Friday, June 9, 2023
Homeರಾಜ್ಯಚಿಕ್ಕಮಗಳೂರು: ಬಾರ್ ಮುಚ್ಚಲು ಮಹಿಳೆಯರಿಂದ ಧರಣಿ - ಬಾರ್ ಮುಚ್ಚದೇ ಇರಲು ಮಧ್ಯಪ್ರಿಯರಿಂದ ಹೋರಾಟ

ಚಿಕ್ಕಮಗಳೂರು: ಬಾರ್ ಮುಚ್ಚಲು ಮಹಿಳೆಯರಿಂದ ಧರಣಿ – ಬಾರ್ ಮುಚ್ಚದೇ ಇರಲು ಮಧ್ಯಪ್ರಿಯರಿಂದ ಹೋರಾಟ

ಚಿಕ್ಕಮಗಳೂರು: ಒಂದೆಡೆ ಮಹಿಳೆಯರಿಂದ ಬಾರ್ ಮುಚ್ಚುವಂತೆ ಧರಣಿ, ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಅಂಚೆ ಚೋಮನಹಳ್ಳಿಯಲ್ಲಿ ನಡೆದಿದೆ.

ಇಲ್ಲಿನ ಬಾರ್ ಮುಚ್ಚುವಂತೆ ಚಿಕ್ಕಮಗಳೂರು ಅಬಕಾರಿ ಕಚೇರಿ ಬಳಿ ಮಹಿಳೆಯರು ಧರಣಿ ನಡೆಸಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದಿದೆ. ಅಬಕಾರಿ ಕಚೇರಿಯ ಬಳಿ ಬಾರ್ ಪರ, ವಿರುದ್ಧ ಪ್ರತಿಭಟನೆ ಜೋರಾಗಿದೆ.

ಈ ಗ್ರಾಮದಲ್ಲಿ ತಿಂಗಳ ಹಿಂದೆ ಚಂದನ್ ಬಾರ್ ಎಂಬ ಬಾರ್ ಆರಂಭವಾಗಿತ್ತು. ಇದೀಗ ಅದಕ್ಕೆ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಮದ್ಯಪ್ರಿಯರು ಮಹಿಳೆಯರ ವಿರೋಧಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಬಾರ್ ಮುಚ್ಚದಂತೆ ತಾವೂ ಧರಣಿಯನ್ನು ನಡೆಸಿದ್ದಾರೆ. ಚಿಕ್ಕಮಗಳೂರಿನ ಅಬಕಾರಿ ಕಚೇರಿ ಬಳಿ ಈ ಪ್ರತಿಭಟನೆ ನಡೆದಿದೆ.

ಎಣ್ಣೆ ಬೇಕೆಂದು ಒಂದು ಗುಂಪು, ಬೇಡವೆಂದು ಮತ್ತೊಂದು ಗುಂಪು, ಬಾರ್ ಪರ- ವಿರುದ್ದ ರಸ್ತೆ ಮಧ್ಯೆ ಪ್ರತಿಭಟನೆಯನ್ನು ನಡೆಸಿದೆ. ಬಾರ್ ಬೇಡವೆಂದು ಮಹಿಳೆಯರು ಬೀದಿಗಿಳಿದಿದ್ದಾರೆ. ಬಾರ್ ಬೇಕೇ ಬೇಕೆಂದು ಮದ್ಯಪ್ರಿಯರು ಬೀದಿಗಳಿದಿದ್ದಾರೆ.

ನನ್ ಗಂಡ ಬೆಳ್ಗೆಯಿಂದ ಸಂಜೆ ತನಕ ಕುಡೀತಾನೆ ಇರ್ತಾನೆ ಸರ್. ಕುಡ್ಕೋ ಬಂದು ಹೊಡೀತಾನೆ, ಬಡೀತಾನೆ. ನಮ್ ಕಷ್ಟ ಯಾರಿಗೆ ಹೇಳೋದ್ ಸರ್. ಬಾರ್ ಹತ್ರ ಇದ್ರೆ ನನ್ನ ಗಂಡನ ಕಾಟ ಮತ್ತಷ್ಟು ಜಾಸ್ತಿಯಾಗುತ್ತೆ. ಹಾಗಾಗೀ ಬಾರ್ ಬೇಡ ಅಂತಾ ಡಿಸಿ ಅವ್ರಿಗೆ ಮನವಿ ಮಾಡೋಕೆ ಬಂದೀವಿ ಸರ್ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ.

ಇತ್ತ, ನಾನ್ ಸಂಜೆ 6 ಗಂಟೆಗೆ ಕೆಲ್ಸ ಮುಗ್ಸಿ ಬರ್ತೀನಿ, ಆಮೇಲೆ ಬಾರ್ ಹುಡ್ಕೊಂಡ್ ಬಾಣಾವಾರಕ್ಕೆ ಹೋಗ್ಬೇಕಂದ್ರೆ 10 ಕೀಲೋ ಮೀಟರ್, ಮತ್ತಿಘಟ್ಟಕ್ಕೆ ಹೋಗೋಕೂ 10 ಕೀಲೋ ಮೀಟರ್ ಆಗುತ್ತೆ. ದೇವನೂರು ಹೋಗ್ಬೇಕಂದ್ರೆ 10  ಕೀಲೋ ಮೀಟರ್. ಕುಡಿಬೇಕು ಅಂದ್ರೆ ಎಲ್ಲಾ ಬೇಲಿ ಸಾಲಲೆಲ್ಲಾ ಹೋಗ್ಬೇಕು. ನಮ್ಮೂರಲ್ಲೇ ಆದ್ರೆ ಈ ಕಷ್ಟನೇ ಇರಲ್ಲ. ಅಲ್ದೇ ಕೆಲ ಕಡೆ ಅಂಗಡಿಯಲ್ಲಿ ಕದ್ದು ಮಾರ್ತಾರೆ, ಅಲ್ಲಿ ಒನ್ ಟು ಡಬಲ್ ದುಡ್ಡು ಕೊಟ್ಟು ಕದ್ದು ಕುಡಿಯಬೇಕು. ಅಷ್ಟು ದುಡ್ಡು ಕೊಟ್ಟು ಕದ್ದು ಕುಡಿಯೋ ಹಣೆಬರಹ ಯಾಕೆ ? ಅನ್ನೋದು ಮದ್ಯಪ್ರಿಯರ ಪ್ರಶ್ನೆಯಾಗಿದೆ.

ಎರಡು ತಿಂಗಳ ಹಿಂದೆ ಮಂಚೇಗೌಡ ಎಂಬವರ ಚಂದನ್ ಬಾರ್ ಅಂಚೆಚೋಮನಹಳ್ಳಿ ಗ್ರಾಮದಲ್ಲಿ ಆರಂಭಗೊoಡಿತ್ತು. ಬಾರ್ ಏಕಾಏಕಿ ಓಪನ್ ಆದಾಗ ಅಂಚೆಚೋಮನಹಳ್ಳಿ ಗ್ರಾಮ ಪಂಚಾಯತಿ ಸೇರಿದಂತೆ ಊರಿನ ಮಹಿಳೆಯರು ಬಾರ್ ವಿರುದ್ಧ ದನಿ ಎತ್ತಿದ್ದರು. ಬಾರ್ ತೆರೆಯಬಾರದು ಎಂದು ಬಾರ್ ಮುಂದೆಯೇ ಪ್ರತಿಭಟನೆಯನ್ನು ಕೆಲದಿನಗಳ ಹಿಂದೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಬಾರ್ ಓಪನ್ ಆಗಲು ನಮ್ಮೂರಲ್ಲಿ ಬಿಡಲ್ಲ ಎಂದು ಊರಿನ ಮಹಿಳೆಯರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಪ್ರತಿಭಟನೆಯ ಬಳಿಕ ಬಾರ್‌ನನ್ನು ಕೆಲ ದಿನಗಳ ತನಕ ಮುಚ್ಚಲಾಗಿತ್ತು. ಆದರೆ, ಈಗ ಮತ್ತೆ ಬಾರ್ ಓಪನ್ ಮಾಡೋ ಸುಳಿವು ತಿಳಿದುಕೊಂಡ ಮಹಿಳೆಯರು ಶುಕ್ರವಾರ ಚಿಕ್ಕಮಗಳೂರು ಅಬಕಾರಿ, ಡಿಸಿ ಕಛೇರಿ ಎದುರು ಬಾರ್ ತೆರೆಯಬಾರದು ಎಂದು ಪ್ರತಿಭಟನೆ ನಡೆಸಿದ್ದಾರೆ. ಅಂಚೆಚೋಮನಹಳ್ಳಿ ಗ್ರಾಮದಲ್ಲಿ ಬಾರ್ ಓಪನ್ ಮಾಡಿದ್ಮೇಲೆ ಗಂಡ-ಹೆoಡತಿಯರ ಗಲಾಟೆ ಜಾಸ್ತಿಯಾಗಿದೆ. ನಮ್ ಶಾಪ ಖಂಡಿತಾ ಬಾರ್ ಓನರ್ಗೆ ತಟ್ಟೇ ತಟ್ಟುತ್ತೆ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Most Popular

Recent Comments