ಭೋಪಾಲ್: ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದ ಇಂದೋರ್ನಲ್ಲಿ ಭೇದಿಸಲಾದ ವೇಶ್ಯಾವಾಟಿಕೆ ದಂಧೆ ಪ್ರಕರಣದ ಮುಖ್ಯ ಆರೋಪಿ ಮುನೀರ್ ಇಲ್ಲಿವರೆಗೂ 75 ಮದುವೆ ಆಗಿರುವ ವಿಚಾರ ಬಯಲಾಗಿದೆ.
ಆರೋಪಿ ಮುನೀರ್ ಬಾಂಗ್ಲದೇಶ ಮೂಲದವನಾಗಿದ್ದು ಈತ ಭಾರತಕ್ಕೆ 200 ಮಹಿಳೆಯರನ್ನು ಕಳ್ಳಸಾಗಾಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಡ ಹೆಣ್ಣು ಮಕ್ಕಳನ್ನು ಗುರಿಯಾಗಿರಿಸಿಕೊಂಡು , ಸಹಾಯ ಮಾಡುವ ನೆಪದಲ್ಲಿ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಎಂಬ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.
ಆಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಮುನೀರ್, ಬಾಂಗ್ಲದೇಶ ಮತ್ತು ಭಾರತ ನಡುವೆ ಆರಾಮಾಗಿ ಓಡಾಡಿಕೊಂಡಿದ್ದ. ಸುಲಭವಾಗಿ ಹಣ ಮಾಡುವ ಗೀಳಿಗೆ ಬಿದ್ದಿದ್ದ ಇವನಿಗೆ ಹೆಚ್ಚಾಗಿ ಬಡ ಹೆಣ್ಣುಮಕ್ಕಳೇ ಪ್ರಮುಖ ಬಲಿಪಶುಗಳಾಗುತ್ತಿದ್ದರು. ಭಾರತದಂತಹ ಪ್ರಮುಖ ನಗರಗಳಲ್ಲಿ ಕೆಲಸ ಮತ್ತು ಕೈತುಂಬ ಹಣ ಕೊಡಿಸುವುದಾಗಿ ನಂಬಿಸಿ ಕರೆತಂದು ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದ. ಅಲ್ಲದೇ ತಾನೂ ಕೂಡ ಸುಂದರ ಯುವತಿಯರನ್ನು ಮದುವೆ ಆಗಿ ತನ್ನ ಆಸೆಗಳನ್ನು ಪೂರೈಸಿಕೊಂಡ ಬಳಿಕ ಅವರನ್ನು ಸಹ ಬಲವಂತವಾಗಿ ಅದೇ ದಂಧೆಗೆ ಇಳಿಸುತ್ತಿದ್ದ.
ಕಳೆದ ಐದು ವರ್ಷಗಳಲ್ಲಿ ಸುಮಾರು 75 ಮದುವೆ ಮಾಡಿಕೊಂಡಿರುವ ಈತ 200 ಮಹಿಳೆಯರನ್ನು ಬಾಂಗ್ಲದೇಶದಿಂದ ಪಶ್ಚಿಮ ಬಂಗಾಳ ಮಾರ್ಗವಾಗಿ ಭಾರತಕ್ಕೆ ಕಳ್ಳಸಾಗಾಣೆ ಮಾಡಿದ್ದಾನೆ.
ಕೊಲ್ಕತ್ತದ ಒಬ್ಬಳು ಬ್ಯುಟಿಷಿಯನ್ ಮಹಿಳೆಯರಿಗೆ ವಿಶೇಷ ತರಬೇತಿ ನೀಡಿ ಹೇಗೆ ಮಾತನಾಡಬೇಕು? ಹೇಗೆ ನಡೆಯಬೇಕು? ಮತ್ತು ಹೇಗೆ ಡ್ರೆಸ್ ಮಾಡಿಕೊಳ್ಳಬೇಕು ಎಂಬುದನ್ನು ತರಬೇತಿ ನೀಡಿದ ಬಳಿಕ ಬಲವಂತವಾಗಿ ಅವರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಶ್ರೀಮಂತರನ್ನು ಸಂಪರ್ಕಿಸಿ ಅವರಿಂದ ಹಣವನ್ನು ಪಡೆದುಕೊಂಡು ಮಹಿಳೆಯರನ್ನು ಸಾಗಾಟ ಮಾಡಲಾಗುತ್ತಿತ್ತು.
11 ತಿಂಗಳ ಹಿಂದೆ ಇಂದೋರ್ನ ವಿಜಯನಗರ ಏರಿಯಾ ಮೇಲೆ ದಾಳಿ ಮಾಡಿದಾಗ 21 ಬಾಂಗ್ಲಾ ಮಹಿಳೆಯರನ್ನು ಬಂಧಿಸಲಾಗಿತ್ತು. ಈ ಘಟನೆಯ ವೇಳೆ ಪ್ರಮುಖ ಆರೋಪಿ ಮುನೀರ್ ಪರಾರಿಯಾಗಿದ್ದ. ಬಳಿಕ ಮಹಿಳೆಯರನ್ನು ವಿಚಾರಣೆ ನಡೆಸಿದಾಗ ಬಂಧಿತ 21 ಮಹಿಳೆಯರಲ್ಲಿ 12 ಮಂದಿ ಮುನೀರ್ನನ್ನು ಮದುವೆ ಆಗಿದ್ದರು ಎಂಬ ವಿಚಾರ ತಿಳಿದು ಪೊಲೀಸರಿಗೆ ಶಾಕ್ ಆಗಿತ್ತು.
ನಂತರ ಈತ ಮತ್ತೊಂದು ಮದುವೆ ಆಗಿ ಆಕೆಯನ್ನು ಮಾರಾಟ ಮಾಡುವ ವೇಳೆ ಸೂರತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈವರೆಗೆ 75 ಮದುವೆ ಆಗಿರುವುದಾಗಿ ಮತ್ತು ಎಲ್ಲರನ್ನು ಮಾರಾಟ ಮಾಡಿರುವುದಾಗಿಯೂ ಮುನೀರ್ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.