(H L Nagaraj:) ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹೆಚ್. ಎಲ್ ನಾಗರಾಜ್ ಇದೀಗ ಸನ್ಯಾಸ ದೀಕ್ಷೆ ಪಡೆದಿದ್ದಾರೆ.
ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
ಚಿಕ್ಕಮಗಳೂರಿನ ಅಂದಿನ ತಹಶೀಲ್ದಾರ್ ಇದೀಗ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಚ್. ಎಲ್ ನಾಗರಾಜ್ ಇದೀಗ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿದ್ದಾರೆ.
ನನಗೆ ಈಗ 81 ವರ್ಷ ಆಗಿದೆ. ಹೀಗಾಗಿ ನಮ್ಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಸೇವಾ ಕಾರ್ಯಗಳನ್ನು ಮಾಡುತ್ತ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಗರಾಜ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಗೆ ಮಠದ ಟ್ರಸ್ಟಿನ ಎಲ್ಲಾ ಸದಸ್ಯರು ಸರ್ವಾನುಮತ ದಿಂದ ಒಪ್ಪಿಗೆ ಸೂಚಿಸಿದ್ದು, ಮಠದ ಉತ್ತರಾಧಿಕಾರಿಯಾಗಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು “ನಾಥ ಪರಂಪರೆಯಂತೆ ಮುನ್ನಡೆಸಿಕೊಂಡು ಹೋಗಲಿದ್ದಾರೆ ಎಂದು ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದಾರೆ.
ಎರಡು ದಿನಗಳ ವಿಧಿ ವಿಧಾನದೊಂದಿಗೆ ಪೀಠಾರೋಹಣ:
ಡಿ.14ರ ಶನಿವಾರ ಸಂಜೆ 6 ಗಂಟೆಗೆ ಕೆಂಗೇರಿಯಲ್ಲಿರುವ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಭಾನುವಾರ (ಇಂದು) ಪಟ್ಟಾಭಿಷೇಕ ನಡೆಯಲಿದೆ.

ಹಲವು ಮಠಾಧೀಶರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ:
ಶನಿವಾರ (ಡಿ.14) ಸಂಜೆ ಪೀಠಾರೋಹಣ ಅಂಗವಾಗಿ ವಿಧಿ ವಿಧಾನಗಳು, ಕಾರ್ಯಕ್ರಮಗಳು ಭಾನುವಾರ ಸಂಜೆವರೆಗೂ ಜರುಗಲಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ, ನಂಜಾವಧೂತ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಿವ ರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹಲವು ಮಠಾಧೀಶರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ನಡೆಯಲಿದೆ.

ಇದನ್ನೂ ಓದಿ; ಬೆಳೆ ಹಾನಿ ಪರಿಹಾರಕ್ಕೆ 297 ಕೋಟಿ ರೂ. ಬಿಡುಗಡೆ; ಈ ದಿನ ಜಮಾ- ಸಚಿವ ಕೃಷ್ಣಬೈರೇಗೌಡ ಮಾಹಿತಿ
ಸರ್ಕಾರಿ ಹುದ್ದೆ ತೊರೆದು ಸನ್ಯಾಸ ಸ್ವೀಕರಿಸಿದ ಡಾ.ನಾಗರಾಜ್:
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಲಿಂಗಯ್ಯ ಮತ್ತು ಗಂಗಮ್ಮನವರ ಪುತ್ರರಾಗಿರುವ ನಾಗರಾಜ್ ಅವರು ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮುಗಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಕ್ರೋಫೈನಾನ್ಸ್ ವಿಷಯದಲ್ಲಿ (ಪಿಎಚ್‌ಡಿ) ಪದವಿ ಪಡೆದಿದ್ದಾರೆ.

ಮಠದಲ್ಲಿ ವ್ಯಾಸಂಗ ಮಾಡುವಾಗ ಅವರಿಗೆ ಧಾರ್ಮಿಕ ಕಾರ್ಯಗಳ ಬಗ್ಗೆ ಆಸಕ್ತಿ ಬೆಳೆದಿತ್ತು. ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ, ಬಾಲಗಂಗಾಧರನಾಥ ಸ್ವಾಮೀಜಿ ಸೇವಾ ಕಾರ್ಯಗಳಿಂದ ಪ್ರಭಾವಿತರಾಗಿ ಸನ್ಯಾಸತ್ವ ಮತ್ತು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವೆ ಮಾಡಬೇಕು ಎಂಬ ಮನಸ್ಸು ಮಾಡಿದರು. ಅದರ ಫಲವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತಹಶೀಲ್ದಾರ್, ಹೆಚ್ಚುವರಿ ಜಿಲ್ಲಾಧಿಕಾರಿ, ಮೈಶುಗರ್ ಕಾರ್ಖಾನೆ ಎಂ.ಡಿ. ಆಗಿ ಪ್ರಾಮಾಣಿಕತೆ, ದಕ್ಷತೆ ಸೇವೆ ಸಲ್ಲಿಸಿ ಜನಸೇವಾ ಮನೋಭಾವ ರೂಢಿಸಿಕೊಂಡಿದ್ದಾರೆ.
ಇದನ್ನೂ ಓದಿ; ಆಧಾರ್ ಹೊಂದಿರುವವರಿಗೆ UIDAl ಮುಖ್ಯ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ನಿಷ್ಠಾವಂತ ಅಧಿಕಾರಿ ಎಂದು ಹೆಸರು ಗಳಿಸಿದ್ದ ನಾಗರಾಜ್:
ನಾಗರಾಜ್ ಅವರು ವ್ಯವಸ್ಥೆಯ ಬಗ್ಗೆ ಸಾಕಷ್ಟು ಅಸಮಾಧಾನ ಹೊಂದಿದ್ದರು. ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಕೆ.ಆರ್ ಪೇಟೆಯಲ್ಲಿರುವ ಶತಮಾನದ ಶಾಲೆಯ ಪುನರಾಭಿವೃದ್ಧಿಯಲ್ಲಿ ಅವರು ನಿರ್ವಹಿಸಿದ ಪಾತ್ರ ಮಹತ್ವದ್ದು.
ಈ ಹಿಂದೆಯೂ ಸನ್ಯಾಸತ್ವ ಸ್ವಿಕರಿಸಿದ ನಾಗರಾಜ್:
ನಾಗರಾಜ್ ಅವರು ಈ ಹಿಂದೆ, 2011ರಲ್ಲಿ ಕೆ.ಆರ್ ಪೇಟೆಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿಯೂ ಸನ್ಯಾಸತ್ವ ಪಡೆದುಕೊಂಡಿದ್ದರು. ಆದಿಚುಂಚನಗಿರಿಯ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ತಮ್ಮ ಹೆಸರನ್ನು ನಿಶ್ಚಲಾನಂದನಾಥ ಸ್ವಾಮೀಜಿ ಎಂದೂ ಬದಲಿಸಿಕೊಂಡಿದ್ದರು.
ಇದನ್ನೂ ಓದಿ; ಪಂಚಾಯತ್ ರಾಜ್ ವಿವಿಯಲ್ಲಿ ಉದ್ಯೋಗ; ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಲಿಂಕ್ ಇಲ್ಲಿದೆ
ಕೌಟುಂಬಿಕ ಜೀವನಕ್ಕೆ ಮರಳಿದ್ದ ನಾಗರಾಜು:
ಅವರ ಈ ನಿರ್ಧಾರದಿಂದ ಆತಂಕಗೊಂಡ ಕುಟುಂಬದವರು, ಸ್ನೇಹಿತರು ಮತ್ತು ಹಿತೈಷಿಗಳು ಆಗ ಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಸಮಾಲೋಚಿಸಿ, ನಾಗರಾಜು ಅವರನ್ನು ಮಠದಿಂದ ವಾಪಸ್ ಕಳುಹಿಸುವಂತೆ ಮನವಿ ಮಾಡಿದ್ದರು. ನಾಗರಾಜು ಅವರ ಮನವೊಲಿಸುವಲ್ಲೂ ಯಶಸ್ವಿಯಾಗಿದ್ದರು. ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಳಿಕ ಒಂದು ತಿಂಗಳ ಕಾಲ ತಮಿಳುನಾಡಿನ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಡಾ.ಎಚ್.ಎಲ್ ನಾಗರಾಜು ಅವರು, ವಾಪಸ್ ಆದಿಚುಂಚನಗಿರಿ ಮಠಕ್ಕೆ ಮರಳಿದಾಗ ಸನ್ಯಾಸ ದೀಕ್ಷೆಯನ್ನು ತ್ಯಜಿಸಿ ಕೌಟುಂಬಿಕ ಜೀವನಕ್ಕೆ ಮರಳಿದ್ದರು.







