Sunday, June 4, 2023
Homeಇತರೆಪುನೀತ್ ಪುಣ್ಯಸ್ಮರಣೆಯ ಪ್ರಯುಕ್ತ ಅರಮನೆ ಮೈದಾನದಲ್ಲಿ 25 ಸಾವಿರ ಜನರಿಗೆ ಅನ್ನಸಂತರ್ಪಣೆ : ಸಾವಿರಾರು ಅಭಿಮಾನಿಗಳು,...

ಪುನೀತ್ ಪುಣ್ಯಸ್ಮರಣೆಯ ಪ್ರಯುಕ್ತ ಅರಮನೆ ಮೈದಾನದಲ್ಲಿ 25 ಸಾವಿರ ಜನರಿಗೆ ಅನ್ನಸಂತರ್ಪಣೆ : ಸಾವಿರಾರು ಅಭಿಮಾನಿಗಳು, ಗಣ್ಯರು ಭಾಗಿ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ರವರ ಪುಣ್ಯಸ್ಮರಣೆಯ ಪ್ರಯುಕ್ತ ಇಂದು ಸದಾಶಿವನಗರ ಸಮೀಪದ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಮತ್ತು ಗಣ್ಯರಿಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಪುನೀತ್ ರವರ ಅಭಿಮಾನಿಗಳ ಪ್ರೀತಿಗೆ ಬೆಲೆಯನ್ನು ನೀಡಿರುವ ರಾಜ್ ಕುಟುಂಬ ಬೆಂಗಳೂರಿನ ಅಪ್ಪು ನಿವಾಸ ಸದಾಶಿವನಗರ ಸಮೀಪವಿರುವ ಅರಮನೆ ಮೈದಾನದ ತ್ರಿಪುರವಾಸಿನಿ ಗೇಟ್ ಒಳಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದಾರೆ.

ಇಂದು ಅನ್ನಸಂತರ್ಪಣೆಯ ಅಡುಗೆಗಾಗಿ ಅರಮನೆ ಮೈದಾನದಲ್ಲಿ 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀಟರ್ ಎಣ್ಣೆ, ಕೆಜಿಗಟ್ಟಲೆ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಪುದೀನಾ, ಕೊತ್ತಂಬರಿ ಸೊಪ್ಪಿನ ಕಟ್ಟು, ರಾಶಿ ರಾಶಿ ದಿನಸಿಗಳು, ರಾಶಿ ಚಿಕನ್, ಮೊಟ್ಟೆ, ಮೂಟೆಗಟ್ಟಲೆ ತರಕಾರಿಗಳು ಅರಮನೆ ಮೈದಾನಕ್ಕೆ ತರಿಸಿದ್ದಾರೆ.

ಅರಮನೆ ಮೈದಾನದ ಅನ್ನಸಂತರ್ಪಣಾ ಕಾರ್ಯಕ್ರಮಕ್ಕೆ 800ಕ್ಕೂ ಹೆಚ್ಚು ನುರಿತ ಬಾಣಸಿಗರಿಂದ ಅಭಿಮಾನಿಗಳಿಗಾಗಿ ಅಡುಗೆ ಸಿದ್ಧವಾಗುತ್ತಿದೆ ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿಯೇ ಭೋಜನವನ್ನು ನೀಡಲು ದೊಡ್ಮನೆ ನಿರ್ಧಾರ ಮಾಡಿದೆ . ಮಧ್ಯರಾತ್ರಿಯಿಂದಲೇ ಭೋಜನಕ್ಕೆ ಅಡುಗೆ ಆರಂಭವಾಗಿದ್ದು 10 ಗಂಟೆಯೊಳಗೆ ಅಡುಗೆ ತಯಾರಿ ಮಾಡಿಟ್ಟು 11 ಗಂಟೆಯ ಬಳಿಕ ಅರಮನೆಗೆ ಮೈದಾನಕ್ಕೆ ಬರುವ ಅಭಿಮಾನಿಗಳು, ಗಣ್ಯರಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.

25ರಿಂದ 50 ಸಾವಿರದಷ್ಟು ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, 2 ಗೇಟ್ ಗಳಲ್ಲಿ 5 ಸಾವಿರ ಕುರ್ಚಿ ಮತ್ತು ಟೇಬಲ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನಷ್ಟು ಜನರು ಆಗಮಿಸಿದರೆ ಪ್ರತ್ಯೇಕ 8 ಕೌಂಟರ್ ತೆರೆಯಲು ನಿರ್ಧಾರ ಮಾಡಲಾಗಿದೆ. ಅನ್ನಸಂತರ್ಪಣೆಗೆ ಆಗಮಿಸುವ ಗಣ್ಯರು ಮತ್ತು ಅಭಿಮಾನಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.

ಸಂಪೂರ್ಣವಾಗಿ ರಾಜ್ ಕುಮಾರ್ ಕುಟುಂಬದ ಸೂಚನೆ ನಿರ್ದೇಶನದ ಮೇರೆಗೆ ಬಾಣಸಿಗರು ಇಂದಿನ ಊಟಕ್ಕೆ ಖಾದ್ಯಗಳನ್ನು ತಯಾರಿಸಿದ್ದು ಅದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಇಷ್ಟಪಟ್ಟು ಸೇವಿಸುತ್ತಿದ್ದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು ಕೂಡ ಸೇರಿವೆ

ಇನ್ನು ಇಂದಿನ ಅನ್ನಸಂತರ್ಪಣೆ ಕಾರ್ಯಕ್ರಮದ ಸಮಯದಲ್ಲಿ ಪ್ಯಾಲೇಸ್ ಗ್ರೌಂಡ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ. ಅದರ ಜೊತೆಗೆ ಮಧ್ಯರಾತ್ರಿಯಿಂದ ಸದಾಶಿವನಗರದ ಪುನೀತ್ ನಿವಾಸಕ್ಕೆ ಕೂಡ ಭದ್ರತೆ ಒದಗಿಸಲಾಗಿದೆ.

Most Popular

Recent Comments