ಯಾದಗಿರಿ : ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬೊಮ್ಮಗುಡ್ಡ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ.
ನೀರನ್ನು ಅರಸಿ ಹೋಟೆಲ್ ಗೆ ಬಂದಂತಹ ದಲಿತ ವ್ಯಕ್ತಿಯೊಬ್ಬರಿಗೆ ಮೇಲಿನಿಂದ ನೀರನ್ನು ಸುರಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಗ್ರಾಮ ಇವತ್ತಿಗೂ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದು ಇಲ್ಲಿರುವ ಹೋಟೆಲ್ ಗಳಲ್ಲಿ ಪ್ರಬಲ ಜಾತಿಯ ಜನರು ಬಳಸುವ ಪಾತ್ರೆಗಳನ್ನು ದಲಿತರು ಬಳಸುವಂತಿರಲಿಲ್ಲ.
ಗ್ರಾಮದಲ್ಲಿ ಅಸ್ಪೃಶ್ಯತೆ ಇಂದಿಗೂ ಆಚರಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯಿಂದ ಯಾದಗಿರಿ ಎಸ್ಪಿ ವೇದಮೂರ್ತಿ ಹಾಗೂ ಸುರಪುರ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಎಚ್ಚರಿಕೆಯನ್ನು ನೀಡಿದರು.
ಗ್ರಾಮದ ಹೊಟೇಲ್ ಗಳಲ್ಲಿ ತಾರತಮ್ಯ ಮಾಡುವುದು ಹಾಗೂ ದಲಿತರು ದೇವಸ್ಥಾನಗಳ ಒಳಗೆ ಪ್ರವೇಶ ತಡೆಯುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಯಾರೇ ಇಂತಹ ಆಚರಣೆ ಮಾಡಿದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೋಟೆಲ್ ಗಳಲ್ಲಿ ಕುಡಿಯುವ ನೀರು ಅಥವಾ ವಸ್ತಗಳನ್ನು ಖರೀದಿಸಲು ಬಂದ ಪರಿಶಿಷ್ಟ ಜಾತಿಯವರನ್ನು ನಿಂದಿಸುವುದು, ಅವಮಾನಿಸುವುದು ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಅಲ್ಲದೇ ಅಸ್ಪೃಶ್ಯತೆ ತೋರುವ ಹೊಟೇಲ್ ಗಳನ್ನು ಮುಚ್ಚಿಸಲು ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಗ್ರಾಮಸ್ಥರನ್ನು ಎಚ್ಚರಿಸಿದರು.
ಯಾದಗಿರಿ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಅಸ್ಪಶ್ಯತೆ ಇನ್ನೂ ಆಚರಿಸುತ್ತಿರುವುದರಿಂದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅಸ್ಪೃಶ್ಯತೆಯನ್ನು ಆಚರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.