ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತ ಮುಂದಿನ 3 ದಿನ ಭಾರೀ ಮಳೆ ಸುರಿಯುವ ಎಚ್ಚರಿಕೆ ನೀಡಿದೆ. ಜು. 5, 6 ಹಾಗೂ 7 ರಂದು ಹೈ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 3 ದಿನ 115 ರಿಂದ 204 ಮಿ.ಮೀ. ಮಳೆ ಸಾಧ್ಯತೆಯಿದ್ದು ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಸಾರ್ವಜನಿಕರು, ವಾಹನ ಸವಾರರು ವಿದ್ಯುತ್ ಕಂಬ, ಮರಗಳ ಬಳಿ ನಿಲ್ಲದಂತೆ ಸೂಚನೆ ನೀಡಲಾಗಿದೆ. ಮಕ್ಕಳು ನದಿ, ಕೆರೆ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಪೋಷಕರು, ಶಾಲಾ ಮುಖ್ಯಸ್ಥರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಹಿರಿಯರು ತಮ್ಮ ಮನೆಗಳಿಂದ ಹೊರಬಾರದಂತೆ, ಅನಿವಾರ್ಯವಾದಲ್ಲಿ ಮನೆ ಸದಸ್ಯರ ಜೊತೆ ಹೊರ ಹೋಗುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು, ಸಾರ್ವಜನಿಕರು ಜಿಲ್ಲಾಡಳಿತದ ನಿರ್ದೇಶನವನ್ನು ಪಾಲಿಸುವಂತೆ ತಿಳಿಸಲಾಗಿದೆ.
ಕೆರೆ ನೀರು ಕಲುಷಿತಗೊಂಡ ಹಿನ್ನೆಲೆ ಸಾವಿರಾರು ಮೀನುಗಳು ಸಾವು
ಚಿಕ್ಕಮಗಳೂರು: ಕೆರೆ ನೀರು ಕಲುಷಿತಗೊಂಡ ಹಿನ್ನೆಲೆ ಸಾವಿರಾರು ಮೀನುಗಳು ಸತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಜೋಡಿಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆರೆ ನೀರು ಕಲುಷಿತಗೊಂಡಿದ್ದೋ, ಅಥವಾ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ್ದರಿಂದ ಮೀನುಗಳು ಸಾವನ್ನಪ್ಪಿಯೋ ಎಂಬುದು ಸ್ಪಷ್ಟವಿಲ್ಲ. ಆದರೆ, ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದಾಗಿ ತಿಳಿದು ಬಂದಿದೆ.
ಜೋಡಿ ಲಿಂಗದಹಳ್ಳಿಯ ನೂರಾರು ರೈತರು ಇದೇ ಕೆರೆ ನೀರನ್ನ ಉಪಯೋಗಿಸುತ್ತಿದ್ದಾರೆ. ಸುಮಾರು 57 ಎಕರೆಯನ್ನು ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದು ಒಂದು ಲಕ್ಷಕ್ಕೂ ಅಧಿಕ ಮೀನುಗಳನ್ನ ಕೆರೆಗೆ ಬಿಡಲಾಗಿತ್ತು. ಜಾನುವಾರಗಳು ಹಾಗೂ ಹಳ್ಳಿಗರು ನಿತ್ಯ ಉಪಯೋಗಕ್ಕೆ ಇದೇ ನೀರನ್ನು ಬಳಸುತ್ತಿದ್ದು, ಇದೀಗ ಕೆರೆಯಲ್ಲಿ ಮೀನುಗಳ ಸಾವಿನಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕೆರೆಯಲ್ಲಿ ಮೀನುಗಳ ಸಾವಿನಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಆತಂಕ ಕಾಡುತ್ತಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆ ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.