ಬೆಂಗಳೂರು: ರಾಜ್ಯದಾದ್ಯಂತ ನಟ ಪುನೀತ್ ರಾಜ್ ಕುಮಾರ್ ರವರ ಸಾವಿನಿಂದ ಅನೇಕ ಮಂದಿ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಇದರಿಂದ ಬೇಸರಗೊಂಡ ನಟ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳಿಗೆ ಮನವಿಯನ್ನು ಮಾಡಿದ್ದಾರೆ.
ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಿಳಿದು ಬೇಸರಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್ ‘ನಿಮ್ಮ ಕುಟುಂಬಕ್ಕೆ ನೀವು ಮುಖ್ಯ ಹಾಗೆ ನಮಗೂ ನೀವು ಮುಖ್ಯ. ಪುನೀತ್ ರಾಜ್‌ಕುಮಾರ್ ಇಲ್ಲದ ನೋವು ನಮಗೂ ಆಗಿದೆ. ಹಾಗಂತ ನೀವು ನಿಮ್ಮ ಕುಟುಂಬವನ್ನು ಮರೆತು ಆತ್ಮಹತ್ಯೆ ಮಾಡಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ? ನಾವು ನೋವಲ್ಲಿ ಇದ್ದೇವೆ. ನೀವು ಈ ರೀತಿ ಮಾಡಿದ್ರೆ ನಮಗೆ ಮತ್ತಷ್ಟು ನೋವಾಗುತ್ತೆ ಅಭಿಮಾನಿಗಳು ಈ ರೀತಿ ಮಾಡುವುದು ಅಪ್ಪುಗೂ ಇಷ್ಟ ಆಗೋದಿಲ್ಲ. ದಯವಿಟ್ಟು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರವನ್ನು ಮಾಡ್ಬೇಡಿ’ ಎಂದು ಹೇಳಿದರು.
ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಅಪ್ಪು ಇಲ್ಲದ ನೋವಲ್ಲಿ ನಾವೆಲ್ಲರೂ ಇದ್ದೇವೆ. ನೀವು ಆತ್ಮಹತ್ಯೆ ಮಾಡಿಕೊಂಡು ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸಬೇಡಿ. ನಮ್ಮ ನೋವನ್ನು ನಿಮ್ಮ ಕುಟುಂಬದವರಿಗೆ ನೀಡಬೇಡಿ ಈಗಾಗಲೇ ಪುನೀತ್ ಪತ್ನಿ ಸಾಕಷ್ಟು ನೊಂದಿದ್ದಾರೆ. ಇದೀಗ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅವರಿಗೆ ಇನ್ನಷ್ಟು ಆಘಾತವನ್ನುಂಟು ಮಾಡಿದೆ.
ಅಪ್ಪು ಸಾವಿನಿಂದ ಹೀಗಾಯ್ತು ಎಂದು ಜನ ಮಾತನಾಡಿಕೊಳ್ಳುವಂತೆ ಮಾಡಬೇಡಿ. ಅದರಿಂದ ನಮಗೂ ಒಳ್ಳೆಯದಾಗಲ್ಲ. 12 ಅಭಿಮಾನಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ. ಇದಕ್ಕೆ ನನ್ನ ಪತಿ ಪುನೀತ್ ಕಾರಣ ಎಂಬಂತಾಗುತ್ತದೆ ಎಂದು ಅಶ್ವಿನಿ ಬೇಸರಗೊಂಡಿದ್ದಾರೆ. ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಳಕಳಿಯಿಂದ ವಿನಂತಿ ಮಾಡಿದ್ದಾರೆ.