ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿರುವ ಡೀಮ್ಡ್ ಅರಣ್ಯ ಮತ್ತು ಅಮೃತ್ ಮಹಲ್ ಜಾಗಗಳಲ್ಲಿ ಆಸ್ಪತ್ರೆ, ಶಾಲೆ, ಊರುಗಳೂ ಇವೆ. ಸರ್ಕಾರ ಒಪ್ಪುವುದಾದರೆ ಅದಕ್ಕೆ ಬದಲಿ ಜಾಗವನ್ನು ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಇದಕ್ಕಾಗಿ ಭೂಮಿಯನ್ನು ಗುರುತು ಮಾಡಿಟ್ಟುಕೊಂಡಿದ್ದೇವೆ. ಜನ ವಸತಿ ಪ್ರದೇಶಗಳಿರುವ ಡೀಮ್ಡ್ ಮತ್ತು ಅಮೃತ್ ಮಹಲ್ ಭೂಮಿಯ ಎರಡು ಪಟ್ಟು ಪ್ರಮಾಣದಷ್ಟು ಭೂಮಿಯನ್ನು ನಾವು ನೀಡಲು ತಯಾರಿದ್ದೇವೆ. ಇದಕ್ಕೆ ಬೇಕಿದ್ದರೆ ನಾವು ಪ್ರಸ್ತಾ ವನೆ ಕಳಿಸಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ಡೀಮ್ಡ್ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದರೂ ನೋಟಿಫಿಕೇಷನ್ ಮಾತ್ರ ಆಗಿದೆ. ಕಾಯ್ದೆ ಆಗಿಲ್ಲ. ನಮ್ಮ ಜಿಲ್ಲೆಯಲ್ಲಿ ೧.೪೧ ಲಕ್ಷ ಹೆಕ್ಟರ್ ಡೀಮ್ಡ್ ಫಾರೆಸ್ಟ್ ಎಂದು ಗುರಿತಿಸಲಾಗಿತ್ತು. ಇದೀಗ ಸರ್ಕಾರ ಅದನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದ ನಂತರ ಅದರ ಪ್ರಮಾಣ ೫೧೯೦೦ ಹೆಕ್ಟರ್‌ಗೆ ಇಳಿದಿದೆ ಎಂದರು.
ಈಗ ಕೈಬಿಟ್ಟಿರುವ ಡೀಮ್ಡ್ ಜಮೀನನ್ನು ಅರಣ್ಯ ಇಲಾಖೆಯಿಂದ ಹಿಂದಕ್ಕೆ ಪಡೆಯಲು ಆ ಜಾಗವನ್ನು ಅವರಿಗೆ ಕೊಟ್ಟೇ ಇರಲಿಲ್ಲ. ಡೀಮ್ಡ್ ಎಂದು ಘೋಷಣೆ ಆಷ್ಟೇ ಆಗಿತ್ತು. ಈ ಕಾರಣಕ್ಕೆ ಗೊಂದಲ ಇತ್ತು. ಯಾವುದೇ ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ತಕರಾರರು ಇದ್ದು, ಕಡತವನ್ನು ಅರಣ್ಯ ಇಲಾಖೆಗೆ ಕಳಿಸಿದಾಗ ಮಾತ್ರ ಡೀಮ್ಡ್ ಸಮಸ್ಯೆಯೂ ಅಡ್ಡ ಬರುತ್ತಿತ್ತು ಎಂದು ವಿವರಿಸಿದರು.
ಇದಲ್ಲದೆ ಮೀಸಲು ಅರಣ್ಯ ಎಂದು ಈ ಹಿಂದೆಯೇ ತೀರ್ಮಾನ ಆಗಿರುವ ಸಾಕಷ್ಟು ಜಮೀನು ಪಹಣಿಯಲ್ಲಿ ಇನ್ನೂ ಅರಣ್ಯ ಎಂದು ಬರುವುದಿಲ್ಲ. ಇಂತಹ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಂತಿಮ ಹಂತದಲ್ಲಿ ಈ ಜಾಗ ನಮ್ಮದು ಎಂದು ಹೇಳುವಾಗ ಮತ್ತೆ ಗೊಂದಲಕ್ಕೆ ಕಾರಣವಾಗುತ್ತಿದೆ. ಈ ಕಾರಣಕ್ಕೆ ಅರಣ್ಯದ ಗಡಿ ಗುರುತಿಸಿ ಪ್ರತ್ಯೇಕಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಯೋಜನೆ ಯಡಿ ಫಲಾನುಭವಿಗಳಿಗೆ ಮಂಜೂರಾದ ಜಮೀನಿಗೆ ಸಂಬಂಧಿಸಿದ ದಾಖಲೆಗ ಳನ್ನು ಜೆರಾಕ್ಸ್ ಹಾಗೂ ಸ್ಕ್ಯಾನ್ ಮಾಡಿಸಿ ಜಿಲ್ಲಾಧಿಕಾರಿ ಕಚೇರಿ, ಎಸಿ ಕಚೇರಿಗಳಲ್ಲಿ ಇಡಲು ಕ್ರಮ ವಹಿಸಲಾಗಿದೆ. ಮುಂದೆ ಯಾರೂ ತಮ್ಮ ಕಡತ ನಾಪತ್ತೆಯಾಗಿದೆ ಎನ್ನುವ ದೂರು ಬರಬಾರದು. ಎಸಿ ಕಚೇರಿಯಲ್ಲಿ ಸಿಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಂತೂ ಸಿಗಲೇ ಬೇಕು. ಈ ಕೆಲಸ ಶೇ.೮೦ ರಷ್ಟು ಆಗಿದೆ. ಮಿಕ್ಕ ಶೇ. ೨೦ ರಷ್ಟನ್ನು ಸಧ್ಯದಲ್ಲೇ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಭೂಮಿ ಆರ್‌ಟಿಸಿ ಇಲಾಖಗೆ ಪತ್ರ ಬರೆದು ನಮ್ಮ ಜಿಲ್ಲೆಯಲ್ಲಿ ಆಶ್ರಯ ಯೋಜನೆಗೆ ಕೊಟ್ಟಿರುವ ಎಲ್ಲಾ ಸರ್ವೇ ನಂಬರ್ ಪಟ್ಟಿಯನ್ನು ತರಿಸಿಕೊಂಡಿದ್ದೇವೆ. ಇಲ್ಲಿಯವರೆಗೆ ಯಾರೂ ಈ ಕಾರ್ಯ ಮಾಡಿರಲಿಲ್ಲ. ಪಡಿಓ, ತಹಸೀಲ್ದಾರರಿಗೆ ಗೊತ್ತಿಲ್ಲದ ಮಾಹಿತಿ ಈಗ ನಮ್ಮ ಬಳಿ ಇದೆ ಎಂದರು.
ಈ ಎಲ್ಲಾ ಜಾಗವನ್ನು ಸರ್ವೇ ಮಾಡಿಸಿ ಭೂಮಿಯನ್ನು ಸಂಬಂಧಿಸಿದ ಗ್ರಾ.ಪಂ.ಗಳಿಗೆ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ. ಇದು ಪೂರ್ಣಗೊಳ್ಳಲು ಸ್ವಲ್ಪ ಸಮಯ ಹಿಡಿ ಯುತ್ತದೆ ಎಂದು ತಿಳಿಸಿದರು. ಸರ್ಕಾರಿ ಭೂಮಿ ಅಕ್ರಮ ಮಂಜೂರಾತಿ ಸಂಬಂಧ ನಾವು ಬಂದ ಮೇಲೆ ೭ ಮಂದಿ ರೆವೆನ್ಯೂ ಇನ್ಸ್‌ಪೆಕ್ಟರ್ ಗಳನ್ನು ನಾವು ಜೈಲಿಗೆ ಕಳಿಸಿದ್ದೇವೆ. ಈ ಪೈಕಿ ಒಬ್ಬಾತನಿಗೆ ಇನ್ನೂ ಬಿಡುಗಡೆ ಆಗಿಲ್ಲ. ಹಿಂದೆ ಯಾರೂ ಈ ಕ್ರಮ ಕೈಗೊಂಡಿಲ್ಲ ಎಂದರು.
ಸುದ್ದಿ ಕೃಪೆ: ನ್ಯೂಸ್ ಕನ್ನಡ