ದೆಹಲಿ: ಅಮೆರಿಕದಲ್ಲಿ ಉತ್ತಮ ವೈದ್ಯಕೀಯ ಆರೈಕೆ ಮತ್ತು ತರಬೇತಿಯನ್ನು ಪಡೆಯಲು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮತ್ತು ಮತ್ತೊಬ್ಬ ಒಲಿಂಪಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್ಗೆ ಮುಂಚಿತವಾಗಿಯೇ ನೆರವಾಗಿದ್ದರು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್‌ರವರು ಹೇಳಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಬಿರೇನ್ ಸಿಂಗ್, “ವೇಟ್ ಲಿಫ್ಟರ್ ಮೀರಾಬಾಯಿ ಚಾನು” ಗೆ ಪ್ರಧಾನಿ ಮೋದಿ ನೀಡಿದ ಸಹಾಯದ ಬಗ್ಗೆ ತಿಳಿದು ನನಗೆ ಆಶ್ಚರ್ಯವಾಯಿತು. ಆಕೆಯ ವೈದ್ಯಕೀಯ ವೆಚ್ಚ, ತರಬೇತಿ, ಅಗತ್ಯಗಳನ್ನು ನೋಡಿಕೊಳ್ಳಲು ಪಿಎಂ ಮೋದಿ ನೆರವಾಗಿದ್ದಾರೆ. ಆಕೆಯನ್ನು ಅಮೆರಿಕಕ್ಕೆ ಕಳುಹಿಸಿ ತರಬೇತಿ ಕೊಡಿಸಿದ್ದಾರೆ. ಈ ಬಗ್ಗೆ ಸ್ವತಃ ಮೀರಾಬಾಯಿ ಚಾನು ಅವರೇ ನನಗೆ ಹೇಳಿದ್ದರು, ಎಂದಿದ್ದಾರೆ.
ಅಮೆರಿಕಕ್ಕೆ ಹೋಗಲು ಮೀರಾಬಾಯಿಗೆ ಮೋದಿಯವರು ನೆರವಾಗದೇ ಹೋಗಿದ್ದಿದ್ದರೆ, ಆಕೆಯಿಂದ ಒಲಿಂಪಿಕ್ಸ್ ನಲ್ಲಿ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಸಿಂಗ್ ಹೇಳಿದ್ದಾರೆ.
“ಚಾನುರವರಿಗೆ ಬೆನ್ನು ನೋವಿನ ಬಗ್ಗೆ ತಿಳಿದ ಕೂಡಲೇ ಮೋದಿಯವರು ಮಧ್ಯಪ್ರವೇಶ ಮಾಡಿದರು. ಆಕೆಯ ವೆಚ್ಚಗಳನ್ನು ಕೇಂದ್ರವು ಭರಿಸಿದೆ. ಕೇವಲ ಆಕೆಗೆ ಮಾತ್ರ ಮೋದಿ ಸಹಾಯ ಮಾಡದೇ. ಮತ್ತೊಬ್ಬ ಕ್ರೀಡಾಪಟುವಿಗೂ ಸಹ ಮೋದಿಯವರು ನೆರವಾಗಿದ್ದಾರೆ. ಆದರೆ, ಅವರ ಹೆಸರನ್ನು ನಾನು ಬಹಿರಂಗಗೊಳಿಸುವುದಿಲ್ಲ. ಪ್ರಧಾನಿ ಮಧ್ಯಪ್ರವೇಶದ ನಂತರ ಅವರನ್ನು ವೈದ್ಯಕೀಯ ಆರೈಕೆ, ಮತ್ತು ಹೆಚ್ಚಿನ ತರಬೇತಿಗಾಗಿ ಅಮೆರಿಕಕ್ಕೆ ಕಳುಹಿಸಲಾಗಿದೆ” ಎಂದು ಅವರು ಹೇಳಿದ್ದಾರೆ.