ನವದೆಹಲಿ(ಆ.೦9): ಕೋವಿಡ್ ಭೀತಿಯ ನಡುವೆಯೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಭಾರತ ಈ ಬಾರಿ 7 ಪದಕಗಳನ್ನು ಗೆಲ್ಲುವುದರ ಜತೆಗೆ ಗರಿಷ್ಠ ಪದಕಗಳನ್ನು ಜಯಿಸಿದ ಸಾಧನೆ ಮಾಡಿದೆ. ಇದೀಗ ಎಲ್ಲಾ ಪದಕ ವಿಜೇತರಿಗೆ ರಾಷ್ಟ್ರ ರಾಜಧಾನಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಕ್ರೀಡಾ ಸಚಿವಾಲಯದಿಂದ ಅದ್ಧೂರಿ ಸನ್ಮಾನವನ್ನು ಆಯೋಜನೆಗೊಂಡಿದೆ.
ಈಗಾಗಲೇ ಭಾರತದ ಕೆಲವು ಪದಕ ವಿಜೇತರು ತವರಿಗೆ ವಾಪಾಸ್ಸಾಗಿದ್ದಾರೆ. ಇನ್ನು ಕೆಲವು ಕ್ರೀಡಾಪಟುಗಳು ಸೋಮವಾರವಾದ ಇಂದು ಸಂಜೆ 5.15ಕ್ಕೆ ಎರ್ ಇಂಡಿಯಾ ಎಐ 307 ವಿಮಾನದ ದೆಹಲಿಗೆ ಬಂದಿಳಿಯಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೆ ಇಂದು ಸಂಜೆ 6.3೦ ರಿಂದ 7 ಗಂಟೆಯವರೆಗೆ ಅಶೋಕ ಹೋಟೆಲ್‌ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಟೋಕಿಯೋ 2020 ಚಿನ್ನದ ಪದಕವನ್ನು ಗೆದ್ದ ನೀರಜ್ ಚೋಪ್ರಾಗೆ 1 ಕೋಟಿ ಬಹುಮಾನ ಘೋಷಿಸಿದ ಸಿಎಸ್‌ಕೆ..!
ಈ ಅದ್ಧೂರಿ ಸಮಾರಂಭದಲ್ಲಿ ಮೀರಾಬಾಯಿ ಚಾನು, ಲೊವ್ಲಿನಾ ಬೊರ್ಗೊಹೈನ್, ಪಿ.ವಿ ಸಿಂಧು, ಭಜರಂಗ್ ಪೂನಿಯಾ, ರವಿಕುಮಾರ್ ದಹಿಯಾ, ನೀರಜ್ ಚೋಪ್ರಾ ಹಾಗೂ ಭಾರತ ಪುರುಷರ ಹಾಕಿ ತಂಡವು ಪಾಲ್ಗೊಳ್ಳಲಿದೆ. ಈ ಸಂಭ್ರಮ ಕೂಟದಲ್ಲಿ ಕೇಂದ್ರದ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ ಭಾಗಿಯಾಗಲಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸಹ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗುವ ಸಾದ್ಯತೆಯಿದೆ ಎಂದು ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಜಾವಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಇನ್ನು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಕುಸ್ತಿಪಟು ರವಿಕುಮಾರ್ ದಹಿಯಾ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಇನ್ನು ಪಿ.ವಿ. ಸಿಂಧು, ಬೊರ್ಗೊಹೈನ್, ಭಜರಂಗ್ ಪೂನಿಯಾ ಹಾಗೂ ಪುರುಷರ ಹಾಕಿ ತಂಡವು ಕಂಚಿನ ಪದಕವನ್ನು ಜಯಿಸಿದ್ದಾರೆ.