ಚಾಮರಾಜನಗರ: ನನ್ನ ಪ್ರಕಾರ ಒಬ್ಬ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಎಂದು ಹೇಳುವ ಮೂಲಕ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.
ಆಹಾರ ಇಲಾಖೆಯಲ್ಲಿ 4 ಕೋಟಿ 1 ಲಕ್ಷ ಫಲಾನುಭವಿಗಳಿದ್ದು, ನನ್ನ ಪ್ರಕಾರ ಒಬ್ಬ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಲುತ್ತದೆ ಎಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಗುರುವಾರ ಹೇಳಿದ್ದಾರೆ.
ಸರ್ಕಾರದಿಂದ ಆಹಾರ ಭದ್ರತೆ ಯೋಜನೆಯಲ್ಲಿ ಬಡವರಿಗೆ 5 ಕೆಜಿ ಅಕ್ಕಿ ಕೊಡುತ್ತೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಾಗ 10 ಕೆಜಿ ಅಕ್ಕಿಯನ್ನು ಸರ್ಕಾರ ಕೊಡಬೇಕು, ನಮ್ಮ ಸರ್ಕಾರ ಅಧಿಕಾರದಲ್ಲಿ ಇರುತ್ತಿದ್ದರೆ ಕೊಡುತ್ತಿದ್ದೆವು ಎನ್ನುತ್ತಾರೆ. ನನ್ನ ಪ್ರಕಾರ ಒಬ್ಬ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಕು. ಹೆಚ್ಚುವರಿ ಆಹಾರ ಧಾನ್ಯವನ್ನು ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೇರಳವಾಗಿ ಹೊರೆಯಾಗುತ್ತದೆ ಎಂದು ಹೇಳಿದರು.
ಸಚಿವ ಉಮೇಶ್ ಕತ್ತಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ರೈತ ಸಂಘದ ಕಾರ್ಯಕರ್ತರು ತೆರಕಣಾಂಬಿಯಲ್ಲಿ ಕಪ್ಪು ಬಾವುಟದ ಪ್ರದರ್ಶನವನ್ನು ಮಾಡಿದ್ದಾರೆ.