ತುಮಕೂರು: ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ರಾಮಮಂದಿರ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2024ರ ಚುನಾವಣೆಯವರೆಗೂ ಬಿಜೆಪಿಯವರು ರಾಮಮಂದಿರ ನಿರ್ಮಾಣದ ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಎಂದು ಬಿಜೆಪಿ ಪಕ್ಷವನ್ನು ವ್ಯಂಗ್ಯ ಮಾಡಿದರು.
ನಾಳೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾವು ತಕ್ಷಣವೇ ರಾಮ ಮಂದಿರ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ನವರು ಕೂಡ ರಾಮಮಂದಿರ ನಿರ್ಮಾಣಕ್ಕೆ ಹಣವನ್ನು ನೀಡಿದ್ದೇವೆ, ತಾನು 10 ಸಾವಿರ ಕೊಟ್ಟಿದ್ದೇಣೆ, ಮಾಜಿ ಶಾಸಕ ಷಫಿ ಅಹಮದ್ ಕೂಡ ದುಡ್ಡು ಕೊಟ್ಟಿದ್ದಾರೆ ಎಂದು ಸಭೆಯಲ್ಲಿ ಹೇಳಿದರು.
ಶ್ರೀ ರಾಮ ಬಿಜೆಪಿಗೆ ಮಾತ್ರ ಸೇರಿದ ವ್ಯಕ್ತಿಯಲ್ಲ ಎಲ್ಲರಿಗೂ ಸೇರಿದ ವ್ಯಕ್ತಿ, ರಾಮಮಂದಿರದ ನಿರ್ಮಾಣ ಮಾಡಲು ಸಾವಿರಾರು ಕೋಟಿ ರೂ ಹಣವನ್ನು ಸಂಗ್ರಹ ಮಾಡಿದ್ದಾರೆ. ಇನ್ನೂ ಮಾಡುತ್ತಲೇ ಇದ್ದಾರೆ ಎಂದ ಪರಮೇಶ್ವರ್ ಆ ಹಣ ಎಲ್ಲಿ ಹೋಯಿತು, ಯಾರು ಲೆಕ್ಕ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಯಾವಾಗಲೂ ರಾಮ, ಭೀಮ, ಲಕ್ಷ್ಮಣ ಹೀಗೆ ವಿಷಯಗಳನ್ನು ತೆಗೆದುಕೊಂಡು ಜನಸಾಮಾನ್ಯರ ಭಾವನೆಯ ಜೊತೆ ಆಟವಾಡುತ್ತಿರುತ್ತಾರೆ ಎಂದು ವ್ಯಂಗ್ಯ ಮಾಡಿದರು.