ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಿಸಿ ನೀಡಿರುವ ಹೇಳಿಕೆಗೆ ಟ್ವಿಟರ್ ನಲ್ಲಿ ವಿರೋಧ ವ್ಯಕ್ತವಾಗಿದ್ದು ನೆಟ್ಟಿಗರು ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಅನೈತಿಕ ಪೊಲೀಸ್ ಗಿರಿ ವಿಚಾರವು ತುಂಬಾ ಸೂಕ್ಷ್ಮವಾಗಿರುತ್ತದೆ. ಜನರ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಯಕ್ಷನ್ ಆಯಂಡ್ ರಿಯಾಕ್ಷನ್ ಆಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಯನ್ನು ನೀಡಿದ್ದರು.
”ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ. ದಯವಿಟ್ಟು ನಿಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರಾಜ್ಯವನ್ನು ಜಂಗಲ್ ರಾಜ್ಯವನ್ನಾಗಿ ಮಾಡಬೇಡಿ. ಅನೈತಿಕ ಪೊಲೀಸ್‌ಗಿರಿಗೆ ಬಲಿಯಾಗುತ್ತಿರುವುದು ಅಸಹಾಯಕ, ಅಮಾಯಕ ಹೆಣ್ಣುಮಕ್ಕಳು. ಸ್ತ್ರಿಪೀಡಕರ ಹೆಡೆಮುರಿಕಟ್ಟಿ ಜೈಲಿಗೆ ತಳ್ಳಬೇಕಾದ aನೀವು ಅದನ್ನು ಮಾಡದೆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ. ಕುರ್ಚಿಯ ರಕ್ಷಣೆಗಾಗಿ ಸಂಘ ಪರಿವಾರದ ಓಲೈಕೆ ನಿಮಗೆ ಅನಿವಾರ್ಯವಾಗಿರಬಹುದು. ಇದಕ್ಕಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ?” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಿಎಂ ಬೊಮ್ಮಾಯಿಯವರ ಟ್ವಿಟರ್ ಖಾತೆಗೆ ಟ್ವಿಟ್ ಮಾಡಿದ್ದಾರೆ.
ಟ್ವಿಟರ್ ಖಾತೆಯ ಬಳಕೆ ಮಾಡುವ ಸಾವಿರಾರು ಮಂದಿ ಸಿಎಂ ಬೊಮ್ಮಾಯಿಯವರ ಹೇಳಿಕೆಗೆ ಟ್ವೀಟ್ ಮಾಡಿ ಅನೈತಿಕ ಪೊಲೀಸ್ ಗಿರಿಗೆ ಪರೋಕ್ಷ ಬೆಂಬಲ ನೀಡುವ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.