ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡಿರುವುದು ಹೃದಯದಿಂದಲ್ಲ, ಜನರ ಮೇಲಿರುವ ಭಯದಿಂದ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ದೇಶದ ಜನರಿಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂ. ಹಾಗೂ ಡಿಸೇಲ್ ಮೇಲೆ 10 ರು. ಅಬಕಾರಿ ಸುಂಕವನ್ನು ಕಡಿತ ಮಾಡುವ ಮೂಲಕ ಗುಡ್ ನ್ಯೂಸ್ ನೀಡಿದೆ.
ಪೆಟ್ರೋಲ್ ಮತ್ತು ಡಿಸೇಲ್ ಲೀಟರ್ ಗೆ 100 ರೂ.ಗಳ ಗಡಿ ದಾಟಿ ತಿಂಗಳುಗಳೇ ಕಳೆದಿತ್ತು. ಇದರ ಜೊತೆಗೆ ಅಡುಗೆ ಅನಿಲದ ದುಬಾರಿ ಬೆಲೆಯ ಭಾರ ಸಹ ಜನರ ಮೇಲೆ ಇತ್ತು. ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಿರುವುದರಿಂದ ಬೆಲೆ ಇಳಿಯಲಿದೆ. ಅಬಕಾರಿ ಸುಂಕ ಕಡಿತವು ನವೆಂಬರ್ 4 ರಿಂದ ಜಾರಿಗೆ ಬರಲಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್‌ಗೆ ₹110.04 ರಿಂದ ₹105.04 ಕ್ಕೆ ಇಳಿಯಲಿದೆ.
ಡೀಸೆಲ್ ದರ ಲೀಟರ್‌ಗೆ ₹98.42 ರಿಂದ ₹88.42ಕ್ಕೆ ಇಳಿಕೆಯಾಗಲಿದೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ ರೂ. 5 ಮತ್ತು ರೂ. 10 ಗೆ ಕಡಿಮೆ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅದಕ್ಕೆ ಅನುಗುಣವಾಗಿ ಕಡಿಮೆಯಾಗುತ್ತವೆ ಎಂದು ಹಣಕಾಸು ಸಚಿವಾಲಯ ಮಾಹಿತಿಯನ್ನು ಹೊರಡಿಸಿತ್ತು. ಇದಕ್ಕೆ ಪ್ರತಿರೋಧವನ್ನು ತೋರಿಸಿದ ಪ್ರಿಯಾಂಕ ಗಾಂಧಿ ವಾದ್ರಾ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿರುವುದು ಹೃದಯದಿಂದಲ್ಲ, ದೇಶದಲ್ಲಿರುವ ಪ್ರಜೆಗಳ ಭಯದಿಂದ ಎಂದು ಹೇಳಿದ್ದಾರೆ.