ಕೊಪ್ಪದ ಕಾಡಿನಲ್ಲಿ ಮೂವರು ಯುವಕರ ಜೊತೆ ಕಳಸದ ಕಾಲೇಜು ವಿದ್ಯಾರ್ಥಿನಿ; ಫೋಟೋ ವೈರಲ್

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಓರ್ವ ಹಿಂದು ಯುವತಿ ಮೂವರು ಮುಸ್ಲಿಂ ಯುವಕರ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ವೈರಲ್ ಆದ ಪೋಸ್ಟ್ ನಲ್ಲಿ ಏನಿದೆ?

ಕಳಸದ ಹಾಸ್ಟೆಲ್ ನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಹಿಂದೂ ವಿದ್ಯಾರ್ಥಿನಿಯೊಬ್ಬಳು ಮುಸ್ಲಿಂ ಹುಡುಗರೊಂದಿಗೆ ಕೊಪ್ಪದ ಕಾಡಿನಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎಂದು ವೈರಲ್ ಮಾಡಿದ್ದರು. ದೆಹಲಿ ರಿಜಿಸ್ಟ್ರೇಶನ್ ಹೊಂದಿರುವ ಸ್ವಿಫ್ಟ್ ಕಾರೊಂದರಲ್ಲಿ ಯುವತಿ ಹಾಗೂ ಮೂವರು ಯುವಕರು ಬಂದಿದ್ದರು ಎನ್ನಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಘಟನೆ ನಡೆದಿದ್ದೇನು?

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮಲೆನಾಡು ವ್ಯಾಪ್ತಿಯ ಕಪಿಲ ಕಟ್ಟೆ ಕುದುರೆಗುಂಡಿ ಗ್ರಾಮದ ಜಲಪಾತದ ಕಡೆ ಕೆಲವು ಹುಡುಗರು ಹಾಗೂ ಹುಡುಗಿಯರು ಪ್ರವಾಸಕ್ಕೆಂದು ಹೋದಂತಹ ವಿಚಾರಕ್ಕೆ ಸಂಬಂಧಿಸಿದಂತೆ ಊರಿನ ಗ್ರಾಮಸ್ಥರು ಎಲ್ಲರಿಗೂ ಎಚ್ಚರಿಕೆ ನೀಡಿ, ತಿಳಿಗೊಳಿಸಿ ವಾಪಸ್ ಕಳುಹಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಲ್ಲಿ ಸೇರಿದ್ದಂತಹ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳದಂತೆ ಪೊಲೀಸರು ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋಗೂ ಮತ್ತು ಅದಕ್ಕೆ ನೀಡಿರುವ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ. ಅಲ್ಲಿ ಯಾವುದೇ ಗಲಾಟೆ ಸಂಭವಿಸಿಲ್ಲ. ಈ ಕುರಿತು ದೂರು ಬಂದಾಗ ನಮ್ಮ ಸ್ಥಳೀಯ ಠಾಣೆಯ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. – ವಿಕ್ರಂ ಅಮಟೆ (IPS), ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಮಗಳೂರು

ಹಳೆಯ ವಿಚಾರ.. ಈಗ ವೈರಲ್!

ಘಟನೆ ನಡೆದು ವಾರ ಸಮೀಪಿಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಹಬ್ಬಿಸಿರುವಂತೆ ಯಾವುದೇ ರೀತಿಯ ಗಲಾಟೆ ಅಹಿತಕರ ಘಟನೆಗಳು ಸಂಭವಿಸಿರುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಕೂಡ ಸಂಬಂಧಪಟ್ಟ ಠಾಣೆಯಲ್ಲಿ ದಾಖಲಾಗಿಲ್ಲ. ಒಂದು ವೇಳೆ ಸುಳ್ಳು ಸುದ್ದಿ ಹರಡಿದಲ್ಲಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.