ತುಮಕೂರು: ಪತ್ರಕರ್ತರೆಂದು ಹೇಳಿಕೊಂಡು ತಿರುಗಾಡಿ ಕಳ್ಳತನ ಮಾಡಿ ತಲೆಮರೆಸಿಕೊಂಡು ಓಡಾಡುತಿದ್ದ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಆ ಕಳ್ಳರು ತಮಿಳುನಾಡು ಹಾಗೂ ಕೊಯಮುತ್ತೂರಿನ ಮೂಲದವರಾಗಿದ್ದು ಪರಮೇಶ್ವರನ್ ಮತ್ತು ಹಕೀಂಭಾಷಾ ಎಂದು ತಿಳಿದುಬಂದಿದೆ. ಪರಮೇಶ್ವರನ್ ಕಾರುಗಳನ್ನು ಕದಿಯುತ್ತಿದ್ದ ನಂತರ ಹಕೀಂಭಾಷಾ ಕಳವು ಮಾಡಿದ ಕಾರುಗಳನ್ನು ಪರಮೇಶ್ವರನ್ ನಿಂದಲೇ ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ.
ಇವರು ತುಮಕೂರು, ಬೆಂಗಳೂರು, ಗೋವಾ, ತಮಿಳುನಾಡಿನಲ್ಲಿ ಕಾರನ್ನು ಕಳವು ಮಾಡುತ್ತಿದ್ದರು. ಗಾಡಿಯಲ್ಲಿ ಓಡಾಡುವಾಗ ಪತ್ರಕರ್ತನ ಗುರುತಿನ ಚೀಟಿಯನ್ನು ಪೊಲೀಸರಿಗೆ ತೋರಿಸಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಕಾರಿನ ಮೇಲೂ ಸಹ ‘ಪ್ರೆಸ್’ ಎಂದು ಹಾಕಿಕೊಂಡಿದ್ದರು. ಕಳ್ಳತನಕ್ಕೆ ಬರುವ ಸಮಯದಲ್ಲಿ ಅನುಮಾನ ಬಾರದಿರಲೆಂದು, ಕುಟುಂಬದವರ ಜತೆ ಪ್ರಯಾಣ ಮಾಡಲಾಗುತ್ತಿದೆ ಎಂದು ಪೊಲೀಸರನ್ನು ನಂಬಿಸಲು ಕಾರಿನಲ್ಲಿ ಕಾಲ್‌ಗರ್ಲ್‌ಗಳನ್ನು ಕರೆದುಕೊಂಡು ಬರುತ್ತಿದ್ದರು. ಕಳವು ಮಾಡಿದ ನಂತರ ಅಸಲಿ ನೋಂದಣಿ ಫಲಕವನ್ನು ತೆಗೆದುಹಾಕಿ, ನಕಲಿ ಫಲಕವನ್ನು ಅಳವಡಿಸಿಕೊಂಡು ತಮಿಳುನಾಡಿಗೆ ತೆಗೆದುಕೊಂಡುಹೋಗಿ ಮಾರಾಟ ಮಾಡುತ್ತಿದ್ದರು.
ತಾಲ್ಲೂಕಿನ ಮಂಚಕಲ್ ಕುಪ್ಪೆ, ನಗರದ ಬಡ್ಡಿಹಳ್ಳಿಯಲ್ಲಿ ಕಾರು ಕಳವಿನ ತನಿಖೆಯನ್ನು ನಡೆಸಿದ ಸಮಯದಲ್ಲಿ ಆರೋಪಿಗಳು ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹೆದ್ದಾರಿ ಟೋಲ್‌ಗಳಲ್ಲಿ ದಾಖಲಾದ ವಿವರ, ಮೊಬೈಲ್ ನೆಟ್‌ವರ್ಕ್ ಇತರೆ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣದ ಪತ್ತೆಯನ್ನು ಮಾಡಲಾಗಿದೆ ಇಂದು ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ರವರು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದರು.