ಕಲಬುರಗಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿದ್ದನ್ನು ಎಚ್.ಡಿ.ಕುಮಾರಸ್ವಾಮಿ ಸಾಬೀತು ಪಡೆಸಿದರೆ ರಾಜಕೀಯ ಸನ್ಯಾಸವನ್ನು ಸ್ವೀಕರಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪನವರ ಜನ್ಮದಿನದಂದು ಮಾತ್ರ ನಾನು ಖುದ್ದಾಗಿ ಅವರನ್ನು ಭೇಟಿ ಮಾಡಿದ್ದೇನೆ ನಂತರ ಸಭೆ, ಸಮಾರಂಭಗಳಲ್ಲಿ ಮುಖಾಮುಖಿಯಾಗಿದ್ದೇವೆ. ಇದನ್ನು ಹೊರತು ಪಡಿಸಿ ವೈಯಕ್ತಿಕವಾಗಿ ನಾನು ಯಡಿಯೂರಪ್ಪನವರನ್ನು ಎಂದಿಗೂ ಭೇಟಿ ಮಾಡಿಲ್ಲ. ಅದಾಗ್ಯೂ ನನ್ನ-ಯಡಿಯುರಪ್ಪ ಭೇಟಿಯ ದಾಖಲೆಗಳು ಕುಮಾರಸ್ವಾಮಿ ಬಳಿ ಇದ್ದರೆ ತಕ್ಷಣವೇ ಬಿಡುಗಡೆ ಮಾಡಲಿ ಎಂದು ಆಕ್ರೋಶವನ್ನು ಹೊರಹಾಕಿದರು.
ಯಡಿಯೂರಪ್ಪ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗೆ ನನ್ನ ಭೇಟಿ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದರೆ, ಸರ್ಕಾರವನ್ನು ನಡೆಸುತ್ತಿರುವವರು ಯಾರು ಮೋದಿ, ಯಡಿಯೂರಪ್ಪ ಮತ್ತು ಐಟಿ ದಾಳಿಗೊಳಗಾದ ಆಪ್ತರು ನಮ್ಮ ಪಕ್ಷದವರಾ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಆಡಳಿತ ಪಕ್ಷದವರ ಮನೆ ಬಾಗಿಲು, ಕಚೇರಿಗೆ ಹೋಗುವವನೇ ಅಲ್ಲ. ಇಷ್ಟು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಯಾರ ಮನೆಗೂ ಹೋಗಿಲ್ಲ. ಹಾಗೆ ಹೋಗುವವರ್ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರವನ್ನು ನಡೆಸಿದರು. ಕುಮಾರಸ್ವಾಮಿ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅಂದರೆ ನನ್ನನ್ನು ಕಂಡರೆ ಅವರಿಗೆ ಭಯ ಇರಬೇಕೆಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕುಮಾರಸ್ವಾಮಿಯೇ ನೇರ ಕಾರಣ. ಸರ್ಕಾರ ಪತನದ ಅಂಚಿಗೆ ತಲುಪಿದಾಗ ಬರೋಬ್ಬರಿ 9 ದಿನ ಅಮೆರಿಕಾಕ್ಕೆ ಹೋಗಿ ಕುಮಾರಸ್ವಾಮಿ ಕುಳಿತಿದ್ದರು . ಶಾಸಕರು ಹೋಗುತ್ತಾರೆ ಬಾರಯ್ಯ ಎಂದರೆ, ಇವತ್ತು ಬರುತ್ತೇನೆ ಸರ್, ನಾಳೆ ಬರುತ್ತೇನೆ ಸರ್ ಎಂದು ಹೇಳುತ್ತಿದ್ದರು ಎಂದು ಕುಮಾರಸ್ವಾಮಿಯ ವಿರುದ್ಧ ಆಕ್ರೋಶವನ್ನು ಹೊರಹಾಕಿದರು