿಗೆ ಕ್ಷೇತ್ರಕ್ಕೆ ಭವ್ಯತೆಯ ಸ್ಪರ್ಶ ನೀಡಲಾಗಿದೆ. ನಾಗದೇವರು ಮತ್ತು ನಾಗ ಯಕ್ಷಿಯ ನಾಗನ ಕಟ್ಟೆ ನಿರ್ಮಾಣವೂ ಆಗಿದೆ. ಒಳಾಂಗಣ ಮತ್ತು ಗೋಪುರದ ನೆಲಕ್ಕೆ ಗ್ರಾನೈಟ್ ಹಾಸಲಾಗಿದೆ. ದೇವಳದ ಈಶಾನ್ಯ ದಿಕ್ಕಿನಲ್ಲಿರುವ ತೀರ್ಥ ಬಾವಿಗೆ ಗ್ರಾನೈಟ್ ಅಳವಡಿಸಿ ಹೊಸ ರೂಪ ನೀಡಲಾಗಿದೆ. ಹೊರಾಂಗಣದ ನೈರುತ್ಯ ದಿಕ್ಕಿನಲ್ಲಿ ವಸಂತ ಮಂಟಪ ನಿರ್ಮಿಸಲಾಗಿದೆ. ದಕ್ಷಿಣ ಭಾಗದಲ್ಲಿ ಕಚೇರಿ ಕೊಠಡಿ, ಉತ್ತರದಲ್ಲಿ ಉಗ್ರಾಣ ಕೊಠಡಿ ಅಲ್ಲದೆ ನೈವೇದ್ಯ ಕೊಠಡಿ, ತಂತ್ರಿಗಳ ಕೊಠಡಿ, ಲಾಕರ್ ವ್ಯವಸ್ಥೆಯನ್ನೊಳಗೊಂಡ ಭದ್ರತಾ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ.

ಕೊಪ್ಪ: ಪ್ರಾಥಮಿಕ ಆರೋಗ್ಯ ಕೇಂದ್ರವು ಮೇಲ್ದರ್ಜೆ ಗೇರಿಸಲು ಆಗ್ರಹಿಸಿ ಪ್ರತಿಭಟನೆ

ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯ ಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರವು ಮೇಲ್ದರ್ಜೆ ಗೇರಿಸಲು ಆಗ್ರಹಿಸಿ ಫೆ.20ರ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೇಗುಂದಾ ಕಸಬಾ ಹೋಬಳಿ ಸಮುದಾಯ ಆಸ್ಪತ್ರೆ ಹೋರಾಟ ಸಮಿತಿ ಹೇಳಿದೆ. ಮೇಗುಂದಾ ತಾಲೂಕಿನ ಅತೀ ದೊಡ್ಡ ಹೋಬಳಿಯಾಗಿದ್ದು ಹಲವು ಕುಗ್ರಾಮಗಳನ್ನು ಒಳಗೊಂಡಿದೆ. ಬಹುತೇಕ ಕೃಷಿಕರು, ಕೂಲಿ ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನ ವಾಸವಾಗಿದ್ದಾರೆ. ಆರೋಗ್ಯ ಹದಗೆಟ್ಟಲ್ಲಿ ಅಥವಾ ಅಪಘಾತಗಳಾದಾಗ ಚಿಕಿತ್ಸೆಗೆ ಮಂಗಳೂರು, ಉಡುಪಿ, ಮಣಿಪಾಲ ಅಥವಾ ಶಿವಮೊಗ್ಗಕ್ಕೆ ಹೋಗುವ ಅನಿವಾರ್ಯತೆ ಇದ್ದು ಕೊರೊನಾ ಸಮಯದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಯಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕೆಂಬ ಜನರ ಬಹುದಿನದ ಬೇಡಿಕೆ ಫಲವಾಗಿ ಸುಮಾರು 14 ಕೋಟಿ ರೂ ಮಂಜೂರಾಗಿದೆ. ಆದರೆ ಆಸ್ಪತ್ರೆ ಕಾಮಗಾರಿ ಆರಂಭಿಸಲು ಸೂಕ್ತ ಸ್ಥಳದ ಕೊರತೆ ಎದುರಾಗಿದೆ. ಕಳೆದ 10 ವರ್ಷಗಳ ಹಿ೦ದೆ ಜಿಲ್ಲಾಧಿಕಾರಿ ಇಲ್ಲಿನ ಆರೋಗ್ಯ ಕೇಂದ್ರಕ್ಕಾಗಿ ಜಯಪುರ ಗ್ರಾಮದ ಸರ್ವೆ ನಂ. 28,24 ರಲ್ಲಿ 3 ಎಕರೆ ಭೂಮಿ ಮಂಜೂರು ಮಾಡಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲಾಧಿಕಾರಿಗಳ ಆದೇಶ ಆದೇಶವಾಗಿಯೇ ಉಳಿದಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ, ರಾಜಕಾರಣಿಗಳ ಇಚ್ಛಾಸಕ್ತಿ ಕೊರತೆಯಿಂದ ಇಂದು ಮಲೆನಾಡಿನಲ್ಲಿ ಸರ್ಕಾರಿ ಕಟ್ಟಡ ನಿರ್ಮಿಸಲು ಒಂದಡಿ ಭೂಮಿ ಇಲ್ಲದಿರುವುದು ವಿಪರ್ಯಾಸವೇ ಸರಿ. ಸರ್ಕಾರಿ ದಾಖಲೆಯಲ್ಲಿ ಪ್ರತೀ ಸರ್ವೆ ನಂಬರ್‌ನಲ್ಲೂ ಹತ್ತಾರು ಎಕರೆ ಕಂದಾಯ ಭೂಮಿ ಇದೆ ಎಂಬ ಮಾಹಿತಿ ಇದೆ. ಇರುವ ಭೂಮಿಯನ್ನು ಅರಣ್ಯ ಇಲಾಖೆ ತನ್ನದೆಂದು ದಾಖಲೆ ಮಾಡಿಕೊಂಡಿದೆ. ಬಡವರ ನಿವೇಶನಕ್ಕೆ ಹತ್ತಾರು ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದ್ದರು. ಅರಣ್ಯ ಇಲಾಖೆ ಅದನ್ನು ಈವರೆಗೂ ಬಿಟ್ಟುಕೊಟ್ಟಿಲ್ಲ, ಅಧಿಕಾರಿಗಳು ಬಿಡಿಸುವ ಪ್ರಯತ್ನ ಮಾಡಿಲ್ಲ. ಆಸ್ಪತ್ರೆ ನಿರ್ಮಿಸಲು ಜಾಗ ಸಿಗದೆ ಹೋದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ. ಈ ಕೂಡಲೇ ಆಸ್ಪತ್ರೆ, ಭೂಮಿ ಗುರುತಿಸಿ ಕಾಮಗಾರಿ ಆರಂಭಿಸದೆ ಇದ್ದಲ್ಲಿ ಆಸ್ಪತ್ರೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಆಸ್ಪತ್ರೆ ಹೋರಾಟ ಸಮಿತಿ ಇಸ್ಮಾಯಿಲ್ ಸುಲ್ತಾನ್ ತಿಳಿಸಿದ್ದಾರೆ.

ಚಿಕ್ಕಮಗಳೂರು: ಕೇತುಮಾರನಹಳ್ಳಿ ಗ್ರಾಮಸ್ಥರಿಗೆ ಪಂಚರತ್ನ ಯೋಜನೆ ಕುರಿತು ಅರಿವು

ಪಂಚರತ್ನ ಯೋಜನೆಗಳು ಕೆಳಮಟ್ಟದ ಜನಸಾಮಾನ್ಯರಿಗೂ ಸ್ಪಂದಿಸುವ ಸಲುವಾಗಿ ಜೆಡಿಎಸ್ ವರಿಷ್ಟರು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಲಾ ಗಿದ್ದಾರೆ ಎಂದು ಚಿಕ್ಕಮಗಳೂರು ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು. ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇತು ಮಾರನಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಪಂಚರತ್ನ ಯೋಜನೆ ಹಾಗೂ ಜೆಡಿಎಸ್ ಬೆಂಬಲಿಸಿದರೆ ಮುಂದಿನ ಯಾವ ರೀತಿಯಲ್ಲಿ ಜನಪರ ಕೆಲಸ ಕೈಗೊಳ್ಳಲಾಗುವುದು ಎಂದು ಚರ್ಚಿಸಿ ಅವರು ಮಾತನಾಡುತ್ತಿದ್ದರು. ನಾಡಿನ ಶ್ರೇಯೋಭಿವೃದ್ದಿಗಾಗಿ ವರಿಷ್ಟರು ವಸತಿ ಆಸರೆ, ಆರೋಗ್ಯವೇ ಸಂಪತ್ತು, ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೈತನ್ಯ ಹಾಗೂ ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಕುರಿತು ಯೋಜನೆಗಳನ್ನು ಬಿಡುಗಡೆ ಗೊಳಿಸಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದು ಮತದಾರರು ಈ ಬಾರಿ ಪೂರ್ಣ ಸಹಕಾರ ನೀಡಿದರೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದರು. ಚಿಕ್ಕಮಗಳೂರು ಭಾಗದಲ್ಲಿ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದ್ದು ಅಭಿವೃದ್ದಿ ವಿಚಾರದಲ್ಲಿ ಸಾಕಷ್ಟು ಕೆಲಸಗಳಾಗಿರಬೇಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೆಡಿಎಸ್‌ನ್ನು ಬೆಂಬಲಿಸಬೇಕು. ರಾಜ್ಯದ ಭ್ರಷ್ಟರಹಿತ ಆಡಳಿತ ನಡೆಸಲು ಮತದಾರರು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ಚಿಕ್ಕಮಗಳೂರು: ಸಚಿವ ಅಶ್ವಥ್ ನಾರಾಯಣರನ್ನ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಆಗ್ರಹ

ಮಂಡ್ಯ ಜಿಲ್ಲೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒಡೆದು ಹಾಕಬೇಕು ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ರವರನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ತರೀಕೆರೆ ಕಾಂಗ್ರೆಸ್ ಪಕ್ಷದ ಸೇವಾ ದಳದ ಅಧ್ಯಕ್ಷ ಟಿ.ಎನ್. ಜಗದೀಶ್ ನೇತೃತ್ವದಲ್ಲಿ ಕಾರ್ಯಕರ್ತರು ತರೀಕೆರೆ ತಾಲೂಕಿನ ಪೊಲೀಸ್ ನಿರೀಕ್ಷಕರಾದ ರವೀಂದ್ರ ಅವರಿಗೆ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಟಿ.ಎನ್. ಜಗದೀಶ್ ಅವರು, ಸ್ವಾತಂತ್ರ ಹೋರಾಟಗಾರ ಹಾಗೂ ಮೈಸೂರಿನ ಹುಲಿ ಎಂದೇ ಪ್ರಖ್ಯಾತರಾಗಿರುವ ಟಿಪ್ಪು ಸುಲ್ತಾನ್‍ರವರನ್ನು ಹೊಡೆದು ಹಾಕಿದ ರೀತಿಯೇ  ಸಿದ್ದರಾಮಯ್ಯರವರನ್ನು ಹೊಡೆದು ಹಾಕಬೇಕು ಎಂದು ಪ್ರಚೋದನಕಾರಿ ಮತ್ತು ಕೊಲೆ ಬೆದರಿಕೆ ಹೇಳಿಕೆ ನೀಡಿರುವ, ಸಚಿವ ಅಶ್ವಥ್ ನಾರಾಯಣರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಅವರನ್ನ ಬಂಧಿಸಿ ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ:

ತೀರ್ಥಹಳ್ಳಿ: ತೀರ್ಥಹಳ್ಳಿ ಗಡಿ ಭಾಗಕ್ಕೆ ಆನೆಗಳು ಲಗ್ಗೆ

ಭದ್ರಾ ಅಭಯಾರಣ್ಯ ವ್ಯಾಪ್ತಿಯ ಕಡೆಯಿಂದ ಬಂದಿರುವ ಐದು ಆನೆಗಳು ತಾಲ್ಲೂಕಿನ ಮುಡುಬ ಸಮೀಪದ ಕೋಣನಕೆರೆ ಗ್ರಾಮದಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿವೆ. ಕೋಣನಕೆರೆ ಕೃಷ್ಣಮೂರ್ತಿ ಗೌಡ ಎಂಬುವವರ ತೋಟದಲ್ಲಿ 200ಕ್ಕೂ ಹೆಚ್ಚು ಅಡಿಕೆ ಮರಗಳು ಆನೆ ದಾಳಿಗೆ ತುತ್ತಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆನೆಗಳನ್ನು ಅರಣ್ಯಕ್ಕೆ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಭಾಗದಲ್ಲಿ ಬಹಳಷ್ಟು ಆನೆಗಳಿವೆ. ಅಭಯಾರಣ್ಯದ ಸುತ್ತ ಆನೆಗಳು ದಾಟದಂತೆ ಟ್ರಂಚ್ ತೆಗೆಯಲಾಗಿದೆ. ಹೊಸ ವಿಧಾನ ಅಳವಡಿಸಿಕೊಳ್ಳಲು ಯೋಚಿಸಲಾಗುತ್ತಿದೆ ಎಂದು ಎನ್.ಆರ್.ಪುರ ಆರ್‌ಎಫ್‌ಓ ಸಂತೋಷ್ ಸಾಗರ್ ತಿಳಿಸಿದ್ದಾರೆ.

ತುಮರಿ: ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಪಾದಯಾತ್ರೆ

ಬಹುಕಾಲದಿಂದ ಬದುಕು ಕಟ್ಟಕೊಂಡ ಸಮುದಾಯಗಳ ಹಕ್ಕುಗಳನ್ನು ಅರಣ್ಯ ನೀತಿ ಹೆಸರಿನಲ್ಲಿ ದಮನಿಸಲಾಗುತ್ತಿದ್ದು, ಗಣತಂತ್ರ ವ್ಯವಸ್ಥೆಯಿಂದ ಆಯ್ಕೆಯಾದ ಸರ್ಕಾರಗಳ ಇಂತಹ ಜನ ವಿರೋಧಿ ನೀತಿಯನ್ನು ಸಂಘಟಿತ ಹೋರಾಟದ ಮೂಲಕ ಎದುರಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಶರಾವತಿ ಎಡದಂಡೆಯ ಸಂಕಣ್ಣ ಶ್ಯಾನುಭೋಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಗ್ರಾಮದಲ್ಲಿ ಜೀವ ವೈವಿಧ್ಯ ತಾಣದಲ್ಲಿ ಜನವಸತಿ ಪ್ರದೇಶ ಉಳಿವಿಗೆ ಆಗ್ರಹಿಸಿ ಕಾಂಗ್ರೆಸ್ ಆಯೋಜಿಸಿದ್ದ ಪಾದಯಾತ್ರೆ ಯನ್ನು ಡೋಲು ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತಲೆತಲಾಂತರದಿಂದ ಜೀವನ ನಡೆಸುತ್ತಾ ಇರುವ ಜನ ಸಮುದಾಯ ಅಲ್ಲಿಯ ಕಾಡು ನಾಡಿನ ಜೊತೆಗೆ ಬೆರೆತು ಜೀವನ ನಡೆಸುತ್ತಿದೆ. ಆದರೆ, ಅವರನ್ನು ಕಾನೂನುಗಳ ಬಲ ಪ್ರಯೋಗದ ಹೆಸರಿನಲ್ಲಿ ಒಕ್ಕಲು ಎಬ್ಬಿಸುವ ಕ್ರಮ ಮನುಷ್ಯ ವಿರೋಧಿಯಾಗಿದೆ. ಅಂಬಾರಗುಡ್ಡ ಜೀವ ವೈವಿಧ್ಯ ತಾಣದ ಹೆಸರಿನಲ್ಲಿ ಜನವಸತಿ ಪ್ರದೇಶ ಸೇರಿಸಿ ಕಂದಾಯ ಇಲಾಖೆ ಭೂಮಿಯನ್ನು ಯಾವ ಸರ್ವೆ ಕಾರ್ಯ ನಡೆಸದೇ ಹಸ್ತಾಂತರ ಮಾಡಿರುವುದು ಮನುಷ್ಯ ವಿರೋಧಿ ಕ್ರಮ. ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು’ ಎಂದು ಆಗ್ರಹಿಸಿದರು. ಶರಾವತಿ ಹಿನ್ನೀರಿನ ಜನತೆ ದ್ವೀಪದಲ್ಲಿ ಬದುಕುವುದು ಅಸಾಧ್ಯವಾದ ವಾತವರಣವನ್ನು ಈಗಾಗಲೇ ಅರಣ್ಯ ಇಲಾಖೆ ನಿರ್ಮಾಣ ಮಾಡಿದೆ. ಈ ನಡುವೆ ಜೀವ ವೈವಿಧ್ಯ ತಾಣದ ಹೆಸರಿನಲ್ಲಿ ಸಾವಿರಾರು ಕುಟುಂಬಗಳ ವಾಸ ಇರುವ ಜಾಗವನ್ನು ಅವರ ಒಪ್ಪಿಗೆ ಇಲ್ಲದೆ ಅರಣ್ಯ ಇಲಾಖೆಗೆ ಸೇರಿಸಿರುವುದು ಬಾಣಲೆಯಿಂದ ಬೆಂಕಿಗೆ ಬೀಳುವಂತೆ ಮಾಡಿದೆ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ಷೇಪ ವ್ಯಕ್ತಪಡಿಸಿದರು.

ಶಿವಮೊಗ್ಗ: ಅಡಿಕೆ ವ್ಯಾಪಾರಕ್ಕೆ ತಂದ ಹಣ ಕಳವು, ದೂರು ದಾಖಲು

ಅಡಿಕೆ ವ್ಯಾಪಾರಕ್ಕೆ ತಂದ ಹಣವನ್ನ ವಾಹನದ ಚಾಲಕನೇ ಲಫ್ಡಾಯಿಸಿರುವ ಘಟನೆ ನಡೆದಿದೆ. ಚನ್ನಗಿರಿಯ ಕೆರೆಬಿಳಚಿ ಗ್ರಾಮದಿಂದ ಶಿಕಾರಿಪುರದ ಜಟ್ ಪಟ್ ನಗರಕ್ಕೆ ಬಂದ ವೇಳೆ ಇದ್ದ ಹಣ ನಮಾಜ್ ಮುಗಿಸಿಕೊಂಡು ಬರುವದರೊಳಗೆ ಹಣನೂ ಇಲ್ಲ ಜೊತೆಗೆ ಚಾಲಕನೂ ಪರಾರಿ ಆಗಿದ್ದಾನೆ. ಚನ್ನಗಿರಿ ತಾಲೂಕು ಕೆರೆಬಿಳಚಿ ಗ್ರಾಮದ ನಿವಾಸಿ ಮೊಹ್ಮದ್ ಇಮ್ರಾನ್ ತನ್ನ ವಾಹನದ ಚಾಲಕ ಮೊಹ್ಮದ್ ಮುಮಿಯಾಜ್ ಮತ್ತು ಸ್ನೇಹಿತ ಅಮ್ಜದ್ ಜೊತೆ ಹೂಂಡೈ ಕ್ರೇಟಾ ಕಾರಿನಲ್ಲಿ ಅಡಿಕೆ ಕಣ ನೋಡಲು ಶಿಕಾರಿಪುರದ ಜಟ್ ಪಟ್ ನಗರದ ನಿವಾಸಿ ಆಸೀಫ್ ಮನೆಗೆ ಬರುತ್ತಾರೆ. ಆಸೀಫ್ ಮನೆಯ ಒಳಗೆ ಬಂದ ಇಮ್ರಾನ್ ಜೊತೆಯಲ್ಲಿ ತಂದಿದ್ದ 8.50 ಲಕ್ಷ ರೂ ಸೀಟಿನ ಕೆಳಗೆ ಇಟ್ಟಿದ್ದು ಚಾಲಕ ಮುಮಿಯಾಜ್ ಗೆ ನಮಾಜ್ ಮುಗಿಸಿ ಬರುವೆ ಹಣ ಇಟ್ಟಿದ್ದೇನೆ ಜೋಪಾನ ಎಂದು ತಿಳಿಸಿ ಹೋಗಿದ್ದಾರೆ. ಸ್ನೇಹಿತನೊಂದಿಗೆ ಮಾತನಾಡಿ, ನಮಾಜ್ ಮುಗಿಸಿ ಕಾರಿನ ಬಳಿ ಬಂದು ನೋಡಿದಾಗ ಮುಮಿಯಾಜ್ ಕಾರಿನ ಬಳಿ ಇರಲಿಲ್ಲ. ಸೀಟಿನ ಕವರ್ ಕೆಳಗೆ ಇಟ್ಟ 8.50 ಲಕ್ಷ ರೂ ಸಹ ಇರಲಿಲ್ಲ. ಊಟಕ್ಕೆ ಹೋಗಿರ ಬಹುದು ಎಂದು ಅನೇಕ ಹೊತ್ತಿನ ವರೆಗೆ ಕಾದರೂ ಆತ ಬರುವ ಲಕ್ಷಣ ಕಂಡು ಬರಲಿಲ್ಲ. ಆತನ ಮೊಬೈಲ್ ಗೆ ಕರೆ ಮಾಡಿದರೆ ಸ್ವಿಚ್ ಬರುತ್ತಿತ್ತು. ನಂತರ ಆಸೀಫ್ ಮನೆಯಲ್ಲಿದ್ದ ಕೆಎ-02-ಕೆಎ-6796 ಕ್ರಮ ಸಂಖ್ಯೆಯ ಬೈಕ್ ಸಹ ಕಾಣುತ್ತಿರಲಿಲ್ಲ. ಎಲ್ಲಿ ಹುಡುಕಿದರೂ ಕಾಣದ ಕಾರಣ ಚಾಲಕನ ಊರಾದ ಮಲೇಬೆನ್ನೂರಿಗೆ ಹೋಗಿ ಬಂದರೂ ಆತನ ಪತ್ತೆಯಾಗಲಿಲ್ಲ. ನಂತರ ಶಿಕಾರಿಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಶಿವಮೊಗ್ಗ: ಅರಣ್ಯಾಧಿಕಾರಿಗಳಿಂದಲೇ ಅಕ್ರಮ ನಾಟ ಸಾಗಾಟ; ಖಚಿತ ಮಾಹಿತಿ ಮೇರೆಗೆ ಎಸಿಎಫ್‌ ಪ್ರವೀಣ್‌ ಕುಮಾರ್‌ ಬಸ್ರೂರ್‌ ತಂಡ ದಾಳಿ

ಇಲ್ಲಿನ ಸೊರಬ ಪಟ್ಟಣದಲ್ಲಿ ಹಳೇ ನಾಟ ಅಕ್ರಮ ಸಾಗಾಟಕ್ಕೆ ಸಿದ್ಧವಾಗಿದ್ದ ವೇಳೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಆದರೆ, ಅರಣ್ಯಾಧಿಕಾರಿಗಳೇ ಅಕ್ರಮ ನಾಟ ಸಾಗಾಟ ನಡೆಸುತ್ತಿರುವುದು ತಿಳಿದು ಬಂದಿದೆ. ಎ.ಸಿ.ಎಫ್ ಪ್ರವೀಣ್ ಕುಮಾರ್ ಬಸ್ರೂರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮ ನಾಟ ಸಾಗಾಟದ ವೇಳೆ ಸ್ಕ್ಯಾಂಡಲ್ ಪತ್ತೆ ಹಚ್ಚಿದ್ದಾರೆ. ಸೊರಬ ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ನಾಟ ಇದ್ದು, ಖಚಿತ ಮಾಹಿತಿ ‌ಮೇರೆಗೆ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ತಂಡ ದಾಳಿ ನಡೆಸಿದೆ. ಸಾಗಾಟಕ್ಕೆ ಸಿದ್ಧವಾಗಿದ್ದ ಹಳೇ ನಾಟ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಳೆದ 2-3 ದಿನಗಳಿಂದ 3-4 ಲೋಡ್ ನಾಟ ಸಾಗಾಟದ ಆರೋಪ ಕೇಳಿ ಬಂದಿದೆ. ಸ್ಥಳೀಯ ಅರಣ್ಯಾಧಿಕಾರಿ ಸಾಥ್‌ ನೀಡಿದ್ದು, ಅಕ್ರಮ ನಾಟ ಸಾಗಾಟ ಮಾಡಲಾಗಿದೆ ಎನ್ನಲಾಗಿದೆ. ಯಾರ ಒತ್ತಡಕ್ಕೂ ಮಣಿಯದೇ ಕಾರ್ಯಾಚರಣೆ ನಡೆಸಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹಾಸನ:

ಹಾಸನ: 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಿರೀಕ್ಷೆ: ವಿಜಯವಸಂತ್

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರವ್ಯಾಪ್ತಿಯ 6 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸುವ ವಿಶ್ವಾಸವಿದೆ ಎಂದು ಎಐಸಿಸಿ ವೀಕ್ಷಕ, ಕನ್ಯಾಕುಮಾರಿ ಸಂಸದ ವಿಜಯವಸಂತ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿದ್ದು, ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ್ದೇನೆ. ಜನರೊಂದಿಗೆ ಮಾತನಾಡಿ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗಬೇಕು ಎನ್ನುವ ಭಾವನೆ ಮತದಾರರಲ್ಲಿದೆ ಎಂದು ಹೇಳಿದರು. ಒಂದು ಕುಟುಂಬದೊಳಗೆ ಸದಸ್ಯರ ನಡುವೆ ಅಭಿಪ್ರಾಯ ಭೇದ ಇರುತ್ತದೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ಕಾಣಿಸುತ್ತಿದೆ. ಅದು ಗುಂಪುಗಾರಿಕೆ ಅಲ್ಲ ಎಂದ ಅವರು, ಈ ತಿಂಗಳಾಂತ್ಯದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ನಂತರ ಟಿಕೆಟ್ ದೊರೆಯದ ಆಕಾಂಕ್ಷಿಗಳೂ ಒಗ್ಗೂಡಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಾರೆ. ಎಲ್ಲರೊಂದಿಗೂ ನಾವು ಮಾತನಾಡುತ್ತೇವೆ ಎಂದರು. ಹಾಸನ ಜಿಲ್ಲೆಯ ಜನರು ಸ್ನೇಹಪರ ವ್ಯಕ್ತಿತ್ವ ಹೊಂದಿದ್ದು, ಶ್ರಮಿಕರೂ ಸೇರಿದಂತೆ ಎಲ್ಲ ವರ್ಗದ ಜನರು ಇಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಪ್ರಮುಖ ಎದುರಾಳಿಯಾಗಿದೆ. ಈ ಬಾರಿ ಜಿಲ್ಲೆಯ ಮತದಾರರು ಬದಲಾವಣೆ ಬಯಸುತ್ತಿದ್ದಾರೆ ಎಂದರು. ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವುದರ ಜೊತೆಗೆ ಪಕ್ಷದಿಂದ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಂಬಂಧ ಶೀಘ್ರದಲ್ಲಿಯೇ ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗುವುದು. ಅದನ್ನು ಆಧರಿಸಿ ಜಿಲ್ಲೆಯ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು ಎಂದರು.

ಹಾಸನ: ಕೃಷಿಕರ ಅಗತ್ಯಕ್ಕೆ ಅನುಗುಣವಾದ ಕಾರ್ಯಕ್ರಮ: ಎಂ. ಶಿವಕುಮಾರ್

ಕೃಷಿಕರ ಅಗತ್ಯಗಳಿಗೆ ಅನುಗುಣವಾಗಿ ಹಾಸನ ಆಕಾಶವಾಣಿಯ ಕೃಷಿರಂಗ ವಿಭಾಗ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿ ಪ್ರಸಾರ ಮಾಡಲಾಗುತ್ತಿದೆ ಎಂದು ಹಾಸನ ಆಕಾಶವಾಣಿಯ ಮುಖ್ಯಸ್ಥ ಎಂ. ಶಿವಕುಮಾರ್ ಹೇಳಿದರು. ಹಾಸನ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ 2023ನೇ ಸಾಲಿನ ರೆಡಿಯೊ ಕಿಸಾನ್ ದಿವಸದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ರೈತರ ಮಾಹಿತಿ ಸಬಲೀಕರಣದಲ್ಲಿ ಕಿಸಾನ್‌ವಾಣಿಯ ಪಾತ್ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಕೃಷಿ ಇಲಾಖೆಯ ಉಪ ನಿರ್ದೇಶಕಿ ಡಾ.ಕೆ.ಸಿ. ಸುಷ್ಮಾ, ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವಲ್ಲಿ ಆಕಾಶವಾಣಿಯ ಪಾತ್ರ ವಿಷಯವಾಗಿ ಮಾತನಾಡಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಮೂರು ತಿಂಗಳುಗಳಿಗೆ ಕೋಟ್ಯಂತರ ರೈತರಿಗೆ ತಲಾ 2 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಜಿಲ್ಲೆಯ ಎರಡೂವರೆ ಲಕ್ಷ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಇಂತಹ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಆಕಾಶವಾಣಿ ಅಪಾರವಾಗಿ ನೆರವಾಗಿದೆ ಎಂದು ಶ್ಲಾಘಿಸಿದರು. ವಿವಿಧ ತಂತ್ರಜ್ಞಾನ ಹಾಗೂ ನೂತನ ಆವಿಷ್ಕಾರಗಳನ್ನು ಕೃಷಿಕರಿಗೆ ತಲುಪಿಸುವಲ್ಲಿ ಆಕಾಶವಾಣಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸುಧಾರಿತ ತಳಿಗಳು ಹಾಗೂ ಸುಧಾರಿತ ಯಂತ್ರಗಳ ಕುರಿತು ಆಕಾಶವಾಣಿಯಲ್ಲಿ ಪ್ರಸಾರವಾದ ಕಾರ್ಯಕ್ರಮಗಳಿಂದಾಗಿ ಅವುಗಳಿಗೆ ವ್ಯಾಪಕ ಬೇಡಿಕೆ ಬಂದಿದೆ ಎಂದು ಹಾಸನದ ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜೇಗೌಡ ತಿಳಿಸಿದರು. ಸಕಲೇಶಪುರದ ಏಲಕ್ಕಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಕೆ.ಎನ್. ಹರ್ಷ, ಮಾಹಿತಿ ಸಬಲೀಕರಣದ ಹೊಸ ಸಾಧ್ಯತೆಗಳು ಹಾಗೂ ಸವಾಲು ಈ ಕುರಿತು ವಿಚಾರ ಮಂಡಿಸಿದರು. ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಶಿವಕುಮಾರ್ ಕಣಸೋಗಿ, ಕೃಷಿಕರ ಮಾಹಿತಿ ಸಬಲೀಕರಣದಲ್ಲಿ ಮಾಧ್ಯಮಗಳ ಪಾತ್ರದ ಕುರಿತು, ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳ ಸ್ವರೂಪ ಹಾಗೂ ಭವಿಷ್ಯದ ಬಗ್ಗೆ ಪತ್ರಕರ್ತ ಗಾಣದಾಳು ಶ್ರೀಕಂಠ ವಿಚಾರಗಳನ್ನು ಹಂಚಿಕೊಂಡರು.

ಹಾಸನ: ಸಂವೇದನಾಶೀಲರಾಗಿ ಕೆಲಸ ಮಾಡಿ: ಪ್ರೊ.ಗುರುಲಿಂಗಯ್ಯ

ಸಮಾಜಶಾಸ್ತ್ರಜ್ಞರು ಸಂವೇದನಶೀಲರಾಗಿ, ದಮನಿತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಅಲೆಮಾರಿ, ಬುಡಕಟ್ಟು ಮತ್ತಿತರರೂ ವ್ಯವಸ್ಥೆಯ ಪ್ರಮುಖ ಭಾಗ ಎನ್ನುವುದನ್ನು ತಿಳಿಸುವ ಸಾಕ್ಷಿಪ್ರಜ್ಞೆಯಂತೆ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊ. ಎಂ. ಗುರುಲಿಂಗಯ್ಯ ಹೇಳಿದರು. ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಪರಿವರ್ತನಾ ಫೋರಂ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವು ಸಮಾಜಶಾಸ್ತ್ರದ ಪ್ರಯೋಗಾಲಯವಿದ್ದಂತೆ. ಸಮಾಜಶಾಸ್ತ್ರ ಅಭ್ಯಸಿಸುವವನನ್ನು ಸಮಾಜವಿಜ್ಞಾನಿಯಾಗಿ ಕಾಣುವ ಅವಶ್ಯಕತೆಯಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಲು ಸಾಧ್ಯವಿರುವುದು ಸಮಾಜಶಾಸ್ತ್ರದ ಹಿರಿಮೆ. ವ್ಯವಸ್ಥೆಗಳು ಸೋಲುತ್ತಿರುವ ಹೊತ್ತಿನಲ್ಲಿ ಶಿಕ್ಷಣ ಒಂದೇ ಭರವಸೆ. ಸಮಾಜಶಾಸ್ತ್ರದ ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಸನ: ಮಕ್ಕಳು ದೇಶದ ಆಸ್ತಿ: ಜಿಲ್ಲಾಧಿಕಾರಿ ಅರ್ಚನಾ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾದಕ ವಸ್ತು ಹಾಗೂ ಮಾನವ ಕಳ್ಳಸಾಗಣೆ ಪ್ರತಿಬಂಧಕ ಜಂಟಿ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ಮಕ್ಕಳು ದೇಶದ ಆಸ್ತಿ, ಆದರೆ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಮಕ್ಕಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕ್ರಿಯಾ ಯೋಜನೆ ತಯಾರಿಸಿದೆ ಎಂದರು. ಇದರಲ್ಲಿ ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆ, ಜಿಲ್ಲಾ ಔಷಧ ನಿಯಂತ್ರಣ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳನ್ನು ಒಳಗೊಂಡಂತೆ ವ್ಯಸನದಿಂದ ನರಳುತ್ತಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪೂರ್ಣ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಈ ಸಭೆಯಲ್ಲಿ ಮಕ್ಕಳ ರಕ್ಷಣಾ ಸೇವೆಗಳನ್ನು ಈಗ ಮಿಷನ್ ವಾತ್ಸಲ್ಯ ಎಂದು ಉಪಗ್ರಹಿಸಲಾಗಿದ್ದು, ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳ ಪುನರ್ವಸತಿ ಮತ್ತು ಕಲ್ಯಾಣ ಹಾಗೂ ದೇಶದ ಪ್ರತಿಯೊಂದು ಮಗುವಿಗೂ ಆರೋಗ್ಯಕರ ಮತ್ತು ಸಂತಸದ ಜೀವನ ದೊರಕಿಸಿಕೊಡುವುದು ಮಿಷನ್ ವಾತ್ಸಲ್ಯ ಯೋಜನೆಯ ಆಶಯವಾಗಿದೆ ಎಂದು ಹೇಳಿದರು.

ಹಾಸನ/ಚಾಮರಾಜನಗರ: ಅಹಂಕಾರ, ದರ್ಪ ವರ್ಕೌಟ್ ಆಗಲ್ಲ: ಪ್ರೀತಂ ಗೌಡರಿಗೆ ನಿಖಿಲ್ ಟಾಂಗ್

ರಾಜಕಾರಣದಲ್ಲಿ ಅಹಂಕಾರ, ದರ್ಪ ವರ್ಕೌಟ್ ಆಗಲ್ಲ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಸನ ಶಾಸಕ ಪ್ರೀತಂ ಗೌಡರಿಗೆ ಟಾಂಗ್ ಕೊಟ್ಟರು. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 50 ಸಾವಿರಕ್ಕಿಂತ ಒಂದು ವೋಟ್ ಕಡಿಮೆ ಬಿದ್ದರೂ ಮರು ಚುನಾವಣೆಗೆ ಹೋಗುತ್ತೇನೆ ಎಂಬ ಪ್ರೀತಂ ಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ನಾವು ಎಷ್ಟು ತಲೆ ಬಗ್ಗಿಸುತ್ತೇವೆ, ಅಷ್ಟು ಜನ ನಮ್ಮನ್ನು ರಾಜಕೀಯವಾಗಿ ಬೆಳೆಸುತ್ತಾರೆ ಎಂದು ತಿರುಗೇಟು ನೀಡಿದರು. ಹಾಸನ ಜೆಡಿಎಸ್ ಟಿಕೆಟ್ ವಿಚಾರಕ್ಕೆ ಉತ್ತರಿಸಿ, ಸಹಜವಾಗಿ ಎಲ್ಲಿ ಪಕ್ಷ ಬಲಿಷ್ಠವಾಗಿ ಇರುತ್ತದೆಯೋ‌ ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಈ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಶೀಘ್ರದಲ್ಲೇ ಅಂತಿಮ ಮಾಡುತ್ತಾರೆ. ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ ಎಂದರು. ರಾಜಕೀಯವಾಗಿ ಅಪ್ರಬುದ್ಧ ಎಂಬ ಸುಮಲತಾ ಟೀಕೆಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ನಾನು ಚುನಾವಣೆ ಸಂದರ್ಭದಲ್ಲೂ ಕೂಡ ಸುಮಲತಾರನ್ನು ತಾಯಿಯೆಂದು ಕರೆದಿದ್ದೇನೆ. ಲೋಕಸಭೆ ಚುನಾವಣೆಗೆ ತಾಯಿ ವಿರುದ್ಧ ನಿಂತಾಗ ನಂಗೆ ಅನುಭವವಿರಲಿಲ್ಲ. ಅವತ್ತು ತಾಯಿ ಅಂತಾ ಮಾತನಾಡಿಸಿದ್ದೇನೆ ಇವತ್ತು ಆ ಪದವನ್ನೇ ಬಳಸುತ್ತೇನೆ ಎಂದು ಉತ್ತರಿಸಿದರು.

ಹಾಸನ: ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿದ್ದ ಟೋಲ್ ಪ್ಲಾಜಾದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಂಸದ ಪ್ರಜ್ವಲ್ ರೇವಣ್ಣ

ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗುವಾಗ ಈ ಸಂಗತಿ ನಿಮ್ಮ ಗಮನಕ್ಕೂ ಬಂದಿರಬಹುದು. ಅಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿ ದುರಂಹಕಾರದಿಂದ ವರ್ತಿಸುತ್ತಾರೆ. ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿರುವ ಟೋಲ್ ಪ್ಲಾಜಾದ ಸಿಬ್ಬಂದಿ ಸುತ್ತಮುತ್ತಲಿನ ಜನ ಹಾಗೂ ರೈತರಿಂದ ಬಲವಂತದಿಂದ ಹಣ ಪೀಕುವುದು, ಹೆದರಿಸುವುದು ಮಾಡುತ್ತಿದ್ದಾರೆ ಅಂತ ಜನ ಪದೇಪದೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಗಮನಕ್ಕೆ ತರಲಾಗಿತ್ತು. ಸಂಸದ ಸಹ ಅನೇಕ ಬಾರಿ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ. ಆದರೆ ನಾಯಿ ಬಾಲ ಡೊಂಕು ಎಂಬಂತೆ ಕಳೆದ 6 ವರ್ಷಗಳಿಂದ ಪ್ರಜ್ವಲ್ ರೇವಣ್ಣ ಹೇಳುತ್ತಿದ್ದರೂ ಸಿಬ್ಬಂದಿ ಸ್ಥಳೀಯ ಜನರಿಂದ ಹಣ ಪೀಕುವುದು ಮುಂದುವರಿಸಿದ್ದರಿಂದ ಇಂದು ಸಂಸದರು ಪ್ಲಾಜಾದ ಮ್ಯಾನೇಜರ್​ನನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಟೋಲ್ ಪ್ಲಾಜಾ ಗುತ್ತಿಗೆ ಪಡೆದವರಿಗೆ ಫೋನ್ ಮಾಡಿ ಮ್ಯಾನೇಜರ್ ನನ್ನು ಕೂಡಲೇ ಬದಲಿಸುವಂತೆ ಒತ್ತಡ ಹೇರಿದ್ದಾರೆ.

ಹಾಸನ: ತುಂಡಾಗಿ ಬಿದ್ದ ವಿದ್ಯುತ್ ತಂತಿ; ತೆಂಗಿನ ಮರ ಸೇರಿ ಐದು ಲೋಡ್ ರಾಗಿ ಹುಲ್ಲು ಬೆಂಕಿಗಾಹುತಿ

ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಕಲ್ಲಸಾರಹಳ್ಳಿ ಗ್ರಾಮದಲ್ಲಿ ಹುಲ್ಲಿನ ಬಣವೆಗಳ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು, ಸುಮಾರು ಐದು ಲೋಡ್ ರಾಗಿ ಹುಲ್ಲು ಹಾಗೂ ಒಂದು ತೆಂಗಿನಮರ ಸಂಪೂರ್ಣ ಬೆಂಕಿಗಾಹುತಿ ಆಗಿವೆ. ಗ್ರಾಮದ ಹನುಮಂತಪ್ಪ ಎಂಬುವವರಿಗೆ ಸೇರಿದ ರಾಗಿ ಹುಲ್ಲು ಬೆಂಕಿಗಾಹುತಿ ಆಗಿದ್ದು, ಕೆಲ ದಿನಗಳ ಹಿಂದಷ್ಟೇ ರಾಗಿ ಕಟಾವು ಮಾಡಿ ತಮ್ಮ ಮನೆಯ ಹಿತ್ತಲಿನಲ್ಲಿ ಮೆದೆ ಒಟ್ಟಿದ್ದರು. ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಹುಲ್ಲಿನ‌ ಮೆದೆ ಮೇಲೆ ಬಿದ್ದಿದ್ದು, ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ರಾಗಿ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ. ಹುಲ್ಲು ಬೆಂಕಿಗಾಹುತಿಯಾಗಿದ್ದರಿಂದ ಸುಮಾರು ಐವತ್ತರಿಂದ ಎಪ್ಪತ್ತೈದು ಸಾವಿರ ನಷ್ಟವಾಗಿದೆ. ಸೂಕ್ತ ಪರಿಹಾರ ನೀಡುವಂತೆ ಹನುಮಂತಪ್ಪ ಒತ್ತಾಯ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಣಾವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾಸನ: ಅಂಕೆಗೆ ಸಿಗದ ಅಭ್ಯರ್ಥಿಗಳ ನಡೆ

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಇದುವರೆಗೆ ಸ್ಪಷ್ಟ ಚಿತ್ರಣ ಮಾತ್ರ ಸಿಗುತ್ತಿಲ್ಲ. ಯಾರು, ಯಾವ ಕ್ಷೇತ್ರದಿಂದ, ಯಾವ ಪಕ್ಷದ ಅಭ್ಯರ್ಥಿ ಆಗಲಿದ್ದಾರೆ ಎನ್ನುವುದು ಊಹೆಗೂ ನಿಲುಕದಂತ ವಾತಾವರಣ ಸೃಷ್ಟಿಯಾಗಿದೆ. ಸದ್ಯದ ಮಟ್ಟಿಗೆ ಸಕಲೇಶಪುರ, ಹೊಳೆನರಸೀಪುರ, ಶ್ರವಣಬೆಳಗೊಳ, ಬೇಲೂರು, ಹಾಸನ ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಮತ್ತೊಮ್ಮೆ ಸ್ಪರ್ಧೆಗೆ ಇಳಿಯುವುದು ಖಚಿತವಾಗಿದೆ. ಆದರೆ, ಅರಕಲಗೂಡು, ಅರಸೀಕೆರೆ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳು, ಯಾವ ಪಕ್ಷಗಳಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅರಸೀಕೆರೆ ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಬಾಣಾವರ ಅಶೋಕ್ ಅವರನ್ನು ಕಣಕ್ಕೆ ಇಳಿಸುವುದಾಗಿ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಘೋಷಿಸಿದ್ದಾರೆ. ಆದರೆ, ಬೇಲೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಗಂಡಸಿ ಶಿವರಾಂ, ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎನ್.ಆರ್. ಸಂತೋಷ್ ಕೂಡ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಆಯಾ ಪಕ್ಷಗಳಿಂದ ಟಿಕೆಟ್ ಸಿಗದೇ ಇದ್ದಲ್ಲಿ, ಅನ್ಯ ಪಕ್ಷಗಳಿಂದ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ಕ್ಷೇತ್ರದ ಮತದಾರರು ಹೇಳುತ್ತಿದ್ದಾರೆ. ಇನ್ನು ಅರಕಲಗೂಡಿನಲ್ಲಿ ಹಾಲಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಜೆಡಿಎಸ್‌ನಿಂದ ಹೊರನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೋ, ಬಿಜೆಪಿ ಅಭ್ಯರ್ಥಿಯಾಗಲಿದ್ದಾರೋ ಎನ್ನುವ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಜೆಪಿ ಮುಖಂಡರ ಜೊತೆಗೆ ರಾಮಸ್ವಾಮಿ ಅವರ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಯೋಗಾ ರಮೇಶ್ ಅವರಿಗೆ ಹಿನ್ನಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಹಾಸನ: ಕಲ್ಲು ಗಣಿಗಾರಿಕೆ: ಮಾನದಂಡ ಅನುಸರಿಸಿ

ಕಲ್ಲುಗಣಿಗಾರಿಕೆಗೆ ಗುತ್ತಿಗೆ ನೀಡುವ ಮುನ್ನ ಎಲ್ಲ ಮಾನದಂಡ ಪೂರೈಸಿರುವುದನ್ನು ಖಾತರಿ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅರ್ಚನಾ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ, ಜಿಲ್ಲಾ ಮರಳು ಸಮಿತಿ ಮತ್ತು ಜಿಲ್ಲಾ ಕ್ರಷರ್ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ನಿಯಮ ಪಾಲನೆ ಮಾಡದ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಹಾಲಿ ಅರ್ಜಿ ಸಲ್ಲಿಸಿರುವ ಗಣಿ ಪ್ರದೇಶಗಳಿಗೆ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು. ದೇವಾಲಯ, ಜನವಸತಿ ಸ್ಥಳಗಳಲ್ಲಿ ಜನರ ಸುರಕ್ಷತೆ ಮುಖ್ಯ. ಹಾಗಾಗಿ ಅಂತಹ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು. ಕ್ರಷರ್ ಸುರಕ್ಷಿತ ವಲಯವೆಂದು ಫಾರಂ ಬಿ 1 ವಿತರಿಸಿರುವ ಘಟಕಗಳನ್ನು ಮರು ಪರಿಶೀಲಿಸಿ, ವರದಿ ಮಂಡಿಸುವಂತೆ ಜಿಲ್ಲಾಧಿಕಾರಿ ಅರ್ಚನಾ ಅವರು ನಿರ್ದೇಶನ ನೀಡಿದರು. ಅಕ್ರಮ ಮರಳು ಸಾಗಾಣಿಕೆ ಬಗ್ಗೆ ನಿಗಾ ವಹಿಸಬೇಕು. ನಿಯಮ ಪಾಲನೆ ಮಾಡದ ಗುತ್ತಿಗೆದಾರರು ಹಾಗೂ ಅಕ್ರಮ ಸಾಗಣೆ ಮಾಡುವ ವಾಹನ ಮಾಲೀಕರ ವಿರುದ್ಧ ಕ್ರಮ ವಹಿಸುವಂತೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ರಾಜ್ ಕಮಲ್ ಬಿಲ್ಡರ್ಸ್ ಸಂಸ್ಥೆಗೆ ಮಂಜೂರು ಮಾಡಲಾಗಿದ್ದ ಮರಳು ನಿಕ್ಷೇಪಗಳ ಗುತ್ತಿಗೆ ಅವಧಿ ವಿಸ್ತರಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕಾಮಗಾರಿ ಆದಷ್ಟು ಬೇಗ ಮುಗಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಅರಸೀಕೆರೆ: ಸ್ವಚ್ಛ ಕುಡಿಯುವ ನೀರು ಪೂರೈಸಿ

ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಜನನ- ಮರಣ ಅಂಕಿ ಅಂಶಗಳ ದಾಖಲೆ, ನಗರಸಭೆಯ ಜಮಾ- ಖರ್ಚು, ಸ್ವಚ್ಛ ಭಾರತ್ ಮಿಷನ್ ಅಡಿ ಐ.ಇ.ಸಿ. ಚಟುವಟಿಕೆಗಳ ಟೆಂಡರ್ ಅನುಮೋದನೆ, ಬೀದಿ ನಾಯಿಗಳ ಹಾವಳಿ ತಪ್ಪಿಸಲು ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮಕ್ಕೆ ಟೆಂಡರ್, 2023-24 ನೇ ಸಾಲಿನಲ್ಲಿ ಶೇ 3 ರಿಂದ ಶೇ 5 ರಷ್ಟು ಆಸ್ತಿ ತೆರಿಗೆ ಹೆಚ್ಚಿಸುವುದು, ಮಕ್ಕಳಿಗಾಗಿ ಅಂಬೇಡ್ಕರ್ ಗ್ರಂಥಾಲಯ ಮತ್ತು ಅಂಗನವಾಡಿ ಕೇಂದ್ರ ತೆರೆಯುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಇಲ್ಲಿನ ನಗರಸಭೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಒಮ್ಮತದಿಂದ ಒಪ್ಪಿಗೆ ನೀಡಲಾಯಿತು. ನಗರಸಭೆ ಉಪಾಧ್ಯಕ್ಷ ಕಾಂತೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, 2023-24 ನೇ ಸಾಲಿಗೆ ನೀರಿನ ದರ ಪರಿಷ್ಕರಣೆ ಬಗ್ಗೆ ಚರ್ಚಿಸುವ ವೇಳೆ, ಸದಸ್ಯ ವೆಂಕಟಮುನಿ ಮಾತನಾಡಿ, ಇನ್ನೇನು ಬೇಸಿಗೆ ಸಮೀಪಿಸುತ್ತಿದ್ದು ನಗರದ ಜನತೆಯ ಆರೋಗ್ಯದ ದೃಷ್ಟಿಯಿಂದ ನಗರದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ನಗರದಲ್ಲಿ ಭೀಚಿಂಗ್ ಪೌಡರ್ ಸಿಂಪಡಣೆಗೆ ಕ್ರಮ ಕೈಗೊಳ್ಳಬೇಕು ಎಂದರು. 14 ನೇ ವಾರ್ಡ್‌ನಲ್ಲಿ ಒಂದೇ ಸಿಎ ನಿವೇಶನವಿದ್ದು, ಆ ಜಾಗವನ್ನು ಅಂಗನವಾಡಿ ಕೇಂದ್ರ ತೆರೆಯಲು ಮೀಸಲಿಡಬೇಕು ಎಂದು ಸದಸ್ಯೆ ಪ್ರೇಮಾ ಮಲ್ಲಿಕಾರ್ಜುನ್ ಆಗ್ರಹಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಬರುವ ಕಿರು ನೀರು ಸರಬರಾಜು ಕೇಂದ್ರಗಳ ಪ್ಯಾನಲ್ ಬೋರ್ಡ್‌ಗಳನ್ನು ಆದಷ್ಟು ಶೀಘ್ರ ದುರಸ್ತಿ ಮಾಡಬೇಕು. ಅಂಬೇಡ್ಕರ್ ನಗರದ 2 ನೇ ಅಡ್ಡರಸ್ತೆಯಲ್ಲಿ ದಲಿತ ಮಕ್ಕಳ ಅನುಕೂಲಕ್ಕಾಗಿ ಡಾ.ಅಂಬೇಡ್ಕರ್ ಗ್ರಂಥಾಲಯ ನಿರ್ಮಾಣ ಮಾಡಲು ನಿವೇಶನ ಕೋರಿ ಸಲ್ಲಿಕೆಯಾಗಿದ್ದ ಮನವಿ ಬಗ್ಗೆ ಸಭೆ ಗಮನಕ್ಕೆ ತರಲಾಯಿತು. ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದ ವಿಷಯಗಳ ಬಗ್ಗೆ ಒಮ್ಮತದಿಂದ ಒಪ್ಪಿಗೆ ನೀಡಲಾಯಿತು. ಸದಸ್ಯ ವೆಂಕಟಮುನಿ ಮಾತನಾಡಿ, ನಗರಸಭೆ ವ್ಯಾಪ್ತಿಯ ನೂತನ ಬಡಾವಣೆಗಳ ನಿವೇಶನಗಳಿಗೆ ಖಾತೆ ಮಾಡಿಕೊಡುವಾಗ ಸಾಮಾನ್ಯ ಸಭೆಯ ಗಮನಕ್ಕೆ ತಂದು ಬಳಿಕ ಖಾತೆ ಮಾಡಿಕೊಡಬೇಕು. ಎಷ್ಟು ಕಸ ಸಂಗ್ರಹ ವಾಹನಗಳಿವೆ?, ನಗರದಲ್ಲಿ ಬೀದಿ ದೀಪಗಳ ಅವ್ಯವಸ್ಥೆ ಸರಿಪಡಿಸಿ ಎಂದು ಹಿಂದಿನ ಸಭೆಯಲ್ಲಿ ಚರ್ಚಿಸಿದ್ದರೂ, ಕ್ರಮ ಕೈಗೊಂಡಿಲ್ಲ ಎಂದರು.

ಸಕಲೇಶಪುರ (ಹಾಸನ): ಸಕಲೇಶಪುರ: ಬೆಂಕಿ ನಂದಿಸಲು ಹೋದ ಅರಣ್ಯ ಸಿಬ್ಬಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಸಕಲೇಶಪುರ (ಹಾಸನ) ತಾಲ್ಲೂಕಿನ ಕಾಡುಮನೆ ಸಮೀಪದ ಮಣಿಭಿಕ್ತಿ ರಕ್ಷಿತ ಅರಣ್ಯದಲ್ಲಿ ಹೊತ್ತಿಕೊಂಡಿದ್ದ ಕಾಡಿಚ್ಚು ಆರಿಸಲು ಹೋಗಿದ್ದ ನಾಲ್ವರು ಅರಣ್ಯ ಇಲಾಖೆ ನೌಕರರಿಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿದ ಫಾರೆಸ್ಟರ್ ಮಂಜುನಾಥ್, ಗಾರ್ಡ್ ಸುಂದರೇಶ್, ವಾಚರ್‌ಗಳಾದ ತುಂಗೇಶ್ ಹಾಗೂ ಮಹೇಶ್, ಬೆಂಕಿ ಆರಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಡುಮನೆ ಸಮೀಪದ ಟೀ ಎಸ್ಟೇಟ್‌ನಿಂದ ಸುಮಾರು 10 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಮುಖ ಹಾಗೂ ಕೈಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಾಚ‌ ತುಂಗೇಶ್, ನೋವಿನಲ್ಲಿಯೇ 10 ಕಿ.ಮೀ. ನಡೆದು ಕಾಡಮನೆ ಆಸ್ಪತ್ರೆಗೆ ಬಂದಿದ್ದಾರೆ. ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ್ದರಿಂದ ಕಾಡಮನೆಗೆ ಬಂದು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತಿದ್ದಂತೆಯೇ ಪೊಲೀಸ್ ಕಾನ್‌ಸ್ಟೆಬಲ್ ನಂದೀಶ್, ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್, ಸೇರಿದಂತೆ ಹಲವರು ಸ್ಥಳಕ್ಕೆ ತೆರಳಿ, ಗಾಯಗೊಂಡಿದ್ದ ಮಂಜುನಾಥ್, ಸುಂದರೇಶ್ ಹಾಗೂ ಮಹೇಶ್ ಅವರನ್ನು ಸ್ನೇಚರ್ ಸಹಾಯದಿಂದ ಎತ್ತಿಕೊಂಡು ಕಾಲು ನಡಿಗೆಯಲ್ಲಿ ಬಂದಿದ್ದಾರೆ.

ಹಾಸನ: 3೦೦ ರೂಪಾಯಿಗಾಗಿ ಗಲಾಟೆ, ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ

ಕೂಲಿ ಹಣ 3೦೦ ರೂಪಾಯಿಗಾಗಿ ಗಲಾಟೆ ನಡೆದು ಬಲಿಷ್ಠ ಜಾತಿಯ ವ್ಯಕ್ತಿಗಳು ದಲಿತ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಲ್ಲಿಕಾರ್ಜುನಪುರ (ಹಗರೆ)ದಲ್ಲಿ ನಡೆದಿದೆ. ಮಲ್ಲಿಕಾರ್ಜುನ ನಗರದ ಪರಿಶಿಷ್ಟ ಜಾತಿಯ ರಾಜು (24) ಹಲ್ಲೆಗೆ ಒಳಗಾದ ಯುವಕ. ಗಿರೀಶ್ ಮತ್ತು ಪರಮೇಶ್ ಹಲ್ಲೆಮಾಡಿದ ವ್ಯಕ್ತಿಗಳು. ಘಟನೆಗೆ ಸಂಬಂಧಿಸಿದಂಥೆ ಹಲ್ಲೆಗೆ ಒಳಗಾದ ರಾಜು ಅವರ ಕಿರಿಯ ಸಹೋದರ ಚೇತನ್ ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿ, ರಾಜು ಮತ್ತು ಗಿರೀಶ್ ಒಟ್ಟಿಗೆ ಗಾರೆ ಕೆಲಸಕ್ಕೆ ಹೋಗುತ್ತಾರೆ. ಕೆಲಸ ಮುಗಿಸಿ ಹಿಂತಿರುಗುವ ವೇಳೆ ನಮ್ಮ ಅಣ್ಣ ರಾಜು, ತನಗೆ ಕೊಡಬೇಕಾಗಿದ್ದ 300 ರೂ. ಕೊಡುವಂತೆ ಕೇಳಿದ್ದಾನೆ. 300 ರೂ. ಹಣ ಕೊಟ್ಟು ಮತ್ತೆ ವಾಪಸ್ ಕಸಿದುಕೊಂಡಿದ್ದಾರೆ. ಈ ವಿಷಯಕ್ಕೆ ಗಲಾಟೆ ಆರಂಭವಾಗಿದೆ. ಕೊನೆಗೆ ನಿಮ್ಮ ಹಣವೂ ಬೇಡ ನಿಮ್ಮ ಸಹವಾಸವೂ ಬೇಡ ಎಂದು ಮನೆಗೆ ಹೋಗಲು ಆಟೊ ಹತ್ತಲು ಹೋದಾಗ ಹಿಂದೆಯಿಂದ ಬಂದು, ನಮ್ಮ ಅಣ್ಣ ರಾಜು ತಲೆಗೆ ಬೀಯರ್ ಬಾಟಲಿಯಿಂದ ಹೊಡೆದಿದ್ದಾರೆ ಎಂದು ವಿವರಿಸಿದರು. ಅಲ್ಲೇ ಇದ್ದ ನಮ್ಮೂರಿನ ವ್ಯಕ್ತಿಯೊಬ್ಬರು ರಾಜುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ತಂದು ಬಿಟ್ಟರು. ಸಹಾಯ ಮಾಡಲು ಬಂದ ವ್ಯಕ್ತಿಗೂ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಮ್ಮ ಅಣ್ಣನಿಗೆ ಜಾತಿ ನಿಂದನೆ ಮಾಡಿ, ಅವರನ್ನು ಆಸ್ಪತ್ರೆಯಿಂದ ಬಂದರೂ ಬಿಡುವುದಿಲ್ಲ ಎಂದು ಗಿರೀಶ್ ಮತ್ತು ಪರಮೇಶ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ರಾಜು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಬೇಲೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾ ಆಸ್ಪತ್ರೆಗೆ ಹೋಗುವಂತೆ ವ್ಯದ್ಯರು ಹೇಳಿದ್ದಾರೆ. ಗಲಾಟೆಯ ವೇಳೆ ಮೊಬೈಲ್ ಪರ್ಸ್ ಕಳೆದು ಹೋಗಿದೆ. ಆಧಾರ್ ಕಾರ್ಡ್ ಇಲ್ಲದೆ ಚಿಕಿತ್ಸೆ ಮುಂದುವರಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಹಳೇಬೀಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಬಗ್ಗೆ ಪಿಎಸ್‌ಐ ಮಾತನಾಡಿ ವಿಷಯ ಗಮನಕ್ಕೆ ಬಂದಿದ್ದು ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಾಸನ: ಹಾಸನದಲ್ಲಿ ಸ್ವರೂಪ್ ಮಿಂಚಿನ ಸಂಚಾರ, ಹಾಸನಾಂಬ ದೇವಾಲಯದಲ್ಲಿ ವಿಶೇಷ ಪೂಜೆ

ನಗರದ ಹಾಸ ನಾಂಬ ದೇವಾಲಯದಲ್ಲಿ ಇಂದು ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿಗೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಚ್.ಪಿ.ಸ್ವರೂಪ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೈಗೊಂಡಿರುವ ಪಂಚರತ್ನ ಯಾತ್ರೆ ಯಶಸ್ವಿಯಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ದೇವರಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಮುಗಿಸಿ ನಗರ ಪ್ರದೇಶದಲ್ಲಿ ಪ್ರಚಾರ ಆರಂಭಿಸಿದ್ದು, ಪಂಚರತ್ನ ಯಾತ್ರೆ ಹಾಗೂ ಯಾತ್ರೆಯಲ್ಲಿ ಅಳವಡಿಸಿಕೊಂಡಿರುವ 5 ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮ ವಹಿಸಲಾಗುತ್ತಿದೆ ಎಂದರು. ಇನ್ನೂ ಟಿಕೆಟ್ ಘೋಷಣೆ ಅಂತಿಮವಾಗಿ ವರಿಸ್ಟರ ತೀರ್ಮಾನವಾಗಿದೆ, ಅದರ ಬಗ್ಗೆ ಕುಮಾರಸ್ವಾಮಿ ಹಾಗೂ ರೇವಣ್ಣ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದು ಶೀಗ್ರವಾಗಿ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲಿದ್ದೇವೆ. ಚುನಾವಣೆ ಸಮೀಪ ಇರುವ ಕಾರಣ ಪ್ರಚಾರಕ್ಕೆ ಕಡಿಮೆ ಸಮಯ ಇರುವ ಕಾರಣ ಪಕ್ಷ ಸಂಘಟನೆ ಗೆ ತಾವು ಕೆಲಸ ಮಾಡುತ್ತಿದ್ದು, ನನ್ನ ಹಾಗೂ ತಮ್ಮ ತಂದೆಯ ಮೇಲೆ ಜನರು ಇಟ್ಟಿರುವ ಪ್ರೀತಿ ವಿಶ್ವಾಸ ಪಕ್ಷ ಸಂಘಟನೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಹಾಸನ/ಬೇಲೂರು: ಸಾರ್ವಜನಿಕರಿಂದ ಶಾಸಕರಿಗೆ ಹಿಡಿಶಾಪ

ಚುನಾವಣೆ ಹತ್ತಿರ ಬರುತ್ತಿದಂತೆ ಶಾಸಕ ಲಿಂಗೆಶ್ ರವರಿಂದ ಮತದಾರರಿಗೆ ಕಣ್ಣು ಒರೆಸುವ ತಂತ್ರ ನಡೆಯುತ್ತಿದೆ ಬೇಲೂರು ಸಕಲೇಶಪುರ ಮಾರ್ಗ ರಸ್ತೆ ಗುಂಡಿ ಬಿದ್ದು ಹಾಳಾಗಿರುವ ಹಿನ್ನೆಲೆ ಸಂಘಟನೆಗಳು ಸಾರ್ವಜನಿಕರು ಕೆಲವು ಹೋರಾಟಗಳನ್ನು ಮಾಡಲಾಗಿತ್ತು. ನಂತರ ಎಚ್ಚೆತ್ತುಕೊಂಡ ಶಾಸಕರಾದ ಕೆ.ಎಸ್. ಲಿಂಗೇಶರವರು ಗುಂಡಿಗೆ ಸರಿಯಾಗಿ ಡಾಂಬರೀಕರಣ ಹಾಕುವ ಕಾಮಗಾರಿ ಕೆಲಸವನ್ನು ಯಾವ ಪುಣ್ಯಾತ್ಮನಿಗೆ ನೀಡಿದ್ದಾರೋ ತಿಳಿಯದು ಕಾಮಗಾರಿ ಟೆಂಡರ್ ದಾರಾರು ಎಸ್ಟಿಮೆಂಟ್ ಪ್ರಕಾರ ಕಾಮಗಾರಿ ನಡೆಸುತ್ತಿಲ್ಲ ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆ ಸಾರ್ವಜನಿಕರು ಟೆಂಡರ್ ದಾರನಿಗೆ ಹಾಗೂ ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ತಕ್ಷಣ ಕೆಲವು ಹಳ್ಳಿಗಳಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಗುದ್ದಲಿ ಪೂಜೆ ನಡೆಸುವುದು ಜೋರಾಗಿ ಕಂಡು ಬರುತ್ತಿದೆ ಆದರೆ ಸಾರ್ವಜನಿಕರು ಶಾಸಕರು ಚುನಾವಣೆ ಹತ್ತಿರ ಬಂದ ತಕ್ಷಣ ಸಾರ್ವಜನಿಕರ ಕಣ್ಣುಹೊರಿಸುವ ಕೆಲಸ ಮಾಡುತ್ತಿದ್ದಾರೆ ಇಷ್ಟು ವರ್ಷ ಅಭಿವೃದ್ಧಿ ಮಾಡದ ಶಾಸಕರು ಈ ಸಂದರ್ಭದಲ್ಲಿ ತರಾತುರಿಯಾಗಿ ಗುದ್ದಲಿ ಪೂಜೆ ನೆರವೇರಿಸುವಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಶಾಸಕರೇ ಈಗ ಮಾಡುತ್ತಿರುವ ಕಾಮಗಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿಯನ್ನಾದರೂ ದಯಮಾಡಿ ಮಾಡಿಸಿ ಕೊಡಿ ಈ ಕಳಪೆ ಕಾಮಗಾರಿಯನ್ನು ನೋಡಿದರೆ 40%ಪರ್ಸೆಂಟ್ ಕಾಮಗಾರಿ ಅಂತ ಎದ್ದು ಕಾಣುತ್ತಿದೆ ಅಥವಾ ಹೀಗೆ ಕಳಪೆ ಕಾಮಗಾರಿ ಮಾಡಿದರೆ ಬಿಕ್ಕೋಡು ಹೋಬಳಿಯಲ್ಲಿ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ

ಹಾಸನ: ಸಿದ್ದರಾಮಯ್ಯ ವಿರುದ್ಧ ಹೇಳಿಕೆ: ಹಾಸನದಲ್ಲೂ ಕಾಂಗ್ರೆಸ್ ಪ್ರತಿಭಟನೆ

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಅಶ್ವತ್ಥನಾರಾಯಣ ಹಾಗೂ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು ಹೊಡಿ, ಬಡಿ ಎಂಬುದು ಬಿಜೆಪಿ ಸಂಸ್ಕೃತಿಯಾಗಿದ್ದು ಸಚಿವ ಅಶ್ವತ್ಥ ನಾರಾಯಣ್ ಅವರನ್ನು ಸಂಪುಟದಿಂದ ತಕ್ಷಣವೇ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಡಿಸಿ ಕಚೇರಿ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸರ್ವ ಜನಾಂಗದ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ‌ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದಲ್ಲದೆ, ದುರಹಂಕಾರಿ ಹೇಳಿಕೆ ನೀಡಿದ್ದಾರೆ ಆದ್ದರಿಂದ ಬಿಜೆಪಿ ಸರ್ಕಾರ ಅಶ್ವತ್ಥನಾರಾಯಣ ಅವರನ್ನು ಸಂಪುಟದಿಂದ ವಜಾಮಾಡಬೇಕು ಎಂದು ಆಗ್ರಹಿಸಿದರು.

ಕೊಡಗು:

ಕೊಡಗು:  ಕೊಡಗಿನ ರಸ್ತೆ ಅಭಿವೃದ್ಧಿಗೆ 100 ಕೋಟಿ‌ ರೂ.ಗಳ ವಿಶೇಷ ಪ್ಯಾಕೇಜ್

ಕೊಡಗು ಜಿಲ್ಲೆಯ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರಕಾರ 100 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ. ವಿಧಾನ ಮಂಡಲದಲ್ಲಿ ಶುಕ್ರವಾರ ತಮ್ಮ ಅಧಿಕಾರವಧಿಯ ದ್ವಿತೀಯ ಆಯ-ವ್ಯಯವನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡಗು ಜಿಲ್ಲೆಯ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿಸಿದರು. ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ಕೊಡಗಿನ ರಸ್ತೆಗಳ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿಸುವಂತೆ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಸುಜಾ ಕುಶಾಲಪ್ಪ ಅವರುಗಳು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದರು. ಮುಖ್ಯಮಂತ್ರಿಯವರು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವುದನ್ನು ಶಾಸಕತ್ರಯರು ಸ್ವಾಗತಿಸಿದ್ದಾರೆ. ಉಳಿದಂತೆ ವನ್ಯಪ್ರಾಣಿ-ಮಾನವ ಸಂಘರ್ಷ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಮುಖ್ಯಮಂತ್ರಿಯವರು ಕಾಡಾನೆಗಳ ಹಾವಳಿ ನಿಯಂತ್ರಿಸಲು ರೈಲ್ವೆ ಕಂಬಿ ಬೇಲಿ, ಸೋಲಾರ್ ಬೇಲಿ, ಆನೆ ಕಂದಕ ನಿರ್ಮಾಣ ಕಾರ್ಯಗಳನ್ನು ಮುಂದುವರೆಸುವುದಾಗಿಯೂ ನುಡಿದರು.

ಮಡಿಕೇರಿ: ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ

ಹೆಬ್ಬಟ್ಟಗೇರಿ-ದೇವತ್ತೂರು ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ನಂದಿಮೊಟ್ಟೆ ಜಂಕ್ಷನ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಶೀಘ್ರವಾಗಿ ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಗ್ರಾಮದ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆ ದುರಸ್ತಿಗೆ ಒತ್ತಾಯಿಸಿದರು. ಗ್ರಾಮಸ್ಥ ರಮೇಶ್ ಮಾತನಾಡಿ, 2 ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲ್ಲಿನ ಜನರು ರಸ್ತೆಯಲ್ಲಿ ತೆರಳಬೇಕಾದರೆ ಸಾಹಸ ಮಾಡುವ ಸ್ಥಿತಿ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಈಗ ಆಟೊದವರು ನಿರಾಕರಿಸಿದ್ದಾರೆ. ತುರ್ತು ಅನಾರೋಗ್ಯದ ಸಂದರ್ಭದಲ್ಲಿ ಯಾವುದೇ ವಾಹನಗಳೂ ಬರುತ್ತಿಲ್ಲ. ಪ್ರವಾಸಿ ತಾಣ ಮಾಂದಲಪಟ್ಟಿಗೆ ಸಂಪರ್ಕಕಲ್ಪಿಸುವ ಈ ರಸ್ತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು. ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಾಂದಲಪಟ್ಟಿ, ಅಬ್ಬಿಜಲಪಾತ, ಆರ್.ಟಿ.ಓ. ಕಚೇರಿಗೆ ತೆರಳಬೇಕಾದವರು ಪರದಾಡಿದರು. ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

Most Popular

Recent Comments