ಲಕ್ನೋ: ಸಹಪಾಠಿಯನ್ನು ಕಚ್ಚಿದ ಕಾರಣಕ್ಕೆ 5 ವರ್ಷದ ಬಾಲಕನನ್ನು ಶಾಲೆಯ ಪ್ರಾಂಶುಪಾಲ ಶಾಲೆ ಕಟ್ಟಡದ ಮೊದಲ ಮಹಡಿಯಿಂದ ತಲೆಕೆಳಗೆ ಮಾಡಿ ಹಿಡಿದುಕೊಂಡು ನೇತಾಡಿಸಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಶಾಲೆಯಲ್ಲಿ ನಡೆದಿದೆ.
ಬಾಲಕ ಸೋನು ಯಾದವ್ ತನ್ನ ಸಹಪಾಠಿ ಒಬ್ಬನಿಗೆ ಕಚ್ಚಿದ ಎಂಬ ಕಾರಣಕ್ಕೆ ಪ್ರಾಂಶುಪಾಲ ಆತನ ಪಾದಗಳನ್ನು ಹಿಡಿದು ತಲೆಕೆಳಗಾಗಿ ಹಿಡಿದು ಶಿಕ್ಷೆಯನ್ನು ನೀಡಿದ್ದಾನೆ.
ಈ ಘಟನೆಯ ಸಂಪೂರ್ಣ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸದ್ಭಾವನಾ ಶಿಕ್ಷಣ ಸಂಸ್ಥಾನ ಜೂನಿಯರ್ ಹೈಸ್ಕೂಲ್‌ನ ಇತರ ಮಕ್ಕಳು ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ಎಂಬುವವರು ಮಗುವನ್ನು ತಲೆಕೆಳಗಾಗಿ ಹಿಡಿದು ನೇತಾಡಿಸುತ್ತಿರುವುದನ್ನು ಆಘಾತದಿಂದ ನೋಡುತ್ತಿರುವುದು ಸೆರೆಯಾಗಿದೆ.
ಬಾಲಕ ತನಗೆ ನೀಡಿದ ಶಿಕ್ಷೆಗೆ ಭಯಗೊಂಡು ಅಳಲು ಪ್ರಾರಂಭಿಸಿದನು. ಮನೆಗೆ ತಲುಪಿದ ನಂತರ ತನ್ನ ಪೋಷಕರಿಗೆ ಸಂಪೂರ್ಣವಾಗಿ ಘಟನೆಯನ್ನು ವಿವರಿಸಿದ್ದಾನೆ ಇದರಿಂದ ಕೋಪಗೊಂಡ ಆತನ ತಂದೆ ರಂಜಿತ್ ಯಾದವ್ ಪ್ರಾಂಶುಪಾಲನ ವಿರುದ್ಧ ಅಹ್ರೌರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಂಶುಪಾಲನ ವಿರುದ್ಧ ಬಾಲಾಪರಾಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.