Sunday, June 4, 2023
Homeಇತರೆಮಲೆನಾಡಿನ ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಬುಲೆಟಿನ್

ಮಲೆನಾಡಿನ ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಬುಲೆಟಿನ್

ಚಿಕ್ಕಮಗಳೂರು:

ಕೊಟ್ಟಿಗೆಹಾರ: ಸಂತ್ರಸ್ತರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಬಿ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಣಕಲ್ ಇಂದಿರಾನಗರ ಗಡಿ ಭಾಗದಲ್ಲಿರುವ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದ ಭಾಗದಲ್ಲಿ ಮೂಲ ಸೌಕರ್ಯ ಒದಗಿಸದೆ ಇರುವುದರಿಂದ ನೆರೆಸಂತ್ರಸ್ತರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಹಲಗಡಕ, ದುರ್ಗದಹಳ್ಳಿ, ಬಿದಿರುತಳದ 40 ನಿರಾಶ್ರಿತ ಕುಟುಂಬಗಳಿಗೆ 2020ರಲ್ಲಿ ಬಿ. ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಗಡಿ ಭಾಗದಲ್ಲಿ ಜಾಗ ನೀಡಿದ್ದರು. ಇಲ್ಲಿ ಮೂಲ ಸೌಕರ್ಯ ಇಲ್ಲದೆ, ಇಂದಿಗೂ ಬಹುತೇಕ ನೆರೆಸಂತ್ರಸ್ತರು ನೆಲೆಕಂಡುಕೊಂಡಿಲ್ಲ. ಐದು ಕುಟುಂಬಗಳು ಮಾತ್ರ ಮನೆ ನಿರ್ಮಿಸಿ ಇಲ್ಲಿ ವಾಸಿಸುತ್ತಿವೆ. ಸೌಲಭ್ಯ ಇಲ್ಲದ ಕಾರಣಕ್ಕೆ ಉಳಿದವರು ಇಲ್ಲಿ ಮನೆ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಬಣಕಲ್ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ, ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೀರು ಬಿಡುತ್ತಿರುವುದರಿಂದ ನೆರೆ ಸಂತ್ರಸ್ತರು ಪರದಾಡುವಂತಾಗಿದೆ ಎಂದರು. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೆ ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗುವ ಆತಂಕ ಎದುರಾಗುತ್ತದೆ. ಮನೆಗಳ ನಡುವಿನ ಒಳ ರಸ್ತೆಗಳ ಎರಡೂ ಬದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸಿದರೂ ಇಲ್ಲಿ ಭೂಮಿ ಸಮತಟ್ಟು ಇಲ್ಲ. ಮೂಲ ಸೌಕರ್ಯ ಮರೀಚಿಕೆ ಆಗಿರುವುದರಿಂದ ಪುನರ್ವಸತಿ ಪ್ರದೇಶದಲ್ಲಿರುವ ನೆರೆಸಂತ್ರಸ್ತರು ಈ ಬಾರಿಯ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ

ಚಿಕ್ಕಮಗಳೂರು; ಅವಾಚ್ಯ ಶಬ್ಧದಿಂದ ನಿಂದನೆ: ಪ್ರಕರಣ ದಾಖಲು

ದಲಿತ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಆಶ್ರಿಗೆರೆ ಗ್ರಾಮದಲ್ಲಿ ನಡೆದಿದೆ.

ವಿಜಯಗೌಡ ಎಂಬುವವರು ಮದ್ಯಪಾನ ಮಾಡಿ ಶಿವಣ್ಣ ಎಂಬುವವರ ಮೇಲೆ ಏಕಾಏಕಿ ಕಾರು ಹತ್ತಿಸಲು ಬಂದಿದ್ದಾರೆ. ಶಿವಣ್ಣ ಅವರು ಏಕೆ ಎಂದು ಕೇಳಿದಾಗ ಕಾರಿನಿಂದ ಕೆಳಗೆ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಇದನ್ನು ಗಮನಿಸಿದ ಸ್ಥಳಿಯರಾದ ಪಾಪಣ್ಣ ಹಾಗು ಅವರ ಮಗ ಕಾರ್ತಿಕ ಹಾಗೂ ಸಚಿನ್ ರವರು ಹಲ್ಲೆ ಬಿಡಿಸಲು ಬಂದಾಗ ಅವರ ಮೇಲೂ ಕೂಡ ಕಾರು ಹತ್ತಿಸಲು ಪ್ರಯತ್ನಿಸಿದ್ದಾರೆ. ಹಾಗೆ ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ದಾಖಲಿಸಿದ್ದಾರೆ.

ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲ್ದೂರು: ಪೊಲೀಸರಿಗೆ ಜನರ ಸಹಕಾರ ಅಗತ್ಯ: ಎಸ್ಪಿ

ಆಲ್ದೂರು ಸರ್ಕಲ್ ವ್ಯಾಪ್ತಿಯ ಮಲ್ಲಂದೂರು ಪೊಲೀಸ್ ಠಾಣೆಯ ನವೀಕೃತ ಕಟ್ಟಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉದ್ಘಾಟಿಸಿದರು. ಪೊಲೀಸ್ ಠಾಣೆ ಎಂದರೆ ಜನರಲ್ಲಿ ಸಮಸ್ಯೆ ಆದಾಗ ಮತ್ತು ಅಪರಾಧಿಗಳು ಹೆಚ್ಚಾಗಿ ಭೇಟಿ ಕೊಡುವ ಸ್ಥಳವೆನ್ನುವ ಮನೋಭಾವ ಇದೆ. ಸಾರ್ವಜನಿಕರು ನಿರ್ಭೀತಿಯಿಂದ ಠಾಣೆಗೆ ಭೇಟಿ ಕೊಡುತ್ತೇವೆ ಎಂದು ತಿಳಿಸಿದ್ದು, ಹೊಸತನಕ್ಕೆ ಮುನ್ನುಡಿ ಬರೆದಂತಾಗಿದೆ. ಪೊಲೀಸ್ ಠಾಣೆಗಳು ಮಾದರಿಯಾಗಲು ನೆರೆಹೊರೆಯವರ ಸಹಕಾರ ಅಗತ್ಯ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಜತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಹೇಳಿದರು. ಒಕ್ಕಲಿಗ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಡ್ತಾ ಪ್ರಕಾಶ್ ಮಾತನಾಡಿ, ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಪುಸ್ತಕ, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಪುಸ್ತಕಗಳು, ಕಾನೂನು ಅರಿವು ಸಂಬಂಧ ಪುಸ್ತಕಗಳನ್ನು ಇಡುವ ನೂತನ ಗ್ರಂಥಾಲಯ ಯೋಜನೆ ರೂಪಿಸಿರುವುದನ್ನು ಶ್ಲಾಘಿಸಿದರು.

ನರಸಿಂಹರಾಜಪುರ: ಹಕ್ಕುಪತ್ರ ನೀಡಲು ಕಾನೂನು ಅಡ್ಡಿ: ಶಾಸಕ ಟಿ.ಡಿ.ರಾಜೇಗೌಡ

ಅರಣ್ಯ ಇಲಾಖೆ ಒಪ್ಪಿಗೆ ಪಡೆದ ನಂತರವೇ ಹಕ್ಕು ಪತ್ರ ನೀಡಬೇಕೆಂದು ಸರ್ಕಾರವೇ ಜಿಲ್ಲಾಧಿಕಾರಿ ಮೂಲಕ ತಹಶೀಲ್ದಾರ್‌ಗೆ ಆದೇಶ ನೀಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 94ಸಿ ಅಡಿ 20 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಅರಣ್ಯ ಇಲಾಖೆ ಒಪ್ಪಿಗೆ ಪಡೆಯದೆ ಹಕ್ಕು ಪತ್ರ ನೀಡಿದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿದೆ. ಒಪ್ಪಿಗೆ ಪಡೆಯದೆ ಹಕ್ಕು ಪತ್ರ ನೀಡಿದರೆ ಸರ್ಕಾರಿ ಆದೇಶದ ಪ್ರಕಾರ ತಹಶೀಲ್ದಾರ್ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಇತ್ತ ಬಿಜೆಪಿ ಮುಖಂಡರು ನಾನು ಹಕ್ಕು ಪತ್ರ ನೀಡುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಜನರ ಗಮನಕ್ಕೆ ಬಾರದೆ ನೂರಾರು ಎಕರೆ ಭೂಮಿ ಅರಣ್ಯ ಎಂದು ಅಧಿಸೂಚನೆಯಾಗಿದೆ. ಮಹಾರಾಜರ ಕಾಲದಿಂದಲೂ ಗೋಮಾಳ ಎಂದು ನಮೂದಾಗಿದ್ದ ಜಾಗ ಈಗ ಅರಣ್ಯವಾಗಿದೆ. ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದೆ ಹಿಂದಿನಂತೆ ಹಕ್ಕು ಪತ್ರ ನೀಡಬಹುದು ಎಂದು ಸರ್ಕಾರ ಹೊಸ ಆದೇಶ ಮಾಡಲಿ, ಎಲ್ಲರಿಗೂ ಹಕ್ಕು ಪತ್ರ ಕೊಡಲು ಸಿದ್ಧನಿದ್ದೇನೆ ಎಂದರು.

ಶೃಂಗೇರಿ: ಫೆ.3 ರಂದು ನಡೆಯಲಿರುವ ಮಹಿಳಾ ಶಕ್ತಿ ಸಮಾವೇಶ ಕರಪತ್ರ ಬಿಡುಗಡೆ

ಬಿಜೆಪಿ ಪಕ್ಷದ ಸಂಘಟನೆಗಾಗಿ ಮಹಿಳಾ ಮೋರ್ಚಾ ಅವಿರತವಾಗಿ ಶ್ರಮಿಸುತ್ತಿದೆ. ಬಿಜೆಪಿ ಪಕ್ಷವು ಮಹಿಳೆಯರಿಗೆ ವಿಶೇಷವಾದ ಗೌರವವನ್ನು ನೀಡುತ್ತಿದ್ದು. ಪಕ್ಷದ ಉನ್ನತಿಗಾಗಿ ತಾಲ್ಲೂಕಿನ ಬಿಜೆಪಿ ಮುಖಂಡರು. ನಮಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾಗೇಂದ್ರ ಹೇಳಿದರು. ಶೃಂಗೇರಿ ಪ್ರವಾಸಿ ಮಂದಿರದಲ್ಲಿ ಫೆ.3ರಂದು ನಡೆಯಲಿರುವ ಮಹಿಳಾ ಶಕ್ತಿ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಫೆ.3ರಂದು ಬಿಜೆಪಿ ಮುಖಂಡ ಎಚ್.ಎಸ್ ನಟೇಶ್ ಅವರ ಲೇಜೌಟ್‌ನಲ್ಲಿ ಬೆಳಿಗ್ಗೆ 10ಗಂಟೆಗೆ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸಂಪರ್ಕಿಸಿ ಸಮಾವೇಶಕ್ಕೆ ಅಹ್ವಾನ ನೀಡಿದ್ದು 2000ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ಬಿಜೆಪಿ ಮುಖಂಡರಾದ ಭಾಗ್ಯಲಕ್ಷ್ಮಿ ನಾಗೇಂದ್ರ, ವೇಣುಗೋಪಾಲ್, ರಂಗನಾಥ್ ಮಾವಿನಕಾಡು, ಶೃಂಗೇರಿ ಶಿವಣ್ಣ , ನೂತನ್ ಕುಮಾರ್, ಶಿಲ್ಪಾ ಮಂಜುನಾಥ್,ಸುಜಾತಾ ರಮೇಶ್, ವಿದ್ಯಾ, ಸುಮಾ ಸೋಮಶೇಖರ್ ಇದ್ದರು.

ಚಿಕ್ಕಮಗಳೂರು: ಮೋದಿ ನೂರು- ಮುನ್ನೂರು ವರ್ಷದ ಬಗ್ಗೆ ಯೋಚಿಸಿ ಬಜೆಟ್ ಮಾಡಿದ್ದಾರೆ: ಸಿ.ಟಿ ರವಿ

ಪೊಲಿಟಿಷಿಯನ್ ಮತ್ತು ಸ್ಟೇಟ್ಸ್ ಮ್ಯಾನ್ ನಡುವೆ ದೊಡ್ಡ ಅಂತರವಿರುತ್ತದೆ. ಪೊಲಿಟಿಷಿಯನ್ ಮುಂದಿನ ಚುನಾವಣೆಗೋಸ್ಕರ ಯೋಚನೆ ಮಾಡುತ್ತಾರೆ ಆದರೆ ಸ್ಟೇಟ್ಸ್ ಮ್ಯಾನ್ ಮುಂದಿನ ನೂರು, ಮುನ್ನೂರು ವರ್ಷ ಭಾರತ ಹೇಗೆ ಇರಬೇಕೆಂಬ ಯೋಚನೆ ಮಾಡುತ್ತಾರೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಟೇಟ್ಸ್ ಮ್ಯಾನ್, ಅವರು ಜಗತ್ತು ಹೇಗೆ ಇರುತ್ತದೆ ಎನ್ನುವುದು ಯೋಚನೆ ಮಾಡಿ ಬ ಜೆಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಸ್ಟೇಟ್ಸ್ ಮ್ಯಾನ್ ಅಧಿಕಾರ ನಡೆಸುತ್ತಿರುವುದಕ್ಕೆ ಜಗತ್ತಿನಲ್ಲಿ ನಾವು ಗೌರವ ಸಂಪಾದಿಸುವ ಸ್ಥಿತಿಗೆ ಬಂದಿದ್ದೇವೆ. ಹಾಗೆ ಆಗದೇ ಇದ್ದಿದ್ದರೆ ನಾವು ಕೂಡ ಪಾಕಿಸ್ಥಾನದ ರೀತಿಯಲ್ಲಿ ಭಿಕ್ಷೆ ಎತ್ತುವ ಸ್ಥಿತಿಗೆ ಬರುತ್ತಿದ್ದೆವು. ಕೇಜ್ರಿವಾಲ್ ಅಂತವರು ಅಧಿಕಾರದಲ್ಲಿ ಇದ್ದಿದ್ದರೆ ಶ್ರೀಲಂಕಾ, ಪಾಕಿಸ್ಥಾನದ ಸ್ಥಿತಿಗೆ ಬರುತ್ತಿತ್ತು. ರಾಹುಲ್ ಗಾಂಧಿ ತರಹದವರು ಇದ್ದಿದ್ದರೆ ದೇವರೆ ಕಾಪಾಡಬೇಕಾಗಿತ್ತು ಎಂದರು.

ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್, ದೂರು ದಾಖಲು

ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮನೋಜ್ ಗೌಡ ಎಂಬುವವರು ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಶಿವು ಎಂಬುವವರ ಮೇಲೆ ರಾಜೇಗೌಡರು ಹಲ್ಲೆ ಮಾಡಿಸಿದ್ದಾರೆ, ರೌಡಿ ಪ್ರವೃತ್ತಿಯ ಶಾಸಕರು ಎಂದು ಅವಹೇಳನಕಾರಿ ಪೋಸ್ಟ್ ಮಾಡಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಶೃಂಗೇರಿ ಕ್ಷೇತ್ರ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ರತನ್ ಗೌಡ ದೂರು ನೀಡಿದ್ದಾರೆ

ಕೇಂದ್ರ ಬಜೆಟ್‌ ನಲ್ಲಿ ಮಲೆನಾಡಿಗೆ ಸಿಕ್ಕಿದ್ದೇನು ?

ಇಂದು ಸಂಸತ್‌ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದು, ಕರ್ನಾಟಕ ಕೇಂದ್ರದ ಬಜೆಟ್‌ ಮೇಲೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಇದೀಗ ನಿರೀಕ್ಷೆಯಲ್ಲಿ ಕೆಲವು ಯೋಜನೆಗಳಿಗೆ ಅನುದಾನ ದೊರೆತಿದ್ದು, ಕರ್ನಾಟಕಕ್ಕೆ ಬಂಪರ್‌ ಆಫರ್‌ ದೊರೆತಿದೆ. ಕರ್ನಾಟಕದ ಬರಪೀಡಿತ ಪ್ರದೇಶಗಳ ಅಭಿವೃದ್ದಿಗೆ ಕೇಂದ್ರ ಸರಕಾರ ಆದ್ಯತೆ ನೀಡಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡಿದೆ. ಇದರಿಂದ ಈ ಯೋಜನೆಗೆ ಮತ್ತಷ್ಟು ಬಲ ಬರಲಿದ್ದು, ಹನಿ ನೀರಾವರಿ ಮೂಲಕ ಸೌಲಭ್ಯ ಕಲ್ಪಿಸುವ ಬೃಹತ್‌ ಗಾತ್ರದ ನೀರಾವರಿ ಯೋಜನೆ ಇದಾಗಿದ್ದು, ರಾಜ್ಯದ ಇತರ ನೀರಾವರಿ ಯೋಜನೆಗೆ ಮಾದರಿಯಾಗಿದೆ. ಮಳೆಯಾಶ್ರಿತ ಕೃಷಿಯನ್ನೇ ನಂಬಿಕೊಂಡ ರೈತರ ಬದುಕು ದುರ್ಬಲವಾದ ಬಳಿಕ ರೂಪುಗೊಂಡ ಯೋಜನೆಯೇ ಭದ್ರಾ ಮೇಲ್ದಂಡೆ. ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಜಲಾಶಯದಿಂದ ಮಧ್ಯಕರ್ನಾಟಕಕ್ಕೆ ನೀರುಣಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದ್ದು, 29.90 ಟಿ.ಎಂ.ಸಿ. ಅಡಿ ನೀರನ್ನು ಮೇಲ್ದಂಡೆಗೆ ಮೀಸಲಿಟ್ಟು ಯೋಜನೆ ರೂಪಿಸಲಾಗಿದೆ.
ಕಳೆದ ಎರಡು ದಶಕಗಳಲ್ಲಿ ಬರೋಬ್ಬರಿ 15 ಕ್ಕೂ ಅಧಿಕ ವರ್ಷಗಳ ಕಾಲ ಕರ್ನಾಟಕ ಬರಗಾಲವನ್ನು ಅನುಭವಿಸಿದೆ. ಇದರಿಂದಾಗಿ ಅಂತರ್ಜಲದ ಮಟ್ಟವು ಗಣನೀಯ ಮಟ್ಟದಲ್ಲಿ ಇಳಿಕೆಯಾಗುತ್ತಿದೆ. ಬರಗಾಲ ಪೀಡಿತ ಪ್ರದೇಶಗಳಿಗೆ ಅಗತ್ಯ ನೆರವು ನೀಡುವಂತೆ ರಾಜ್ಯ ಸರಕಾರ ಈ ಹಿಂದೆಯೇ ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನೆರವು ಘೋಷಣೆ ಮಾಡಲಾಗಿದೆ. ಕರ್ನಾಟಕದ ಹಾಸನ, ಹಾಗೂ ಮುಂತಾದ ಜಿಲ್ಲೆಗಳು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಹಲವು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿತ್ತು. ಇದೀಗ ಈ ಪ್ರದೇಶಗಳಿಗೆ ಆರ್ಥಿಕ ನೆರವು ನೀಡಿರುವುದು ಜನರಿಗೆ ನಿಟ್ಟುಸಿರು ಬಿಡುವಂತಾಗಿದೆ.

ಚಿಕ್ಕಮಗಳೂರು: ಕಲುಷಿತಗೊಂಡು ಅಪವಿತ್ರವಾಗುತ್ತಿದೆ ಪವಿತ್ರ ಕಲ್ಲತ್ತಿಗಿರಿ ಕ್ಷೇತ್ರ

ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಕಲ್ಲತ್ತಿಗಿರಿ ಜಲಪಾತ ಹಾಗೂ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಬರುವ ಭಕ್ತರು ಹಾಗೂ ವಾರಾಂತ್ಯದ ದಿನಗಳಲ್ಲಿ ಬರುವ ಕೆಲ ಪ್ರವಾಸಿಗರಿಂದ ಕ್ಷೇತ್ರ ಅಪವಿತ್ರವಾಗುತ್ತಿದೆ. ದೇವಸ್ಥಾನ ಹಾಗೂ ಫಾಲ್ಸ್ ಗೆ ಬರುವ ಪ್ರವಾಸಿರು ಪುಣ್ಯ ಕ್ಷೇತ್ರದಲ್ಲಿ ಬಟ್ಟೆ ಬರೆ ಎಸೆದು ಅಪವಿತ್ರ ಸ್ಥಳವನ್ನಾಗಿ ಮಾಡುವುದರ ಜೊತೆಗೆ ಪ್ರಾಕೃತಿಕ ಸೌಂದರ್ಯವನ್ನು ಹಾಳುಗೆಡವುತ್ತಿರುವುದು ಸ್ಥಳೀಯರು ಹಾಗೂ, ಪರಿಸರಾಸಕ್ತ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿಗೆ ಬರುವ ಕೆಲವರು ಮೂಡನಂಬಿಕೆಯ ಹೆಸರಲ್ಲಿ ತಮ್ಮ ಹಳೆಯ ಬಟ್ಟೆಗಳನ್ನು ಇಲ್ಲಿಯೇ ಬಿಟ್ಟು ಹೋಗುವುದರಿಂದ ಇಲ್ಲಿನ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುವುದರ ಜೊತೆಗೆ ಪುಣ್ಯ ಕ್ಷೇತ್ರ ಮಲಿನವಾಗುತ್ತದೆ ಎಂದು ಧಾರ್ಮಿಕವಾಗಿ ನಂಬಿಕೆ ಉಳ್ಳವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

ಪಕ್ಷ ತೊರೆದು ವಿರೋಧಿ ಪಕ್ಷ ಬಿಜೆಪಿ ಸೇರ್ಪಡೆಯಾಗಿದ್ದ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ನಡೆಸಿದ ಘಟನೆ ಜಿಲ್ಲೆಯ ಎನ್​.ಆರ್​.ಪುರ ತಾಲೂಕಿನ ನಾಗಲಾಪುರ ಸಮೀಪದ ರಾವುರು ಗ್ರಾಮದಲ್ಲಿ ನಡೆದಿದೆ. ಶಿವು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ಕಾರ್ಯಕರ್ತನಾಗಿದ್ದು, ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಹಿಂಬಾಲಕರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್​ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಶಿವು ಕಳೆದ ತಿಂಗಳು ಪಕ್ಷ ತೊರೆದು ಕೇಸರಿ ಪಡೆ ಸೇರಿದ್ದರು. ಇದು ಶಾಸಕ ಟಿ.ಡಿ.ರಾಜೇಗೌಡ ಅವರ ಬೆಂಬಲಿಗರ ಕಣ್ಣು ಕೆಂಪಗಾಗಿಸಿದ್ದವು. ಬಿಜೆಪಿ ಸೇರಿದ ವಿಚಾರವಾಗಿ ಶಿವು ಜೊತೆ ಶಾಸಕರ ಹಿಂಬಾಲಕರು ಗಲಾಟೆ ಕೂಡ ಮಾಡಿದ್ದರು. ಇಂದು ಮನೆಗೆ ನುಗ್ಗಿ ಶಿವು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಶಿವುನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎನ್​.ಆರ್​.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಳೆಹೊನ್ನೂರು: ಅವಾಚ್ಯ ಪದಗಳಿಂದ ನಿಂದನೆ: ಬಿಜೆಪಿ ಮುಖಂಡನ ವಿರುದ್ಧ ಪ್ರತಿಭಟನೆ

ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಸಾರ್ವಜನಿಕ ಸಮಾರಂಭದಲ್ಲಿ ಬಿ.ಕಣಬೂರು ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಪಟ್ಟಣದ ಜೇಸಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಂಚಾಯಿತಿ ಸದಸ್ಯ ಬಿ.ಕೆ.ಮಧುಸೂದನ್ ಅವರು ಮಾತನಾಡಿ ಎಲ್ಲರಿಗೂ ಅವರದ್ದೇ ಆದ ಗೌರವವಿದೆ. ಅದನ್ನು ಕಳೆಯಲು ಹೋಗಬಾರದು. ಶಾಸಕರ ವಿರುದ್ಧ ಕೂಡ ಕೆಟ್ಟದಾಗಿ ಮಾತನಾಡಿದ್ದಾರೆ. ಗ್ರಾಮ ಪಂಚಾಯಿತಿ ಸಾರ್ವಜನಿಕರಿಗೆ ಮುಕ್ತವಾಗಿದೆ. ಮಾತಿನ ಭರದಲ್ಲಿ ಬಳಸಿದ ಪದ ಪ್ರಯೋಗದ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

.ಶಿವಮೊಗ್ಗ:

ತೀರ್ಥಹಳ್ಳಿ: ರೈತರು ಸಹಕರಿಸಿದರೆ ಭೂದಾಖಲೆ ಲಭ್ಯ: ಆರಗ ಜ್ಞಾನೇಂದ್ರ

ಮಲ್ಲಂದೂರು ಭಾಗದಲ್ಲಿ ನೂರಾರು ವರ್ಷಗಳಿಂದ ಜನಜೀವನ ಇದೆ. ಭೂ ಸುಧಾರಣೆ ಕಾಯ್ದೆ ಜಾರಿಗೊಂಡಿದ್ದರೂ 50 ವರ್ಷಗಳಿಂದ ಜಮೀನು ದಾಖಲೆ ಲಭಿಸಿಲ್ಲ. ರೈತರು ಸಹಕರಿಸಿದರೆ ತಕ್ಷಣ ಕ್ರಮ ಬದ್ಧ ದಾಖಲೆ ಪಡೆಯಲು ಸಾಧ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತಾಲ್ಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ಮಲ್ಲಂದೂರು ಮಜರೆಹಳ್ಳಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಭೂ ಸುಧಾರಣೆ ಕಾಯ್ದೆಯಡಿ ಮಂಜೂರಾದ ಸಾಗುವಳಿ ಪ್ರದೇಶವನ್ನು ತಕ್ಷಣ ಸರ್ವೆ ಮಾಡಿ ರೈತರಿಗೆ ಸೂಕ್ತ ದಾಖಲೆ ಒದಗಿಸಲು ಕ್ರಮ ಕೈಗೊಳ್ಳಬೇಕು. ವಾರದೊಳಗೆ ಸರ್ವೆ ಕಾರ್ಯ ಅಂತಿಮವಾಗಬೇಕು. ಇನಾಂ ಸಾಗುವಳಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಕಂದಾಯ ಇಲಾಖೆ ರೈತರಿಗೆ ಮಾಹಿತಿ ನೀಡಬೇಕು. ಜಮೀನು ಮಂಜೂರಾತಿಗೆ ಭೂ ನ್ಯಾಯಾಧಿಕರಣ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಾಗರ: ಶಂಕುಸ್ಥಾಪನೆ ಆಗಿರುವ ಎಲ್ಲ ಕಾಮಗಾರಿ ಆರಂಭಿಸಿ: ಹಾಲಪ್ಪ ಹರತಾಳು

ಸಾಗರ ತಾಲ್ಲೂಕಿನಲ್ಲಿ ಶಂಕುಸ್ಥಾಪನೆ ಆಗಿರುವ ಎಲ್ಲ ಕಾಮಗಾರಿಗಳ ಕೆಲಸಗಳನ್ನು ಕೂಡಲೇ ಆರಂಭಿಸುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಸೂಚನೆ ನೀಡಿದ್ದಾರೆ. ಇಲ್ಲಿನ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ  ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರ್ಮಿತಿ ಕೇಂದ್ರ, ಕರ್ನಾಟಕ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ಕಾಮಗಾರಿಗಳನ್ನು ನಿರ್ವಹಿಸಬೇಕಾದ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಯಾವುದೇ ನೆಪ ಹೇಳದೇ ಕೂಡಲೇ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ನಿರ್ದೇಶಿಸಿದರು. ತಾಲ್ಲೂಕಿನ ಚಿಕ್ಕಮತ್ತೂರು ಗ್ರಾಮದಲ್ಲಿ ಏಳು ವಿದ್ಯುತ್ ಕಂಬಗಳನ್ನು ಕಿಡಿಗೇಡಿಗಳು ನಾಶಪಡಿಸಿರುವ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಈ ಬಗ್ಗೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮೆಸ್ಕಾಂ ಅಧಿಕಾರಿಯನ್ನು ಶಾಸಕರು ಪ್ರಶ್ನಿಸಿದರು. ಕಂಬಗಳನ್ನು ನಾಶಪಡಿಸಿರುವ ಬಗ್ಗೆ ದೂರು ನೀಡಿದರೂ ಪ್ರಕರಣ ದಾಖಲಾಗಿಲ್ಲ ಎಂಬ ಸಂಗತಿಯನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ತಪ್ಪು ಮಾಡಿದವರು ಯಾರು ಎಂಬ ವಿಷಯ ಗೊತ್ತಿದ್ದರೂ ಅದನ್ನು ಪೊಲೀಸರಿಗೆ ಹೇಳಲು ಮೆಸ್ಕಾಂ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ’ ಎಂದು ಕೆಡಿಪಿ ಸದಸ್ಯರಾದ ದೇವೇಂದ್ರಪ್ಪ, ಸುವರ್ಣ ಟೀಕಪ್ಪ ದೂರಿದರು.

ಶಿವಮೊಗ್ಗ: ಕೊಠಡಿ ನಿರ್ಮಾಣಕ್ಕೆ ಅನುದಾನ ಶೀಘ್ರ: ಶಾಸಕ ಈಶ್ವರಪ್ಪ

ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಹೆಚ್ಚಿನ ಕಾಲೇಜು ಕೊಠಡಿ ನಿರ್ಮಾಣಕ್ಕೆ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು. ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಸಾಂಸ್ಕೃತಿಕ, ಕ್ರೀಡಾ, ಎನ್‌ಸಿಸಿ, ಎನ್ಎಸ್ಎಸ್, ಯುವ ರೆಡ್ ಕ್ರಾಸ್, ರೋವರ್ಸ್- ರೇಂಜರ್ಸ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು ಒತ್ತಡದ ಸ್ಥಿತಿಯಲ್ಲಿ ವಿದ್ಯೆ ಕಲಿಯುವುದು ಬೇಡ. ಶೀಘ್ರದಲ್ಲಿ ಕಾಲೇಜು ಕೊಠಡಿ ನಿರ್ಮಾಣಕ್ಕೆ ಸರ್ಕಾರದ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಹಾಸನ:

ಹಾಸನ: ಫೆ.3ರಂದು ಹಾಸನ ಜಿಲ್ಲೆಯ ಎಲ್ಲ ಕ್ಷೇತ್ರದ ಟಿಕೆಟ್‌ ಫೈನಲ್‌: ಎಚ್‌.ಡಿ.ಕುಮಾರಸ್ವಾಮಿ

ಹಾಸನ ಜಿಲ್ಲೆಯ ಪಕ್ಷದ ಟಿಕೆಟ್‌ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಫೆ.3ರಂದು ಜಿಲ್ಲೆಯ ಎಲ್ಲ 7 ಕ್ಷೇತ್ರಗಳ ಟಿಕೆಟ್‌ ಫೈನಲ್‌ ಮಾಡಲಾಗುವುದು. ಫೆ.4ರಂದು ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಪಂಚರತ್ನ ರಥಯಾತ್ರೆ ಅಂಗವಾಗಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರೆಕುಪ್ಪ ಹಾಗೂ ದಾವಣಗೆರೆ ಜಿಲ್ಲೆ ಕೊಂಡಜ್ಜಿಯಲ್ಲಿ ಮಾತನಾಡಿ, ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಪಕ್ಷದಿಂದ ಒಳ್ಳೆಯ ಅಭ್ಯರ್ಥಿ ಹಾಕಿ. ನಾವು ನಿಮ್ಮ ಋುಣ ತೀರಿಸುತ್ತೇವೆ ಎಂದು ಜನರೇ ಹೇಳುತ್ತಿದ್ದಾರೆ. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೊತೆ ಚರ್ಚಿಸಿ ಫೆ.ರಂದು 40-50 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಹಾಸನ: ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಐವರ ಬಂಧನ

ಅರಕಲಗೂಡು, ಅರೇಹಳ್ಳಿ, ಜವಗಲ್, ಪೆನ್‌ಷನ್ ಮೊಹಲ್ಲಾ ಹಾಗೂ ಬಾಣಾವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿ 14,81,000 ರೂ., ಮೌಲ್ಯದ 112 ಕೆಜಿ 299 ಗ್ರಾಂ ತೂಕದ ಗಾಂಜ ವಶ ಪಡಿಸಿಕೊಳ್ಳಲಾಗಿದೆ. ಡ್ರಗ್ ಡೆಸ್ಟ್ರಾಯ್ ಕಮಿಟಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವೈಜನಿಕ ಘಟಕದಲ್ಲಿ, ವಶಪಡಿಸಿಕೊಂಡ ಗಾಂಜವನ್ನು ಇಂದು ನಾಶಪಡಿಸಲಾಗುವುದು. ಅರಕಲಗೂಡು ಪೊಲೀಸ್ ಠಾಣೆ ಪ್ರಕರಣದಲ್ಲಿ ಪೇಪರ್ ಪ್ಲೇಟ್ ವರ್ಕ್ಸ್ ಬೀರಲಿಂಗೇಶ್ವರ ಎಣ್ಣೆ ಮಿಲ್ ಬಿಲ್ಡಿಂಗ್ ಕೋಟೆ ನಿವಾಸಿ ಹೃತ್ವಿಕ್ ಎಸ್.ಆರ್ ಎಂಬಾತನನ್ನು ಬಂಧಿಸಿ 13 ಸಾವಿರ ಬೆಲೆಯ 700ಗ್ರಾಂ. ಗಾಂಜ ವಶಪಡಿಸಿಕೊಳ್ಳಲಾಗಿದೆ. ಅರೇಹಳ್ಳಿ ಪೊಲೀಸರು, ಅಸ್ಸಾ ಮೂಲದ ಮಹಮದ್ ಅಸಾದ್ದುಲ್ಲಾ ಇಸ್ಲಾಂ ಎಂಬಾತನನ್ನು ಬಂಧಿಸಿ 8 ಸಾವಿರ ಬೆಲೆಯ 65 ಗ್ರಾಂ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಅರಸೀಕೆರೆ ತಾಲೂಕು ಮುದ್ದನಹಳ್ಳಿ ಗ್ರಾಮದ ಅರುಣ್ ಎಂಬಾತನನ್ನು ಜವಗಲ್ ಪೊಲೀಸರು ಬಂಧಿಸಿ 10ಸಾವಿರ ಮೌಲ್ಯದ 700 ಗ್ರಾಂ. ಗಾಂಜ ಸೀಜ್ ಮಾಡಿದ್ದಾರೆ. ಪೆನ್‌ಷನ್ ಮೊಹಲ್ಲಾ ಪೊಲೀಸರು ಒಂದು ಪ್ರಕರಣದಲ್ಲಿ ವಲ್ಲಾಭಾಯ್ ರಸ್ತೆ 2ನೇ ಕ್ರಾಸ್ ನಿವಾಸಿ ಇಮ್ರಾನ್ ಎಂಬಾತನನ್ನು ಬಂಧಿಸಿ 1.50 ಲಕ್ಷ ರೂ. ಬೆಲೆಯ 4ಕೆ.ಜಿ. 750 ಗ್ರಾಂ. ಗಾಂಜ ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಬಾಣಾವರ ಪೊಲೀಸರು ಇದೇ ಹೋಬಳಿಯ ದೊಡ್ಡೇನಹಳ್ಳಿ ಗ್ರಾಮದ ಸಂತೋಷ ಎಂಬಾತನನ್ನು ಬಂಧಿಸಿ ಬರೋಬ್ಬರಿ 13 ಲಕ್ಷ ರೂ. ಬೆಲೆಯ 106 ಕೆ.ಜಿ. 84 ಗ್ರಾಂ ತೂಕದ ಗಾಂಜ ವಶ ಪಡಿಸಿಕೊಂಡು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಾಸನ: ಶಾಸಕ ಪ್ರೀತಂಗೌಡ ಮನೆಗೆ ಮುತ್ತಿಗೆ ಹಾಕಿದ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು

ಕಳೆದ ನಾಲ್ಕು ತಿಂಗಳಿನಿಂದ ಸಂಬಳ ಕೊಡದ ಕಾರಣ ನಾವು ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದ್ದು, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಂಬಳ ಕೊಡುವಂತೆ ಆಗ್ರಹಿಸಿ ಕಸವಿಲೇವಾರಿ ವಾಹನ ಮತ್ತು ಟಿಪ್ಪರ್ ವಾಹನ ಚಾಲಕರು ಹಾಗೂ ಸಹಾಯಕರು ಇಂದು ತಮ್ಮ ಕೆಲಸವನ್ನು ಸಥಗಿತಗೊಳಿಸಿ ಬೆಳ್ಳಂಬೆಳಿಗ್ಗೆ ಹಾಸನ ಕ್ಷೇತ್ರದ ಶಾಸಕರಾದ ಪ್ರೀತಂ ಜೆ.ಗೌಡರ ಮನೆಗೆ ಮುತ್ತಿಗೆ ಹಾಕಿ ಆಗ್ರಹಿಸಿದರು. ಅಫೆ ವಾಹನ ಚಾಲಕರ ಸಂಘದ ವಿಶ್ವ ಮಾಧ್ಯಮದೊಂದಿಗೆ ಮಾತನಾಡಿ, ಟೆಂಡರ್ ಬೇಸಿಕ್ ಮೇಲೆ ಪ್ರತಿತಿಂಗಳು ನಮಗೆ ಸಂಬಳ ಕೊಡಬೇಕಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ನಮಗೆ ಸಂಬಳ ಕೊಡುತ್ತಿಲ್ಲ. ನಾವು ಅಫೆ ವಾಹನ ಓಡಿಸಿ ಕಸವಿಲೇವಾರಿ ಮಾಡಿ ಬಂದ ಸಂಬಳದಲ್ಲಿ ಜೀವನ ಸಾಗಿಸಬೇಕು. ಬೆಳಿಗ್ಗೆ 5 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೂ ನಾವು ಕೆಲಸ ಮಾಡುತ್ತೇವೆ. ಸರಿಯಾಗಿ ಸಂಬಳ ಕೊಡದ ಕಾರಣ ನಗರಸಭೆ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಂಬಳ ಕೇಳಿದರೇ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ನೀವು ನಮ್ಮನ್ನು ಕೇಳಿ ಕೆಲಸಕ್ಕೆ ಬಂದಿದ್ದೀರಾ ಎಂದು ನಮಗೆ ಉಢಾಪೆ ಉತ್ತರ ಕೊಡುತ್ತಾರೆ ಎಂದು ದೂರಿದರು.

ಕೊಡಗು:

ಕೊಡಗು: ಕೇರಳದಿಂದ ಕಸ ತಂದು ರಾಜ್ಯದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರ ಬಂಧನ

ಕೇರಳದಿಂದ ಕಸ ತಂದು ಇಲ್ಲಿನ ಮಾಕುಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಪೆಂಚಾಳಯ್ಯ ಹಾಗೂ ಶೀನ ಬಂಧಿತರು. ಇವರು ಆಂಧ್ರಪ್ರದೇಶದಿಂದ ಸರಕುಗಳನ್ನು ಕೇರಳಕ್ಕೆ ಸಾಗಿಸಿ ವಾಪಸ್ ಬರುತ್ತಿದ್ದ ಖಾಲಿ ವಾಹನದಲ್ಲಿ 15 ಮೂಟೆ ಕಸವನ್ನು ತೆಗೆದುಕೊಂಡು ಬಂದು ಇಲ್ಲಿನ ಕೂಟುಹೊಳೆ ಸೇತುವೆ ಸಮೀಪ ಕಸದ ಮೂಟೆಗಳನ್ನು ಎಸೆಯುತ್ತಿದ್ದರು. ಈ ವೇಳೆ ಬ್ರಹ್ಮಗಿರಿ ವನ್ಯಜೀವಿ ವಲಯ ಹಾಗೂ ಮಾಕುಟ್ಟ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿತು.

Most Popular

Recent Comments