ನವದೆಹಲಿ(ಆ.10): ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟ ಭಾರತಕ್ಕೆ ಹೆಚ್ಚು ಸಂತಸ ತಂದು ಕೊಟ್ಟಿದೆ. ಒಟ್ಟು7 ಪದಕವನ್ನು ಗೆದ್ದಿರುವ ಭಾರತ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಇನ್ನು ಈ ಬಾರಿ ಒಲಿಂಪಿಕ್ಸ್ ನಲ್ಲಿ ಹಲವು ಪದಕಗಳು ಕೂದಲೆಳೆಯುವ ಅಂತರದಲ್ಲಿ ಕೈತಪ್ಪಿ ಹೋಗಿದೆ. ಕ್ರೀಡಾಪಟುಗಳು ದಿಟ್ಟ ಪ್ರದರ್ಶನವನ್ನು ನೀಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಈ ಸಂಭ್ರಮದ ನಡುವೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕುಸ್ತಿಪಟು ವಿನೇಶ್ ಪೋಗತ್‌ಗೆ ಆಘಾತ ಎದುರಾಗಿದೆ.
ಟೋಕಿಯೋ ಒಲಿಂಪಿಕ್ಸ್ ಕುಸ್ತಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ವಿನೇಶ್ ಪೋಗತ್‌ಗೆ ಇದೀಗ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ(WFI) ಶಿಕ್ಷೆಯನ್ನು ವಿಧಿಸಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಅಶಿಸ್ತು ತೋರಿದ ವಿನೇಶ್ ಪೋಗತ್ ನವರನ್ನು ಅಮಾನತುಗೊಳಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್ ಗ್ರಾಮದಲ್ಲಿ ಇತರ ಕ್ರೀಡಾಪಟುಗಳ ಜೊತೆ ಅಭ್ಯಾಸ ಮಾಡಲು ವಿನೇಶ್ ನಿರಾಕರಿಸಿದ್ದರು. ಹಾಗೂ ಟೀಂ ಇಂಡಿಯಾ ಪ್ರಾಯೋಜಕತ್ವದ ಕಿಟ್‌ನನ್ನು ಧರಿಸಲು ನಿರಾಕರಿಸಿದ್ದರು. ಇದು ಕ್ರೀಡಾ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಶಿಸ್ತು ತೋರಿದ ಕಾರಣಕ್ಕೆ ಅಮಾನತು ಶಿಕ್ಷೆಯನ್ನು ನೀಡಲಾಗಿದೆ ಎಂದು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ವಿನೇಶ್ ಪೋಗತ್‌ಗೆ ಭಾರತದ ಹಂಗೇರಿಯಾದಲ್ಲಿ ತರಬೇತಿಯನ್ನು ನೀಡಲಾಗಿತ್ತು. ಕೋಚ್ ವೋಲರ್ ಅಕೋಸ್ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದ ವಿನೇಶ್ ಹಂಗೇರಿಯಾದಿoದ ಟೋಕಿಯೋಗೆ ಆಗಮಿಸಿದ್ದರು. ಒಲಿಂಪಿಕ್ಸ್ ಗ್ರಾಮದಲ್ಲಿ ನೀಡಿದ್ದ ಕೋಣೆಯಲ್ಲಿ ಉಳಿದುಕೊಳ್ಳಲು ವಿನೇಶ್ ನಿರಾಕರಿಸಿದ್ದರು ಮತ್ತು ಭಾರತದ ಇತರ ಕುಸ್ತಿಪಟುಗಳೊಂದಿಗೆ ಉಳಿದುಕೊಳ್ಳಲು ವಿನೇಶ್‌ರವರು ನಿರಾಕರಿಸಿದ್ದರು. ಇಷ್ಟೇ ಅಲ್ಲ ತನಗೆ ಬೇರೆ ಮಹಡಿಯಲ್ಲಿ ರೂಮನ್ನು ನೀಡುವಂತೆ ಪಟ್ಟು ಹಿಡಿದಿದ್ದರು.
ವಿಶೇಷ ಕೋಣೆ ನೀಡದಿದ್ದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಎಚ್ಚರಿಸಿದ್ದ ವಿನೇಶ್‌ಗೆ ಬೇರೆ ಕೋಣೆಯನ್ನು ನೀಡಲಾಗಿತ್ತು. ಇನ್ನು ಭಾರತ ನೀಡಿದ್ದ ಜರ್ಸಿಯನ್ನು ತೊಡದೆ ತಮ್ಮದೆ ಜರ್ಸಿ ತೊಟ್ಟು ಅಖಾಡಕ್ಕಿಳಿದಿದ್ದ ವಿನೇಶ್ ಇದೀಗ ಸಂಕಷ್ಟ ಎದುರಿಸಬೇಕಾಗಿದೆ.
ವಿನೇಶ್ ಪೋಗತ್ ರವರಿಗೆ ನೋಟಿಸ್‌ನನ್ನು ಜಾರಿ ಮಾಡಲಾಗಿದೆ. ಆಗಸ್ಟ್ 16 ರೊಳಗೆ ನೋಟೀಸ್ ಗೆ ಉತ್ತರಿಸಲು ಕೋರಲಾಗಿದೆ. ಸಮಂಜಸ ಹಾಗೂ ತೃಪ್ತಿದಾಯಕ ಉತ್ತರ ನೀಡದಿದ್ದರೆ ನಿಷೇಧದ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು WFI ಎಚ್ಚರಿಸಿದೆ.