ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಮಳೆ ಎಡೆಬಿಡದೆ ಸುರಿಯುತ್ತದೆ. ಇದರ ಪರಿಣಾಮವಾಗಿ ರಾಜ್ಯ ಹೆದ್ದಾರಿಯಲ್ಲಿ ಅಂತರ್ಜಲದಮಟ್ಟವು ಹೆಚ್ಚಾಗಿ ರಸ್ತೆಮಧ್ಯದ ಭಾಗ ಗುಂಡಿ
ಬಿದ್ದಿದ್ದು ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಮಾದಾಪುರ ರಸ್ತೆಯ ಸ್ವಸ್ಥ ಶಾಲೆ ಸಮೀಪ ಭೂಕುಸಿತವಾಗಿರುವ ರಸ್ತೆಯ ನಡುವೆ ಜಲ ಉಕ್ಕುತ್ತಿದು ರಸ್ತೆ ಮದ್ಯದ ಭಾಗವೇ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ. ಹೀಗಾಗಿ ಸುಂಟಿಕೊಪ್ಪ ಸೋಮವಾರಪೇಟೆಗೆ ಹೋಗುವ ಜನಸಾಮಾನ್ಯರಿಗೆ ನಾಲ್ಕು ಐದು ಕಿಲೋ ಮೀಟರ್ ಸುತ್ತಿಬಳಸಿಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ.
ಆಗಸ್ಟ್ ತಿಂಗಳ ಮೊದಲ ರಾತ್ರಿ ಸುರಿದ ಮಳೆಗೆ ಈ ರೀತಿಯಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಅತಂಕಕ್ಕೆ ಒಳಗಾಗಿದ್ದಾರೆ. ರಸ್ತೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಅಂತರ್ಜಲದ ಮಟ್ಟ ಎಲ್ಲಿ ಇದೆ ಎಂದು ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ನೋಡಿಕೊಂಡು ಅದಷ್ಟು ಬೇಗ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಈ ಭಾಗದ ಜನರು ಹಾಗೂ ವಾಹನಗಳನ್ನು ಕಾನ್ ಬೈಲ್ – ನಾಕೂರು ಶಿರಂಗಾಲ – ಗುಂಡುಗುಟ್ಟಿ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಸ್ಥಳದಲ್ಲಿ ಸಂಬoಧಿಸಿದ ಇಲಾಖೆಯ ಎಂಜಿನಿಯರ್ ಗಳು, ಪಿಡಿಓ ವೇಣುಗೋಪಾಲ್ ಮತ್ತು ಪಂಚಾಯ್ತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪರವರು ಮೊಕ್ಕಾಂ ಹೂಡಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ.