ಮಂಗಳೂರು: ಇ ಮೇಲ್, ಫೇಸ್ ಬುಕ್ ಮೂಲಕ ನಕಲಿ ಖಾತೆಯನ್ನು ಸೃಷ್ಟಿಸಿ ಅದರ ಮೂಲಕ ಜನರಿಂದ ಹಣವನ್ನು ದೋಚುತ್ತಿದ್ದ ಸೈಬರ್ ಕಳ್ಳರು ಈಗ ವಾಟ್ಸ್ ಆಪ್ ನಕಡೆ ದೃಷ್ಟಿ ಹಾಯಿಸಿದ್ದಾರೆ.
ಸೈಬರ್ ಕಳ್ಳರು ವಾಟ್ಸ್ ಆಪ್ ನಲ್ಲಿ ನಕಲಿ ಪ್ರೊಫೈಲ್ ನನ್ನು ಸೃಷ್ಟಿಸಿ ಜನರಿಂದ ಹಣವನ್ನು ದೋಚುವ ತಂತ್ರವನ್ನು ನಡೆಸಲು ಶುರು ಮಾಡಿದ್ದಾರೆ.
ಸೈಬರ್ ಕಳ್ಳರು ವಾಟ್ಸ್ ಆಪ್ ಸಂಖ್ಯೆಯಲ್ಲಿರುವ ವ್ಯಕ್ತಿಗಳ ಡಿಪಿ ಯಲ್ಲಿರುವ ಫೋಟೋವನ್ನು ಡೌನ್ ಲೋಡ್ ಮಾಡಿಕೊಂಡು ಬೇರೆ ಹೊಸ ಫೋನ್ ನಂಬರ್ ಗೆ ಆ ಫೋಟೋವನ್ನು ಹಾಕಿ ತನ್ನದೇ ಹೊಸ ನಂಬರ್ ಎಂದು ಜನರನ್ನು ನಂಬಿಸಿ ನಂತರ ಸುಳ್ಳು ಗೋಳಿನ ಕಥೆಯನ್ನು ಹೇಳಿ ಅವರಿಂದ ಸುಲಭವಾಗಿ ಹಣವನ್ನು ಪಡೆಯುತ್ತಿದ್ದಾರೆ.
ರಾತ್ರಿಯ ಸಮಯದಲ್ಲಿ ಕೃತ್ಯಕ್ಕೆ ಇಳಿಯುವ ಸೈಬರ್ ಕಳ್ಳರು ಜನರಿಗೆ ತಡರಾತ್ರಿಯಲ್ಲಿ ಕರೆ ಮಾಡಿ ಇಲ್ಲವೇ ಸಂದೇಶ ರವಾನಿಸಿ ವ್ಯಕ್ತಿಯ ಸ್ನೇಹವನ್ನು ಗಳಿಸಿ ನಂತರ ಆ ವ್ಯಕ್ತಿಯ ಮೊಬೈಲ್ ನಂಬರ್ ನಿಂದ ಹೊಸ ಖಾತೆಯನ್ನು ಸೃಷ್ಟಿ ಮಾಡಿ ವ್ಯಕ್ತಿಗೆ ಕರೆ ಮಾಡಿ ಓಟಿಪಿಯನ್ನು ಕೇಳಿ ಪಡೆದುಕೊಂಡು ಸಂಪೂರ್ಣವಾಗಿ ಎಲ್ಲಾ ಮಾಹಿತಿಯನ್ನು ಪಡೆಯುತ್ತಾರೆ.
ವ್ಯಕ್ತಿ ವಾಟ್ಸ್ ಆಪ್ ನಲ್ಲಿ ಸೆಕ್ಯುರಿಟಿ ಪಿನ್ ಬಳಕೆ ಮಾಡಿದ್ದರೆ ಕಳ್ಳರು ವಾಟ್ಸ್ ಆಪ್ ನ ಒಟಿಪಿಯನ್ನು ಪಡೆದರೂ ಕೂಡ ಸೆಕ್ಯುರಿಟಿ ಪಿನ್ ಅಗತ್ಯ ಇರುವುದರಿಂದ ಅವರಿಗೆ ಕೃತ್ಯ ನಡೆಸಲು ಆಗುವುದಿಲ್ಲ. ಕಳ್ಳರು ಹಣದ ಜೊತೆ ಫೋನಿನ ರಿಮೋಟ್ ಡೆಸ್ಕ್ ಟಾಪ್, ರಿಮೋಟ್ ಸ್ಕ್ರೀನ್ ಸೇವರ್ ನನ್ನು ಬಳಸಿ ಮೊಬೈಲ್ ನನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ವ್ಯಕ್ತಿಯ ವಾಟ್ಸ್ ಆಪ್ ನ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಆದ್ದರಿಂದ ವಾಟ್ಸ್ ಆಪ್ ನಲ್ಲಿ ಸೆಕ್ಯುರಿಟಿ ಪಿನ್ ಬಳಸಿ ಮೊಬೈಲ್ ನಲ್ಲಿರುವ ಸ್ನೇಹಿತರಿಗೆ ಮಾತ್ರ ಪ್ರೂಫೈಲ್ ಕಾಣುವಂತೆ ಮಾಡಬೇಕು ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.