ಕಲ್ಲಡ್ಕ/ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಸ್ವಯಂಸೇವಕ ಮುಖ್ಯಸ್ಥರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ನಡೆದ ಸಂಧಾನದಲ್ಲಿ ಹಿಂದೂ ಬ್ರಿಗೇಡ್ ಹಾಗೂ ಬಿಜೆಪಿ ನಡುವಿನ ಸಂಧಾನ ಸಕ್ಸಸ್ ಆಗಿದೆ ಎಂಬ ಮಾಹಿತಿ ದೊರಕಿದೆ.
ಹಿಂದೂ ಬ್ರಿಗೇಡ್ ಬಂಡಾಯ ಅಭ್ಯರ್ಥಿ ಘೋಷಿಸುವುದಾಗಿ ಈ ಹಿಂದೆ ಘೋಷಿಸಿತ್ತು, ಇದು ಶೃಂಗೇರಿ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲದ ವಾತಾವರಣ ನಿರ್ಮಾಣ ಮಾಡಿತ್ತು.
ಕಳೆದ ಚುನಾವಣೆಯಲ್ಲಿ ಪ್ರವೀಣ್ ಖಾಂಡ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಬಿಜೆಪಿ ಅಭ್ಯರ್ಥಿ ಡಿ.ಎನ್ ಜೀವರಾಜ್ ಅಲ್ಪಮತಗಳಿಂದ ಕಾಂಗ್ರೆಸ್ ಎದುರು ಪರಾಭವಗೊಂಡಿದ್ದರು.
ಆದರೆ ಒಳಗಿನ ಆಂತರಿಕ ಅಸಮಾಧಾನ ಈ ಬಾರಿಯೂ ಮುಂದುವರೆದು ಪ್ರವೀಣ್ ಖಾಂಡ್ಯ ಹಿಂದೂ ಬ್ರಿಗೇಡ್ ಸಂಘಟನೆ ಕಟ್ಟಿ ಅಭ್ಯರ್ಥಿ ಬದಲಾವಣೆ ಆಗಬೇಕು ಇಲ್ಲವಾದಲ್ಲಿ ಈ ಬಾರಿಯೂ ಪಕ್ಷೇತರರಾಗಿ ನಿಲ್ಲುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿತ್ತು.
ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಲಡ್ಕ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಕ್ಸಸ್ ಆಗಿದ್ದು ಮುಂಬರುವ ಚುನಾವಣೆಯ ಉಸ್ತುವಾರಿಯಲ್ಲೂ ಹೊಣೆ ಹೊತ್ತು ಬಹಿರಂಗವಾಗಿ ಹಿಂದೂ ಬ್ರಿಗೇಡ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.
ಇಂದಿನ ಸಂಧಾನ ಸಭೆಯಲ್ಲಿ ಹಿಂದೂ ಬ್ರಿಗೇಡ್ ಪದಾಧಿಕಾರಿಗಳು ತಮಗೆ ಬಿಜೆಪಿ ನಾಯಕರಿಂದ ಉಂಟಾದ ಸಮಸ್ಯೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಪಟ್ಟುಹಿಡಿದಿದ್ದು, ಪಕ್ಷದಲ್ಲಿ ಪ್ರಾತಿನಿಧ್ಯ ಹಾಗೂ ಚುನಾವಣಾ ಜವಾಬ್ದಾರಿಗೆ ಸಹ ಒತ್ತಾಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಿ.ಎನ್ ಜೀವರಾಜ್ ಮುಂದೆ ಸರಿಪಡಿಸಿಕೊಂಡು ಹೋಗುವುದಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರ ಮುಂದೆ ಮಾತು ನೀಡಿರುವುದಾಗಿ ಬಲ್ಲ ಮೂಲಗಳಿಂದ ಮಾಹಿತಿ ದೊರಕಿದೆ. ಆಂತರಿಕ ಭಿನ್ನಮತದಿಂದ ಅತಂತ್ರ ಸ್ಥಿತಿಗೆ ತಲುಪಿದ್ದ ಶೃಂಗೇರಿ ಬಿಜೆಪಿ ನಿಟ್ಟುಸಿರು ಬಿಡುವಂತಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್ ಜೀವರಾಜ್, ಹಿಂದೂ ಬ್ರಿಗೇಡ್ ನ ಪ್ರವೀಣ್ ಖಾಂಡ್ಯ, ಗೌರಿಗಂಡಿ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಚಿಕ್ಕಮಗಳೂರು: ಮೊದಲ ದಿನವೇ ನಾಮಪತ್ರ ಸಲ್ಲಿಸಿದ ಜಿಲ್ಲೆಯ ಇಬ್ಬರು ಬಿಜೆಪಿ ಅಭ್ಯರ್ಥಿಗಳು
ಕೊಪ್ಪ/ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚುನಾವಣಾ ಆಯೋಗ ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಗುರುವಾರ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಆರಂಭವಾದ ಮೊದಲ ದಿನವೇ ಜಿಲ್ಲೆಯ ಇಬ್ಬರು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ ಎನ್ ಜೀವರಾಜ್ ಅವರು ಮೊದಲ ದಿನವೇ ತಮ್ಮ ಉಮೇದುವಾರಿಗೆ ಸಲ್ಲಿಸಿದ್ದಾರೆ.
ಬೆಳ್ಳಿ ಪ್ರಕಾಶ್ ಅವರು ತಮ್ಮ ಪತ್ನಿ ಕವಿತಾ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಜೊತೆ ತೆರಳಿ ಕಡೂರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಮಾಜಿ ಶಾಸಕ, ಶೃಂಗೇರಿ ಅಭ್ಯರ್ಥಿ ಡಿ ಎನ್ ಜೀವರಾಜ್ ಕೊಪ್ಪದಲ್ಲಿ ತಾಲ್ಲೂಕು ಕಛೇರಿಯಲ್ಲಿ ಕ್ಷೇತ್ರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕು ಕಚೇರಿ ಹೊರಬಾಗದಲ್ಲಿ ಸೇರಿದ್ದ ಕಾರ್ಯಕರ್ತರು ಜೀವರಾಜ್ ಪರ ಘೋಷಣೆ ಕೂಗಿದರು. ಅದಕ್ಕು ಮುನ್ನ ಬೆಳಿಗ್ಗೆ ಹಿಂಬರವಳ್ಳಿ ಗಣಪತಿ, ವೀರಭದ್ರ, ಅರಳಿಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಜೀವರಾಜ್ ಪತ್ನಿ ಹಾಗೂ ಆಪ್ತರು ಇದ್ದರು.
ನಾಳೆ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು 16 ರಂದು ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಏಳು ದಿನಗಳಲ್ಲಿ ಎರಡು ದಿನ ಸರ್ಕಾರಿ ರಜೆ ಇರಲಿದ್ದು, ಐದು ದಿನಗಳು ಮಾತ್ರ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಇದೆ. ಅಭ್ಯರ್ಥಿಗಳು ಶುಭ ದಿನ, ಶುಭ ಗಳಿಗೆ ನೋಡಿಕೊಂಡು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಆನ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ: ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಚುನಾವಣೆ ಆಯೋಗದ ವೆಬ್ಸೈಟ್ನಲ್ಲಿ ಎಲ್ಲಾ ದಾಖಲೆಗಳೊಂದಿಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ.