ಬೆಂಗಳೂರು: ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿಗೆ ಸಿಲುಕಿ ತಾಯಿ, ಮಗ ಸಾವನ್ನಪ್ಪಿದ ಘಟನೆ ನಗರದ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಭದ್ರಪ್ಪ ಲೇಔಟ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, 50 ವರ್ಷ ವಯಸ್ಸಿನ ಮಂಗಳಾ ಹಾಗೂ ಅವರ ಮಗ 30 ವರ್ಷದ ಹರೀಶ್ ಮೃತಪಟ್ಟಿದ್ದಾರೆ.
ಇವರು ಸಂಜಯನಗರದ ದೊಡ್ಡ ಬೈಲದಕೆರೆ ನಿವಾಸಿಗಳಾಗಿದ್ದು ತಮ್ಮ ಜೀವನ ನಡೆಸಲು ತಳ್ಳುವಗಾಡಿಯಲ್ಲಿ ಫ್ಯಾನ್ಸಿ ವಸ್ತುಗಳ ಮಾರಾಟ ಮಾಡುತ್ತಿದ್ದರು. ಮೃತ ಹರೀಶ್ ಅಂಗವಿಕಲರಾಗಿದ್ದರು, ಪ್ರತಿನಿತ್ಯದಂತೆ ವ್ಯಾಪಾರ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ರೈಲ್ವೇ ಹಳಿ ದಾಟುವಾಗ ಈ ದುರ್ಘಟನೆ ನಡೆದಿದ್ದು , ರೈಲು ಬರುವುದನ್ನು ಗಮನಿಸದೆ ಟ್ರಾಕ್ ದಾಟಿರುವುದರಿಂದ ಈ ಘಟನೆ ಸಂಭವಿಸಿದೆಯೆoಬ ಶಂಕೆ ವ್ಯಕ್ತವಾಗಿದೆ.
ರೈಲು ಹಳಿ ದಾಟುತ್ತಿರುವಾಗ ಹಿಂದಿನಿoದ ಬಂದoತಹ ರೈಲು ಅವರಿಗೆ ಅಪ್ಪಳಿಸಿದೆ. ರೈಲು ಆಗಮನದ ಬಗ್ಗೆ ರೈಲಿನ ಲೋಕೋ ಪೈಲಟ್ ಹಾರ್ನ್ ಮಾಡಿದರೂ ಹಳಿಯಲ್ಲಿದ್ದ ಅವರು ಚಲಿಸುತ್ತಲೇ ಇದ್ದುದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಬೋರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.