ಬೆಂಗಳೂರು: ಸಿದ್ದರಾಮಯ್ಯನವರೇ ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ? ಮಂಗಳ ಗ್ರಹದಲ್ಲಿದೆಯೇ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ತಮ್ಮ ಅಧಿಕಾರದ ಅವಧಿಯಲ್ಲಿ ಜನತೆಗೆ 15 ಲಕ್ಷ ಮನೆಯನ್ನು ಮಂಜೂರು ಮಾಡಿದ್ದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು ಈ ಹೇಳಿಕೆಗೆ ಬಿಜೆಪಿ ತಿರುಗೇಟನ್ನು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಅಧಿಕಾರ ಅವಧಿಯ ಕೊನೆಯಲ್ಲಿ ಮುಖ್ಯಮಂತ್ರಿ 15 ಲಕ್ಷ ಮನೆ ಯೋಜನೆಯನ್ನು ಬೆಂಗಳೂರು ನಗರದ ಬಡವರಿಗೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ ಬಜೆಟ್‌ನಲ್ಲಿ ಸೂಕ್ತ ಅನುದಾನವನ್ನು ಕಾಯ್ದಿರಿಸಲಿಲ್ಲ. ಮನೆಕಟ್ಟುವುದಕ್ಕೆ ಆಯ್ದುಕೊಂಡಂತಹ ಜಾಗ ವಿವಾದ ನಡೆಯಲು ಸೂಕ್ತವಾದ ಜಾಗವಾಗಿತ್ತು, ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ಅವರಿಗೆ ಪಿಎಚ್‌ಡಿ ಪದವಿಯನ್ನು ನೀಡಬಹುದು ಎಂದು ಬಿಜೆಪಿ ಲೇವಡಿ ಮಾಡಿದೆ.
ಇನ್ನು ಎಷ್ಟು ದಿನ ಬುರುಡೆ ಭಾಷಣವನ್ನು ಮಾಡುತ್ತೀರಿ ಬುರುಡೆರಾಮಯ್ಯ, ನೀವು ಘೋಷಣೆ ಮಾಡಿರುವಂತಹ 15 ಲಕ್ಷ ಮನೆಗಳು ಎಲ್ಲಿದೆ? ಭೂಮಿಯ ಮೇಲಿದೆಯೋ ಅಥವಾ ಮಂಗಳ ಗ್ರಹದಲ್ಲಿದೆಯೋ? ಕೇವಲ ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣವಾಗುತ್ತದೆಯೇ? ಮಂತ್ರ ಹೇಳಿದ ಮಾತ್ರಕ್ಕೆ ಮಾವಿನಕಾಯಿ ಮರದಿಂದ ಉದುರುತ್ತದೆಯೇ? ಎಂದು ಪ್ರಶ್ನಿಸಿದೆ.