ಬೆಂಗಳೂರು: ಬೆಂಗಳೂರಿನಾದ್ಯoತ ಇಂದು ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಲು ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
16 ಸಾವಿರ ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದ ಪೌರಕಾರ್ಮಿಕರು, ತಮ್ಮ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಪೌರಕಾರ್ಮಿಕರ ಪ್ರತಿಭಟನೆ ಇರುವ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ಮನೆ ಮನೆಯಿಂದ ಕಸವನ್ನು ಸಂಗ್ರಹಿಸುವ, ಕಸ ಗುಡಿಸುವ ಕೆಲಸಗಳನ್ನು ನಿಲ್ಲಿಸಿದ್ದಾರೆ. ಅಲ್ಲದೆ ಪೌರಕಾರ್ಮಿಕರು ಬಿಬಿಎಂಪಿ ಆವರಣವನ್ನು ಸ್ವಚ್ಛಗೊಳಿಸದೆ ಧರಣಿಯನ್ನು ನಡೆಸಿದ್ದಾರೆ. ಇತ್ತ ಶಾಸಕರು, ಸಚಿವರ ಮನೆಯಿಂದ ಕೂಡ ಕಸ ಸಂಗ್ರಹ ಮಾಡದೆ, 16 ಸಾವಿರ ಜನ ಪೌರಕಾರ್ಮಿಕರು, 10 ಸಾವಿರ ಕಸದ ಆಟೋ-ಟಿಪ್ಪರ್ ಚಾಲಕರು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ರಾಜ್ಯದಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಮಾಡುವಂತೆ ಒತ್ತಾಯಿಸಿ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಖಾಯಂ ಮಾಡದಿದ್ದರೆ ಮುಂದಿನ ತಿಂಗಳು ಅನಿರ್ದಿಷ್ಟಾವಧಿ ಧರಣಿಯನ್ನು ಮಾಡುತ್ತೇವೆ ಎಂದು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾಗಿರುವಂತಹ ನಾರಾಯಣ ಸುದ್ದಿಗಾರರಿಗೆ ಹೇಳಿಕೆಯನ್ನು ನೀಡಿದ್ದಾರೆ.