Sunday, September 24, 2023
Homeರಾಜಕೀಯಶೃಂಗೇರಿ ಕ್ಷೇತ್ರದಲ್ಲಿ ತಂದೆಯ ಪರ ಪ್ರಚಾರಕ್ಕಿಳಿದ ಅಭ್ಯರ್ಥಿಗಳ ಮಕ್ಕಳು

ಶೃಂಗೇರಿ ಕ್ಷೇತ್ರದಲ್ಲಿ ತಂದೆಯ ಪರ ಪ್ರಚಾರಕ್ಕಿಳಿದ ಅಭ್ಯರ್ಥಿಗಳ ಮಕ್ಕಳು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವಿಶೇಷ) ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷದ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿ ತಿರುಗಲಾರಂಭಿಸಿದ್ದಾರೆ. ಸಭೆ, ಸಮಾರಂಭ, ಮೀಟಿಂಗ್ ಎಂದು ಹಗಲು ರಾತ್ರಿ ಓಡಾಡ್ತಿದ್ದಾರೆ. ಹೀಗೆ ಓಡಾಡ್ತಿರೋ ಮೂರೂ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಮಕ್ಕಳು ಕೂಡ ಸಾಥ್ ನೀಡುತ್ತಿರೋದು ವಿಶೇಷವಾಗಿದೆ.

ಶೃಂಗೇರಿ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ರಂಗೇರಿದೆ. ಬಿಜೆಪಿಯಿಂದ ಮಾಜಿ ಶಾಸಕ ಜೀವರಾಜ್ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ನಿಂದ ಹಾಲಿ ಶಾಸಕ ಟಿ ಡಿ ರಾಜೇಗೌಡ ಸ್ಪರ್ಧಿಸುತ್ತಿದ್ದಾರೆ ಇನ್ನು ಜೆಡಿಎಸ್ ನಿಂದ ರಾಜ್ಯ ಉಪಾಧ್ಯಕ್ಷ ಕೊಪ್ಪದ ತುಮಖಾನೆ ಮೂಲದ ಸುಧಾಕರ್ ಶೆಟ್ಟಿ ಅಭ್ಯರ್ಥಿಯಾಗಿದ್ದಾರೆ. ಮೂರು ಪಕ್ಷಗಳಲ್ಲೂ ಚುನಾವಣಾ ತಯಾರಿ ಜೋರಾಗಿಯೇ ಇದ್ದು ನಾವೇ ಗೆಲ್ಲಬೇಕು ಎಂಬ ಮೂರು ಪಕ್ಷಗಳ ಅಭ್ಯರ್ಥಿಗಳ ಛಲಕ್ಕೆ ತಮ್ಮ ಮಕ್ಕಳೂ ಕೂಡ ಸಪೋರ್ಟ್ ಆಗಿ ನಿಂತಿದ್ದಾರೆ.

ಯುವ ಪಡೆಯನ್ನು ಸೆಳೆಯಲು ಫೀಲ್ಡಿಗಿಳಿದ ಅಭ್ಯರ್ಥಿಗಳ ಮಕ್ಕಳು

ವಿಶೇಷವಾಗಿ ಕ್ಷೇತ್ರದಲ್ಲಿ 45% ಕ್ಕೂ ಅಧಿಕ ಯುವ ಮತದಾರರಿದ್ದಾರೆ. ಹೀಗಾಗಿ ಇವರನ್ನು ಸೆಳೆಯಲು ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಮಕ್ಕಳು ಹಗಲು ರಾತ್ರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಶಾಸಕ ಟಿಡಿ ರಾಜೇಗೌಡರ ಪರ ಅವರ ಮಗ ರಾಜ್ ದೇವ್ ಸಾಕಷ್ಟು ಪ್ರಚಾರ ಮಾಡಿ ಊರಿನ ಯುವ ಪಡೆಯನ್ನು ಒಗ್ಗೂಡಿಸುತ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಜೀವರಾಜ್ ಅವರ ಪುತ್ರ ಸುಧನ್ವ ಕೂಡ ಫುಲ್ ಆ್ಯಕ್ಟಿವ್ ಆಗಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಜೆಡಿಎಸ್ ನ ಸುಧಾಕರ್ ಶೆಟ್ರಿಗೆ ಸಾಥ್ ಕೊಡಲು ಅವರ ಪುತ್ರ ಪವನ್ ಕುಮಾರ್ ಶೆಟ್ಟಿ ಅವರು ಕಳೆದ ಒಂದು ತಿಂಗಳಿಂದ ಮೈಸೂರಿನಲ್ಲಿರುವ ತಮ್ಮ ಬಿಝಿನೆಸ್ ನಡುವೆಯೂ ಶೃಂಗೇರಿ ಕ್ಷೇತ್ರದಲ್ಲಿ ತಮ್ಮ ತಂದೆಯ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಕೆಲಸಕ್ಕೆ ಗುಡ್ ಬೈ ಹೇಳಿದ ಟಿಡಿ ರಾಜೇಗೌಡ ಪುತ್ರ ರಾಜ್ ದೇವ್

ಹಾಲಿ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅವರ ಪುತ್ರ ರಾಜ್ ದೇವ್ ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿ ಈ ಬಾರಿ ತಂದೆಗಾಗಿ ಚುನಾವಣಾ ಪ್ರಚಾರಕ್ಕೆ ಕೈಜೋಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ‘ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಬರುವಾಗ ಒಮ್ಮೆ ಯೋಚಿಸಿದೆ.. ಈಗಿರುವ ಕೆಲಸ ಬಿಟ್ಟರೆ ಮುಂದೆ ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯ ಪರಿಸ್ಥಿತಿಯಲ್ಲಿ ಕೆಲಸ ಸಿಗುತ್ತದೆಯ ಎಂದು. ಆದರೆ ತಂದೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾನು ಈ ಸಂದರ್ಭದಲ್ಲಿ ಅವರ ಜೊತೆ ಕೈಜೋಡಿಸಬೇಕೆಂದು ನಿರ್ಧರಿಸಿ ರಾಜೀನಾಮೆ ನೀಡಿ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ ಎಂದಿದ್ದಾರೆ.

ಚುನಾವಣಾ ಕಣದಲ್ಲಿ ‘ಹೋಂ ಮಿನಿಸ್ಟರ್’ ಹವಾ

ಈ ಮಧ್ಯೆ ಶೃಂಗೇರಿ ಕ್ಷೇತ್ರದಲ್ಲಿ ‘ಹೋಂ ಮಿನಿಸ್ಟರ್’ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ‘ಹೋಂ ಮಿನಿಸ್ಟರ್’ ಅಂದ್ರೆ ಅರಗ ಜ್ಞಾನೇಂದ್ರ ಅವರೋ ಅಥವ ಅಮಿತ್ ಶಾ ಅವರೋ ಅಲ್ಲ. ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳ ಪತ್ನಿಯರು ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸುತ್ತಾ ಪತಿಯ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಶೃಂಗೇರಿ ಕ್ಷೇತ್ರದ ಮನೆ ಮನೆಗೆ ತೆರಳಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಡಿ ರಾಜೇಗೌಡರಿಗೆ ಮತ ನೀಡುವಂತೆ ಅವರ ಪತ್ನಿ ಪುಷ್ಪಾರಾಜೇಗೌಡ ಮನವಿ ಮಾಡುತ್ತಿದ್ದಾರೆ. ಕುಟುಂಬದ ಗೃಹಿಣಿಗೆ ಮಾಸಿಕ ಎರಡು ಸಾವಿರ, 200 ಯೂನಿಟ್ ಉಚಿತ ವಿದ್ಯುತ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.. ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಪ್ರಿಯಾಂಕ ಗಾಂಧಿ ಮಹಿಳೆಯರ ಸಂಕಷ್ಟಕ್ಕೆ ಮಹಿಳೆಯರ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡುವ ಯೋಜನೆ ರೂಪಿಸಿದ್ದು, ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ಎಂದು ಮತದಾರರ ಮನವೊಲಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Most Popular

Recent Comments