Sunday, June 4, 2023
Homeಲೇಖನಗಳುಅಚಾನಕ್ಕಾಗಿ ಪೊದೆಯಲ್ಲಿ ಸಿಕ್ಕ ಹಣದ ಥೈಲಿಯನ್ನು ಕಂಡು ಕೆರಳಿದ ಗುಂಡನ ಕನಸು

ಅಚಾನಕ್ಕಾಗಿ ಪೊದೆಯಲ್ಲಿ ಸಿಕ್ಕ ಹಣದ ಥೈಲಿಯನ್ನು ಕಂಡು ಕೆರಳಿದ ಗುಂಡನ ಕನಸು

ಇದೆ ಎಂದರೆ ಇದೆ, ಇಲ್ಲವೆಂದರೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳಕು, ಸಂಜೆ ಆರರ ಹೊತ್ತು. ರಸ್ತೆಯ ಬದಿಯಲ್ಲಿ ಕಪ್ಪಗಿನ ಅಂಗುಲ ಗಾತ್ರದ ಆಕಾರವೊಂದು ಬಿದ್ದಿದೆ, ಸಗಣಿ ಎಂಬ ನಿರ್ಲಕ್ಷ್ಯದ ನಡಿಗೆಯಲ್ಲೇ ಹತ್ತಿರ ಬಂದವನಿಗೆ ಕಂಡದ್ದು ಮಾತ್ರ ಕಪ್ಪು ಬಣ್ಣದ ಚರ್ಮದ ಕೊಂಚ ದುಬಾರಿ ಎನ್ನಿಸುವ ಬ್ಯಾಗ್. ಅರರೆ…. ಎಂದುಕೊಳ್ಳುತ್ತ ಸುತ್ತ ಮುತ್ತ ನೈಜವಾಗಿ ನೋಡುವಂತೆ ನಾಟಕೀಯವಾಗಿ ಯಾರಾದರೂ ಬರುತ್ತಿದ್ದಾರೆಯೇ ಎಂದು ನೋಡಿ ರಪಕ್ಕನೆ ಬ್ಯಾಗ್ ಎತ್ತಿಕೊಂಡು ರಸ್ತೆಯ ಬದಿ ಪೊದೆಯೊಳಗೆ ನುಗ್ಗಿ ಬಿಟ್ಟ ಗುಂಡ .

ಕನಸುಗಾರ ಗುಂಡನ ತಲೆಗೆ ಹತ್ತಾರು ಯೋಚನೆಗಳು ಮಿಂಚಿನಂತೆ ತಲೆಗಪ್ಪಳಿಸಿದವು. ಪೊದೆಯೊಳಗೆ ಕುಳಿತವನೇ ಬ್ಯಾಗ್ ಬದಿಗಿಟ್ಟು ಕೈಗಳನ್ನು ಕಣ್ಣಿಗೊತ್ತಿ ಕುಳಿತು “ದೇವ್ರೇ ಕಾಪಾಡಪ್ಪ ” ಎಂದು ಮನಸ್ಸಲೆ ಬೇಡಿಕೊಂಡು ಕಣ್ಣು ತೆಗೆದ. ನೀರವ ಮೌನ ತುಂಬಿದ್ದ ಆ ನಿರ್ಜನ ಪ್ರದೇಶದಲ್ಲಿ ಗುಂಡನ ಕಿವಿಗೆ ಮಾತ್ರ ಮೌನ ಬೀಳಲಿಲ್ಲ. ಕೂತಹಲದಿಂದ ದಿಢೀರನೆ ಪೊದೆಯೊಳಗೆ ಓಡಿ ಬರುವಾಗಿನ ಸಮಯದಲ್ಲಾದ ತರಗೆಲೆಯ ಸದ್ದು, ದೂರದಲ್ಲಿ ಕೇಳಿದಂತೆ ಭಾಸವಾದ ವಾಹನದ ಸದ್ದು ಇನ್ನಿತರ ಕಾಲ್ಪನಿಕ ಶಬ್ಧಗಳು ಗುಂಡನ ತಲೆಯಲ್ಲಿ ಪ್ರತಿಧ್ವನಿಸುತ್ತಿವೆ. ಇನ್ನೊಂದೆಡೆ ಕನಸಿನ ಕುತೂಹಲ ಬೇರೆ, ಚಕ್ಕಾಲು-ಬಕ್ಕಾಲು ಹಾಕಿ ಕುಳಿತವನೇ ಬ್ಯಾಗನ್ನು ತೊಡೆಯ ಮೇಲಿಟ್ಟುಕೊಂಡ, ಬ್ಯಾಗ್ ಸ್ವಲ್ಪ ತೂಕವಾಗಿಯೇ ಇದೆ, “ಏನಿರಬಹುದು ….? ಬಾಂಬ್ ಆಗಿದ್ದರೆ ..? ಜಿಪ್ ತೆಗೆದ ತಕ್ಷಣ ಸ್ಪೋಟವಾದರೆ ಏನು ಮಾಡೋದು, ನಾನು ಇಲ್ಲಿಗೆ ಬಂದಿರುವುದು ಕೂಡ ಯಾರಿಗೂ ಗೊತ್ತಿಲ್ಲ, ಕೊನೆಗೆ ನನ್ನ ಹೆಣವು ಸಿಗಲ್ಲ ನಮ್ಮ ಅಪ್ಪ ಅಮ್ಮನಿಗೆ, ಇಷ್ಟು ಹತ್ತಿರದಿಂದ ಬಾಂಬ್ ಸಿಡಿದರೆ ದೇಹ ಛಿದ್ರವಾಗುತ್ತೆ. ಛೆ ಛೇ, ಬಾಂಬ್ ಆಗಿರೋದಕ್ಕೆ ಸಾಧ್ಯವೇ ಇಲ್ಲ, ಆದದ್ದು ಆಗಲಿ ತೆಗೆದು ನೋಡಿಯೇ ಬಿಡುತ್ತೇನೆ ” ಎಂದು ನೆನಪಿರುವ ಅಷ್ಟು ದೇವರ ಹೆಸರುಗಳನ್ನ ಮನಸಲ್ಲೇ ಸ್ಮರಿಸುತ್ತ ಬ್ಯಾಗ್ ಜಿಪ್ ಓಪನ್ ಮಾಡಿದ ಗುಂಡನಿಗೆ ಕಂಡಿದ್ದು ಸಾಕ್ಷಾತ್ ಅದೃಷ್ಟ ಮಹಾಲಕ್ಷ್ಮಿಯ ತಾಂಡವ ನ್ರತ್ಯವೇ ಸರಿ.

ಗುಂಡ ಕಕ್ಕಾಬಿಕ್ಕಿಯಾದ, ಒಂದು….ಎರಡು…ಮೂರು……. ಎಂದು ಹದಿಮೂರರ ವರೆಗೆ ಎಣಿಸಿದ. ಎಲ್ಲ ಎರಡು ಸಾವಿರ ಮುಖಬೆಲೆಯ ನೋಟುಗಳು ಪ್ರತಿ ಕಟ್ಟಿನಲ್ಲೂ ,ಒಟ್ಟು ಹದಿಮೂರು ಕಟ್ಟುಗಳು . ಒಂದು ಕಟ್ಟಿನಲ್ಲಿ ಎಷ್ಟು ನೋಟುಗಳು? ಈಸಮಯದಲ್ಲಿ ಎಣಿಸೋಕೆ ಸಾಧ್ಯವಿಲ್ಲ, ಸಂಪೂರ್ಣ ಕತ್ತಲಾಗುತ್ತಿದೆ, ಕಡಿಮೆ ಎಂದರು ಇನ್ನೂರರಿಂದ ಮುನ್ನೂರು ನೋಟುಗಳಿವೆ. ಅದಂತೂ ಖಚಿತ. ಎರಡು ಸಾವಿರ ಗುಣಿಸು ಇನ್ನೂರು ಅಲ್ಲಲ್ಲ ಮುನ್ನೂರು, ಗುಣಿಸು ಹದಿಮೂರು, ಎಷ್ಟಾಯ್ತು ಅಲ್ಲಿಗೆ? ಮನೆಗೆ ಹೋಗಿ ಈ ಲೆಕ್ಕ ಮಾಡಬೇಕು. ಇದನ್ನ ಮನೆಗೆ ತಗೊಂಡು ಹೋದ್ರೆ ಮುಗಿದೇ ಹೋಯ್ತು ಎಂದುಕೊಳ್ಳುತ್ತ, ಒಂದು ಕಟ್ಟನ್ನು ಕೈಗೆತ್ತಿಕೊಂಡು ಅದರಲ್ಲಿ ಹತ್ತು ನೋಟುಗಳನ್ನು ಹೊರತೆಗೆದು ಜೇಬಿಗಿಳಿಸಿ ಪ್ರಶಸ್ತವಾದ ಜಾಗವೊಂದನ್ನು ಹುಡುಕಿ ಭದ್ರವಾಗಿ ಕಲ್ಲುಗಳನ್ನು ಹೇರಿ ಬ್ಯಾಗನ್ನು ಮುಚ್ಚಿಟ್ಟು ಸಂಭ್ರಮದ ರೆಕ್ಕೆಗಳನ್ನು ಬಾನೆತ್ತರಕ್ಕೆ ಬಿಚ್ಚಿಕೊಂಡು ಮನೆಕಡೆಗೆ ನಡೆದ. ನಶೆ ಏರಿ ನಖಶಿಕಾಂತಕ್ಕೂ ಹಬ್ಬಿದ್ದಂತಿತ್ತು ಗುಂಡನಿಗೆ.

ಪ್ರಶಾಂತ ಇಪ್ಪತ್ತೆಂಟರ ಯುವಕ, ಪದವಿಯನ್ನು ಮುಗಿಸಿ ಕೃಷಿಕನಾಗಿ ಉಳಿದುಕೊಂಡ ಪುಣ್ಯವಂತ ಮಧ್ಯಮವರ್ಗದ ಕುಟುಂಬದ ಒಬ್ಬನೇ ಮಗ. ತುಂಬಾ ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮ ಮನೆ ಜಮೀನು ಎಂಬ ಇನ್ನಿತರ ಜವಾಬ್ದಾರಿಯ ವ್ಯೂಹದೊಳಗೆ ಸಿಕ್ಕಿಬಿದ್ದ. ಇಂದಿನ ಯುವಜನರಂತೆ ಹತ್ತಾರು ಸಾಧನೆಯ ಕನಸು ಕಂಡು ಪರಿಸ್ಥಿತಿಗೆ ಸಿಲುಕಿ ಕನಸುಗಳನ್ನು ಅದುಮಿಟ್ಟು ಕೊಂಡು ನಗುವುದನ್ನು ಕಲಿತ ಹುಡುಗ. ನಗುವವರಿಗೆಲ್ಲ “ಕಾದು ನೋಡ್ತಾ ಇರಿ,ಏನಾಗ್ತೀನಿ ಒಂದಿನ ಅಂತ” ಮನಸಲ್ಲೇ ಉತ್ತರಿಸುವ ಛಲಗಾರ. ಅಪ್ರತಿಮ ಕನಸುಗಾರ ಕೂಡ.ಈ ಪ್ರಶಾಂತ ಊರಿನವರ ಪಾಲಿಗೆ ಗುಂಡನೆಂದು ನಾಮಕರಣವಾಗಿದ್ದ.

ಆದಿನ ಮಾತ್ರ ಆದಿನ ಅದೃಷ್ಟ ಎನ್ನುವುದು ಗುಂಡನ ಪಾಲಿಗೆ ಗುಂಡಿನ ಮಳೆಗರಿದಿತ್ತು. ಮನೆಯಲ್ಲಿ ಕುಳಿತು ಬೇಜಾರಾಗಿ ವಾಯುವಿಹಾರಕ್ಕೆ ಹೊರಟು ವಾಪಾಸ್ ಬರುತ್ತಿದ್ದ ಗುಂಡನ ಎದುರಿಗೆ ಲಕ್ಷ್ಮಿ ಕಪ್ಪು ಬಣ್ಣದ ಚರ್ಮದ ಬ್ಯಾಗೊಂದರಲ್ಲಿ ಕುಳಿತಿದ್ದಳು.

ಮನೆಯ ಬಳಿಬಂದ ಗುಂಡನಿಗೆ ಅಪ್ಪ ಅಮ್ಮಂದಿರನ್ನು ನೋಡಿ ಅಸಮಾಧಾನವಾಯ್ತು. ಈವತ್ತು ಇವ್ರಿಬ್ರು ಮನೇಲಿ ಇಲ್ದೆ ಇದ್ದಿದ್ರೆ ಎಷ್ಟು ಚನಾಗಿರ್ತಿತ್ತು. ಬ್ಯಾಗ್ ನ ಮನೆಗೆ ತಗೊಂಡು ಬರ್ಬಹುದಿತ್ತು. ಛೇ ಎಂದುಕೊಳ್ಳುತ್ತಾ ಮನೆಯೊಳಗೆ ನಡೆದು ಎದುರು ನಿಂತಿದ್ದ ಅಮ್ಮನಿಗೆ ” ನಂದು ಊಟ ಆಯ್ತು, ಯಾಕೋ ತಲೆನೋವು ನಾನ್ ಮಲಗ್ತೀನಿ, ಏಳಿಸ್ಬೇಡಿ ” ಎಂದು ತನ್ನ ಕೋಣೆಯೊಳಗೆ ಹೊಕ್ಕಿಕೊಂಡ. ಗುಂಡನ ಉತ್ಸಾಹಕ್ಕೆ ,ಕನಸುಗಳಿಗೆ ಏಣಿಯೊಂದು ಸಿಕ್ಕಿತ್ತು . ಏಕೋ ಅಪ್ಪ ಅಮ್ಮ ಆ ಮನೆ, ಅಲ್ಲಿನ ವಸ್ತುಗಳು ಊರು, ಊರಿನ ಬುದ್ದಿವಂತರು, ಸಿರಿವಂತರು ಇನ್ನಿತರವುಗಳೆಲ್ಲ ತೀರಾ ತುಚ್ಛವಾಗಿ ಕಂಡರು ಗುಂಡನ ಪಾಲಿಗೆ. ಅವಮಾನಿಸಿದವರು ಅವರ ಮಾತುಗಳು ನೆನಪಾದವು “ಈವಾಗ ಮಾತಾಡ್ರೋ ನೋಡಣ ” ಎಂದುಕೊಂಡ ಮನಸ್ಸಿನಲ್ಲಿ.
ಕೋಣೆಗೆ ಸೇರಿಕೊಂಡವನೇ ಪೆನ್ನು ಪೇಪರ್ ಕೈಗೆತ್ತಿಕೊಂಡು ಲೆಕ್ಕ ಮಾಡತೊಡಗಿದ. ಉತ್ತರ ಸಿಕ್ಕಿತು. ಎರಡು ಸಾವಿರ ರೂಪಾಯಿಯ ಇನ್ನೂರು ನೋಟುಗಳ ಹದಿಮೂರು ಕಟ್ಟುಗಳ ಲೆಕ್ಕ ವನ್ನು ಚೊಕ್ಕವಾಗಿ ಮಾಡಿ ಐವತ್ತೆರಡು ಲಕ್ಷ ಮತ್ತು ಮುನ್ನೂರು ನೋಟುಗಳಿಗೆ ಎಪ್ಪತ್ತೆಂಟು ಲಕ್ಷ ಎಂಬ ಉತ್ತರ ಪಡೆದು ಹಿರಿ ಹಿರಿ ಹಿಗ್ಗಿದ್ದ. ಒಂದು ಕಟ್ಟಿನಲ್ಲಿ ಮುನ್ನೂರು ನೋಟುಗಳು ಇರಲಪ್ಪ ದೇವ್ರೇ ಎಂದುಕೊಂಡು ಮಾಯಾಲೋಕಕ್ಕೆ ಜಿಗಿಯುವ ಮೊದಲು ಜೇಬಿನಲ್ಲಿದ್ದ ಹತ್ತು ನೋಟುಗಳನ್ನು ಹೊರ ತೆಗೆದು ಖೋಟಾ ನೋಟುಗಳಲ್ಲ ಎಂಬುದನ್ನು ಪರೀಕ್ಷಿಸಿ ಖಚಿತ ಮಾಡಿಕೊಂಡು ಎಪ್ಪತ್ತೆಂಟು ಲಕ್ಷದ ಕನಸಿನ ಜಾರುಬಂಡೆಯ ಮೇಲೆ ಕುಳಿತ.

‘ಮೊದಲು ಒಂದು ಮನೆ ಕಟ್ಸಬೇಕು, ಎಂಥ ಮನೆ ಈ ಊರಿನವರು ಇಲ್ಲಿಯವರೆಗೆ ನೋಡಿರಬಾರದು ಮುಂದೆಯೂ ಎಲ್ಲೂ ನೋಡ್ಬಾರ್ದು, ಕಲ್ಲಿನ ಮನೆ, ಸರಿಸುಮಾರು ಒಂದು ಎಕರೆಯ ಕಾಂಪೌಂಡ್, ಹತ್ತು ಅಡಿ ಎತ್ತರದ ಕಾಂಪೌಂಡ್ ಗೇಟ್ ದಾಟಿ ಒಳಗೆ ಕಾಲಿಟ್ಟರೆ ಹಸಿರು ಹುಲ್ಲಿನ ಹಾಸು, ಮದ್ಯದಲ್ಲಿ ನಡೆಯಲು ಸಹಾಯವಾಗುವ ದುಬಾರಿ ಬೆಲೆಯ ಗಚ್ಚಿರುವ ಗಾರ್ಡನ್ ಸ್ಟೋನ್ಗಳು, ಅಂಗಳದ ಮದ್ಯೆ ಬಣ್ಣದ ಕೊಳ, ಕೊಳದ ನಡುವೆ ಕಾರಂಜಿ, ಕೆಂಪು ತಾರಸಿಯ ಮೂರು ಮಹಡಿಯ ಮನೆ, ಮನೆಯ ಎಡಬಾಗದಲ್ಲಿ ಪೋರ್ಟಿಕೊದ ಒಳಗೆ ಕೆಂಬಣ್ಣದ ಉದ್ದನೆಯ ಕಾರು, ಬಲಬಾಗದಲ್ಲಿ ಸೈಬೀರಿಯನ್ ಹಸ್ಕಿ ತಳಿಗೆ ಸೇರಿದ ಯಮಕಾಯದ ಎರಡು ನಾಯಿಗಳು, ಗುಂಡ ಮನೆಯ ಒಳಗೆ ನಡೆದ, ಅಮೃತಶಿಲೆಯ ನೆಲಹಾಸು, ಕಂಗೊಳಿಸುವ ವಿದ್ಯುತ್ ದೀಪಗಳು, ಗೋಡೆಗಾತ್ರದ ದೂರದರ್ಶನ, ದುಬಾರಿ ಬೆಲೆಯ ಕಣ್ಣು ಕುಕ್ಕುವ ಪೀಠೋಪಕರಣಗಳು, ಗುಂಡನ ಕೋಣೆಯ ಮಂಚದಲ್ಲಿ ಕುಳಿತರೆ ಧಸಕ್ಕೆಂದು ಕೆಳಸೇರುವ ಹಾಸಿಗೆ, ಗೋಡೆಯ ಮೇಲೆ ಕಲಾಕೃತಿಗಳು, ಕೊಠಡಿಯಲ್ಲೇ ಕುಳಿತು ಫೋನಿಗೆ ಕೈ ಇಟ್ಟರೆ ಸಾಕು ಬಯಸಿದ್ದು ತಂದು ಬಡಿಸುವ ಅಡುಗೆಯವರು, ಒಂದಾ ಎರಡಾ, ಗುಂಡನ ಬಳಿ ಹಣ ಆಸ್ತಿ ಇಲ್ಲವೆಂದು ಆತನನ್ನು ಅಸಡ್ಡೆ ಮಾಡಿದ್ದ ಗುಂಡನ ಮಾಜಿ ಪ್ರಿಯತಮೆ ಮಯೂರಿ, ಈಗ ಗಂಡನೆಂದರೆ ನನ್ನ ಗಂಡ ,ಗುಂಡನೆ ನನ್ನ ಗಂಡ ಎನ್ನುತ್ತಿದ್ದಾಳೆ!! ಗುಂಡನನ್ನು ಗುಂಡ ಎಂದು ಕರೆಯುವ ದೈರ್ಯದವರು ಯಾರು ಇಲ್ಲ ಈವಾಗ ಊರಿನಲ್ಲಿ, ಅಯ್ಯ, ಸ್ವಾಮಿ, ಸಾವಕಾರ್ರು, ಪ್ರಶಾಂತ್ ಅವರೇ ಅನ್ನೋರೆ ಜಾಸ್ತಿ.


ಕನಸಿನ ಹೂವ ಹಾಸಿಗೆ ಮೇಲೆ ನಡೆಯುತ್ತಿದ್ದ ಗುಂಡನ ಕಾಲಿಗೆ ಮುಳ್ಳು ಚುಚ್ಚಿದ ನೆನಪೊಂದು ಬಂತು, ” ನನ್ನ ಯೋಜನೆಗಳೆಲ್ಲ ಸರಿ, ಈತರ ದಿಢೀರ್ ಅಂತ ಶ್ರೀಮಂತನಾದರೆ ಊರಿನವರು ಏನೆಂದುಕೊಂಡಾರು?, ಒಂದೇ ಬಾರಿಗೆ ಮೇಲೆ ಬಂದರೆ ಕಣ್ಣಿಗೆ ಬೀಳುತ್ತೇನೆ, ನಾಳೆಯಿಂದಲೇ ಎಲ್ಲದನ್ನು ಮಾಡಲು ಸಾಧ್ಯವಿಲ್ಲ ಇದಕ್ಕೆ ಏನಾದರೊಂದು ಉಪಾಯ ಮಾಡಬೇಕೆಂದು ಯೋಚಿಸಿದ. ” ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿದೆ ಎಂದು ನಗರಕ್ಕೆ ಹೋಗುತ್ತೇನೆ, ಹೋಗುವ ಮೊದಲು ಕೈತುಂಬಾ ಸಂಬಳ ಎಂಬ ಸುದ್ದಿಯೊಂದನ್ನು ಊರೊಳಗೆ ಹಬ್ಬಿಸುತ್ತೇನೆ, ಅದೂ ಅಲ್ಲದೆ ಇಷ್ಟೊಂದು ಹಣ ಇಟ್ಕೊಂಡು ಈ ಹಳ್ಳಿ ಕೊಂಪೆಲಿ ಮಾಡೋದಾದ್ರೂ ಏನು, ನಾಲ್ಕು ದಿನ ನಗರದ ನಡುವನ್ನು ನೋಡೋಣ, ವರ್ಷ ಕಳೆಯೋದರೊಳಗೆ ಮನೆಯಕಡೆ ಒಳ್ಳೆ ವ್ಯವಸ್ಥೆಯೊಂದನ್ನು ಹೊರಗಿದ್ದುಕೊಂಡೇ ಮಾಡಿಸಿ ಆಮೇಲೆ ಇಲ್ಲಿಗೆ ಬಂದು ಜುಮ್ಮ್ ಎನ್ನುತ್ತಾ ಜೀವನ ಮಾಡಬಹುದು” ಎಂದುಕೊಂಡ.
ಪೊದೆಯಲ್ಲಿ ಹೂತಿಟ್ಟ ಹಣ ಸದ್ಯಕ್ಕೆ ತೆಗೆಯೋದು ಬೇಡ, ನಗರಕ್ಕೆ ಹೋಗೋ ಸಮಯದಲ್ಲಿ ತೆಗೆದರೆ ಸಾಕು ಆದಷ್ಟು ಬೇಗ ಹೋರಡಬೇಕು, ಮುಂದಿನವಾರವೇ. ಮೊದಲು ನಾಳೆ ಪೇಟೆಗೆ ಹೋಗಿ ಹಬ್ಬ ಮಾಡಿಕೊಂಡು ಬರಬೇಕು.
ನಾಳೆ ಬೆಳಿಗ್ಗೆಯಂತೂ ಅಯ್ಯಂಗಾರರ ಹೋಟೆಲ್ನ ಮಸಾಲಾ ದೋಸೆಯೇ ಆಗಬೇಕು ತಿಂಡಿಗೆ, ಎರಡು ಪ್ಲೇಟ್ ತಿನ್ಬೇಕಪ್ಪ ಇವತ್ ಬೇರೆ ಊಟ ಮಾಡಿಲ್ಲ, ಅದಾದ್ಮೇಲೆ ಹನ್ನೊಂದು ಗಂಟೆಯ ಸುಮಾರಿಗೆ ಹಬೀಬ್ ಸಾಬರ ಐಸ್ ಕ್ರೀಮ್ ಅಂಗಡಿಗೆ ಹೋಗಿ ಐಸ್ ಕ್ರೀಮ್ ತಿಂದು ಜ್ಯೂಸ್ ಕುಡಿದು ಮದ್ಯಾನ ಕರಾವಳಿ ಹೋಟೆಲ್ನಲ್ಲಿ ಮೀನು ಊಟ, ಛೆ… ಛೇ…, ಮೀನು ಊಟ ತುಂಬಾ ಕಡಿಮೆ, ಒಂದು ಚಿಕನ್ ಬಿರಿಯಾನಿ ಎರಡು ಬಂಗಡೆ ಫ್ರೈ ತಿನ್ಬೇಕು ಆಮೇಲೆ ಒಂದು ಪೆಪ್ಸಿ.
ಗುಂಡನ ಬಾಯಿಂದ ಜೊಲ್ಲು ಕೆಳಗಿಳಿದು ದಿಂಬು ಸೇರುತ್ತಿತ್ತು. ಇನ್ನು ಹತ್ತಾರು ಯೋಚನೆಗಳು ಶರವೇಗದಲ್ಲಿ ಗುಂಡನ ಬುದ್ಧಿಗೋಪುರಕ್ಕೆ ನಾಟಿ ಕುಳಿತವು.
ರಾತ್ರಿ ಎರಡು ಗಂಟೆಯಾಗಿದೆ, ಏನೇ ಪ್ರಯತ್ನಪಟ್ಟರು ನಿದ್ದೆ ಬರುತ್ತಿಲ್ಲ ಗುಂಡನಿಗೆ. ಪೊದೆಯೊಳಗೆ ಕಲ್ಲಿನಡಿ ಅವಿತಿಟ್ಟ ಹಣದ ಚೀಲ ಎದೆಯ ಮೇಲೇ ಬಂದು ಕುಳಿತಂತೆ ಆಗುತ್ತಿದೆ. ಇನ್ನೇನು ಕಣ್ಣು ಮುಚ್ಚಿತು ಅನ್ನುವಷ್ಟರಲ್ಲಿ ಯಾರೋ ನೋಟುಗಳ ಕಂತೆಯನ್ನು ಬಿಚ್ಚಿ ಮಲಗಿರುವ ಗುಂಡನ ಮೈಮೇಲೆ ಸುರಿದಂತಾಗಿ ಎಚ್ಚರವಾಗುತ್ತಿದೆ. ಪೊದೆಯೊಳಗೆ ಮಲಗಿರುವಂತೆ ಅನಿಸುತ್ತಿದೆ. ಖುಷಿಯ ಅಣುಗಳು ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ಸೃಷ್ಟಿಯಾಗಿ ದೇಹಸೇರಿಕೊಂಡು ಗುಂಡನನ್ನು ಸಂತೋಷದ ಉನ್ಮಾದದ ತುತ್ತ ತುದಿಯಲ್ಲಿ ತೇಲಿಸುತ್ತಿವೆ.

ಹತ್ತು ಸಾವಿರ ರೂಪಾಯಿ ಕೈನಲ್ಲಿ ಹಿಡಿದು ಮುಂಜಾನೆ ಎಂಟಕ್ಕೆ ಮನೆ ಬಿಟ್ಟು ಗುಂಡ ತನ್ನೂರಿನಿಂದ ಪೇಟೆಯೊಂದಕ್ಕೆ ಹೊರಡುವ ಮೊದಲ ಬಸ್ಸನ್ನು ಹತ್ತಿ, “ಎಲ್ಲಿಗ್ರೀ ? ಟಿಕೆಟ್ “ಎಂದು ಕೇಳಿದ ಕಂಡಕ್ಟರ್ ಗೆ ” ಅಯ್ಯಂಗಾರ್ ಹೋಟೆಲ್ ಸ್ಟಾಪ್ ..! ಒಂದ್ ಟಿಕೆಟ್ ಕೊಡಿ ” ಎಂದು ಟಿಕೆಟ್ ಪಡೆದು ಎರಡು ಸಾವಿರ ಮುಖಬೆಲೆಯ ನೋಟನ್ನು ಚಿಲ್ಲರೆ ಇರದ ಕಂಡಕ್ಟರ್ ಕೈಗಿಟ್ಟು ಉಗಿಸಿಕೊಂಡ. “ಎಷ್ಟೇ ದುಡ್ದಿದ್ರು , ಚಿಲ್ರೆಗಾಗಿ ಈ ನನ್ಮಕ್ಳ ಹತ್ರ ಬಾಯ್ಸ್ಕೊಳೋದ್ ತಪ್ಪಲ್ಲ ನಮ್ ಹಣೆಬರ” ಎಂದುಕೊಳ್ಳುತ್ತ “ಇಳಿಯುವಾಗ ಚಿಲ್ರೆ ತಗೋತೀನಿ ” ಎಂದ ಗುಂಡ.
ಇಳಿಯುವ ಜಾಗಕ್ಕಿಂತ ಮೊದಲೇ ಚಿಲ್ಲರೆ ಪಡೆದು, ಇನ್ನೇನು ಬಸ್ ಇಳಿಯುವ ಸ್ಥಳ ಹತ್ತಿರ ಬರುತ್ತಿರುವುದನ್ನು ಕಂಡ ಗುಂಡ ಬಸ್ ನ ಬಾಗಿಲ ಬಳಿ ಬಂದು ನಿಂತ ಇಳಿಯುವುದಕ್ಕಾಗಿ. ದೂರದಲ್ಲಿ ಕಾಣುತ್ತಿರುವ ಹೋಟೆಲ್ ನೋಡಿ ಒಳಗೊಳಗೇ ಹಿಗ್ಗುತ್ತಾ ಇಳಿಯುವ ಆತುರದಿಂದ ಎಡಗಾಲನ್ನು ಬಸ್ನಿಂದ ಹೊರಗೆ ಚಾಚಿ ನಿಂತಿದ್ದ,ಬಸ್ ಸಂಪೂರ್ಣವಾಗಿ ನಿಲ್ಲುವ ಮೊದಲೇ ಕೆಳಗೆ ಹಾರಿ ಸ್ವಲ್ಪ ದೂರ ಓಡಿ ನಿಂತು ಹೋಟೆಲ್ ಗೆ ನುಗ್ಗೋಣವೆಂದು.

 

ಮದ್ಯಾನ್ಹ ಹನ್ನೆರಡರ ಸುಮಾರಿಗೆ ಎಚ್ಚರವಾಯ್ತು, ಮುಖವೆಲ್ಲ ಉರಿಯುತ್ತಿದ್ದೆ. ಸಂಪೂರ್ಣವಾಗಿ ಕಣ್ಣು ತೆರೆಯಲು ಆಗುತ್ತಿಲ್ಲ. ಬಾಯಿಯೊಳಗೆ ಉಪ್ಪು ಮಿಶ್ರಿತ ರುಚಿಯಂತ ಅನುಭವ. ಬಾಯಿಯೊಳಗೆ ನಾಲಿಗೆಯಾಡಿಸಿ ನೋಡಿದರೆ ಮುಂಬಾಗದ ಎರಡು ಹಲ್ಲುಗಳು ಇಲ್ಲದೆ ಮುಂದುಟಿ ನಾಲಿಗೆಗೆ ತಾಗುತ್ತಿದೆ.
. “ಹೋ ಪ್ರಜ್ಞೆ ಬಂತು ಅಂತ ಅನ್ನಿಸ್ತಿದೆ, ನರ್ಸ್ ನ ಕರೀರಿ, ಇನ್ನು ನಾವು ಹೊರಡೋಣ “ಎಂಬ ಮಾತು ಕೇಳಿ ಬಂತು. ಎಡಗೈ ಗೆ ಗ್ಲುಕೋಸ್ ಚುಚ್ಚಿದ್ದಾರೆ. ಕಾಲುಗಳಿಗೆ ಏನು ಆಗಿಲ್ಲ ಅಷ್ಟೇ.

ಯಾಕೋ ಆದಿನ ಅಯ್ಯಂಗಾರ್ ಹೋಟೆಲ್ನಲ್ಲಿ ಗುಂಡನ ದೋಸೆಗಾಗುವಷ್ಟು ಹಿಟ್ಟು ಇದ್ದಿರಲಿಲ್ಲ ಎನಿಸುತ್ತದೆ. ಚಲಿಸುತ್ತಿದ್ದ ಬಸ್ ಇಂದ ಹೀರೋ ತರಹ ಇಳಿಯಲು ಹೋದ ಗುಂಡನ ಕಾಲು ಎಡವಿ ಬಿದ್ದು ಎರಡು ಹಲ್ಲುಗಳನ್ನು ಕಳೆದುಕೊಂಡು ಮುಖ ಮೂತಿಯನ್ನು ಕಿತ್ತುಕೊಂಡ. ಹಿಂದಿನ ದಿನ ಊಟವಿಲ್ಲದೆ ನಿತ್ರಾಣವಾಗಿದ್ದ ಗುಂಡನ ದೇಹ ಈ ನೋವನ್ನು ತಡೆಯಲಾರದೆ ಪ್ರಜ್ಞೆ ಕಳೆದುಕೊಂಡಿತ್ತು. ಗುಂಡನ ಅವಸ್ಥೆ ಕಂಡ ನಾಲ್ಕು ಜನರು ಯಥಾನು ಶಕ್ತಿ ಗುಂಡನಿಗೆ ಬೈದು ಆಸ್ಪತ್ರೆಗೆ ಸೇರಿಸಿದ್ದರು.
ಬಿರಿಯಾನಿ ತಿನ್ನಲು ಬಂದಿದ್ದ ಗುಂಡ ಹಾಲು ಬ್ರೆಡ್ಡಿಗೆ ಶರಣಾದ. ಎರಡು ದಿನ ಗುಂಡನನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡು ಎಂಟುಸಾವಿರ ಬಿಲ್ ಮಾಡಿ,ಹದಿನೈದು ದಿನ ಗಟ್ಟಿ ಪದಾರ್ಥ ಏನನ್ನು ಮುಟ್ಟಕೂಡದೆಂದು ಆದೇಶ ಹೊರಡಿಸಿ ಹೊರಬಿಟ್ಟರು.

ಮನೆ ತಲುಪಿದ ಗುಂಡ ಹಿಂದು ಮುಂದು ನೋಡದೆ ಹಣದ ಚೀಲ ಮುಚ್ಚಿಟ್ಟಿದ್ದ ಸ್ಥಳಕ್ಕೆ ನಡೆದುಬಿಟ್ಟ. ಯಾಕೋ ಆತಂಕ ಕಾಡತೊಡಗಿತ್ತು ಗುಂಡನಿಗೆ. ಹತ್ತಿರ ಬಂದು ನೋಡುತ್ತಾನೆ, ಮುಚ್ಚಿಟ್ಟಿದ್ದ ಕಲ್ಲುಗಳು ಹಾಗೆಯೇ ಇವೆ,ನೋಡಿ ಸಮಾಧಾನವಾಯ್ತು. ಯಾಕೋ ಹಾಗೆ ವಾಪಸ್ಸಾಗಲು ಮನಸ್ಸಾಗಲಿಲ್ಲ, ಹಣವನ್ನು ಒಮ್ಮೆ ನೋಡುವ ಮನಸ್ಸಾಗಿ ನಿದಾನವಾಗಿ ಹೇರಿಟ್ಟಿದ್ದ ಕಲ್ಲುಗಳನ್ನು ಬದಿಗಿರಿಸಿ ಬ್ಯಾಗನ್ನು ಮೇಲೆ ತೆಗೆದು, ಬ್ಯಾಗ್ ಮೇಲಿನ ಮಣ್ಣು ಕಸವನ್ನೆಲ್ಲ ಊದಿ ಒರೆಸಿ ಜಿಪ್ ತೆಗೆದ.
ಗುಂಡನ ಕನಸಿನ ಮನೆ, ಸಂಪತ್ತು, ಅಲಂಕಾರಗಳೆಲ್ಲ ಬಲವಾದ ಭೂಕಂಪ ಒಂದಕ್ಕೆ ತುತ್ತಾಗಿ ಭುವಿಯ ಬಾಯಿ ಸೇರಿಬಿಟ್ಟವು. ಅಪ್ಪ ಅಮ್ಮ ನೆನಪಾದರು. ಹೆಂಚಿನ ಮನೆ ಕಣ್ಣೆದುರು ಹೀಯಾಳಿಸಿ ನಗತೊಡಗಿತು. ಮನೆಯಲ್ಲಿರುವ ಕಂತ್ರಿ ನಾಯಿಯ ನೀಯತ್ತು ನೆನಪಾಗತೊಡಗಿತು. ಪ್ರಿಯತಮೆ ಮಯೂರಿ ಗಗನ ಕುಸುಮವಾಗಿ ತಿರಸ್ಕೃತಳಾಗಿ ಕಂಡಳು. ನಾಲ್ಕು ದಿನದ ನಗರ ಜೀವನದ ಕನಸು ಬಾಗಿಲು ಹಾಕಿಕೊಂಡು ಒಳಗೆ ಕುಳಿತಿತು. ಗತ್ತು ತೋರಿಸಿ ತಿರುಗಬೇಕು ಅವನೆದುರಿಗೆ ಎಂದು ಆಯ್ಕೆ ಮಾಡಿಕೊಂಡಿದ್ದ ಊರಿನ ಕೆಲ ಜನರ ಜೊತೆ ಎಂದಿನಂತೆ ಹೊಂದಾಣಿಕೆಯ ಜೀವನ ಕೈಬೀಸುತ್ತ ನಿಂತಿತ್ತು. ಗುಂಡ ಗದ್ಗದಿಸಿ ಹೋದ. ಗಾಯಗಳೆಲ್ಲ ಮೊದಲಿಗಿಂತ ನೋವು ಕೊಡತೊಡಗಿದ್ದವು. ಜೋರಾಗಿ ಕೂಗಿ ಅಳಬೇಕು ಎನಿಸಿತು. ಆದರೆ ಅದು ಕೂಡ ಸಾಧ್ಯವಿಲ್ಲ. ಬಾಯಿ ತುಂಬಾ ಹೊಲಿಗೆ ಹಾಕಿದ್ದಾರೆ ಬಿದ್ದ ಗಾಯಗಳಿಗೆ. ಬಾಯಿ ತೆರೆಯಲು ಆಗುತ್ತಿಲ್ಲ. ಕಣ್ಣೀರು ಮುಖದ ಮೇಲಿನ ತರಚು ಗಾಯಗಳ ಮೇಲೆ ಹರಿದು ಉರಿಸುತ್ತಿದೆ.
ಕಲ್ಲು ತುಂಬಿದ್ದ ಬ್ಯಾಗನ್ನು ಬದಿಗೆಸೆದು ಕಾಲು ನೀಡಿ ಕೈ ಹಿಂಚಾಚಿ ಆಕಾಶ ನೋಡುತ್ತಾ ಕುಳಿತ. ಉಫ್ಫ್ಫ್ ಎಂದು ಉಸಿರು ಬಿಟ್ಟು!!!

ಆಸ್ಪತೆಯಲ್ಲಿದ್ದಾಗ ಚುಚ್ಚುಮದ್ದಿನ ಬಲದ ಮೇಲೆ ನಿದ್ದೆಗೆ ಜಾರಿದ್ದ ಗುಂಡ ಅದೇನೇನು ಒದರಿಕೊಂಡಿದ್ದನೋ ಗೊತ್ತಿಲ್ಲ, ಮಂಪರಿನಲ್ಲಿ,
ಸೂಕ್ಷ್ಮ ವಾಗಿ ಗಮನಿಸಿರೋ ಯಾರೋ ಪಟಿಂಗನೊಬ್ಬ, ಸಂಪೂರ್ಣ ವಿಚಾರ ಗುಂಡನಿಂದಲೇ ತಿಳಿದು ಗುಂಡನ ಕೋಟೆಗೆ ಮುತ್ತಿಗೆ ಹಾಕಿಬಿಟ್ಟಿದ್ದ …!!!

✍️ಸಚಿನ್ ಶೃಂಗೇರಿ

Most Popular

Recent Comments