ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರ ವಿರುದ್ದ ಶಾಸಕ ಸಾ.ರಾ.ಮಹೇಶ್ ಮತ್ತೊಂದು ಭ್ರಷ್ಟಾಚಾರ ಆರೋಪವನ್ನು ನಡೆಸಿದ್ದಾರೆ. ಮೈಸೂರು ಜಿಲ್ಲೆಗೆ ಬಂದ ಎಂಟು ಕೋಟಿ ಎಸ್‌ಎಸ್‌ಸಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾ.ರಾ.ಮಹೇಶ್ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಮೈಸೂರು ಮಾಡುವ ನೆಪದಲ್ಲಿ ರೋಹಿಣಿಯವರು ಹಣವನ್ನು ಲೂಟಿ ಮಾಡಿದ್ದಾರೆ ಹಾಗೂ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರವನ್ನು ಮಾಡಿದ್ದು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯ ಅನುಮತಿಯನ್ನು ಪಡೆಯದೆ ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ ಎಂದರು. ಉಪವಿಭಾಗಾಧಿಕಾರಿಯೊಬ್ಬರ ಪತಿಯೊಬ್ಬ ಬ್ಯಾಗ್ ಸರಬರಾಜು ಗುತ್ತಿಗೆದಾರರಾಗಿದ್ದು, ಅವರಿಂದ ಕಿಕ್‌ಬ್ಯಾಕ್ ಪಡೆದು ಅವ್ಯವಹಾರ ಮಾಡಿದ್ದಾರೆ ಎಂದು ಹೇಳಿದರು.
ಐದು ಕೆ.ಜಿ. ಬ್ಯಾಗ್‌ಗೆ 52 ರೂ ಬಿಲ್ ಮಾಡಿದ್ದಾರೆ. ನಾವು ಖರೀದಿ ಮಾಡಿದಾಗ ಕೇವಲ 13ರೂ ಸಿಗುತ್ತದೆ. ಆದರೆ ಪ್ರತಿ ಬ್ಯಾಗ್‌ಗೆ 52 ರೂಪಾಯಿಗೆ ಖರೀದಿ ಮಾಡಿದ್ದಾರೆ. 14,71,458 ಬ್ಯಾಗ್‌ಗಳ ಖರೀದಿ ಮಾಡಿದ್ದಾರೆ. ವಾಸ್ತವ ಬೆಲೆ 1.47,14,586 ರೂ. ಆದರೆ 7.65 ಕೋಟಿಯಷ್ಟು ಬಿಲ್ ಮಾಡಲು ಹೊರಟಿದ್ದಾರೆ. ಬರೋಬ್ಬರಿ ಆರು ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಸಾ.ರಾ.ಮಹೇಶ್ ಆರೋಪ ಮಾಡಿದ್ದಾರೆ
ಕರ್ನಾಟಕದ ತೆರಿಗೆಯ ಹಣ ಆಂಧ್ರದಲ್ಲಿ ಆಸ್ತಿ ಮಾಡುವವರ ಪಾಲಾಗುತ್ತಿದೆ. ಈ ಭ್ರಷ್ಟಾಚಾರ ಮುಚ್ಚಿಹಾಕಿಕೊಳ್ಳಲು ಮುಖ್ಯಮಂತ್ರಿಗಳ ಮನೆಗೆ ಹೋಗಿದ್ದರಾ? ಎಂದು ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ ಸಾ.ರಾ.ಮಹೇಶ್, ಇವತ್ತು ಸಿಎಂ, ಸಿಎಸ್ ಭೇಟಿ ಮಾಡುತ್ತೇನೆ. ಸಿಂಧೂರಿಯನ್ನು ಅಮಾನತ್ತಿನಲ್ಲಿಟ್ಟು ತನಿಖೆಯನ್ನು ಮಾಡದಿದ್ರೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದ್ದಾರೆ.
ಇಂತಹ ದಕ್ಷತೆ ಇಲ್ಲದ ಅಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಬೇಡಿ ಎಂದು ಹೇಳಿದ್ದೆ. ಸ್ವಿಮ್ಮಿಂಗ್ ಪೂಲ್, ಜಿಮ್, ಕಟ್ಟಡ ನವೀಕರಣದ ಹಣವನ್ನು ಅವರಿಂದಲೇ ಭರಿಸುವಂತೆ ಒತ್ತಾಯ ಮಾಡಿದ್ದೇನೆ. ಈ ಸಂಬoಧ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನ ಭೇಟಿ ಮಾಡಿದ್ದೇನೆ ಎಂದರು.
ಯಾವುದೇ ಸಂದರ್ಭದಲ್ಲಿ, ಯಾವುದೇ ಅಧಿಕಾರಿಗಳ ಬಗ್ಗೆ ರಾಜಕಾರಣಿಗಳು ಮಾತನಾಡುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬೇರೆ ರೀತಿ ಮಾತನಾಡುತ್ತಾರೆ. ಇನ್ನೂ ಮಹಿಳಾ ಅಧಿಕಾರಿಯಾದರೆ ದೇವರೇ ಗತಿ. ಆ ಅಧಿಕಾರಿಯ ಹನ್ನೆರಡು ವರ್ಷಗಳ ಸೇವೆಯನ್ನು ನೋಡಿದ್ದೇನೆ. ನಾನು ಎಂಟು ಆರೋಪ ಮಾಡಿದ್ದೆ. ಅದರಲ್ಲಿ ಅವರದ್ದೆ ಅಧಿಕಾರಿಗಳು ವರದಿಯನ್ನು ಕೊಟ್ಟಿದ್ದಾರೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದರು.