Friday, June 9, 2023
Homeಇತರೆಪೊಲೀಸರು ಕೇಸರಿ ಬಣ್ಣದ ಶಲ್ಯ ಧರಿಸುವುದನ್ನು ವಿರೋಧಿಸುವ ವಿಪಕ್ಷಗಳು "ಕೇಸರಿಬಾತ್" ತಿನ್ನುವುದನ್ನು ನಿಷೇಧಿಸಲಿ : ಆರಗ...

ಪೊಲೀಸರು ಕೇಸರಿ ಬಣ್ಣದ ಶಲ್ಯ ಧರಿಸುವುದನ್ನು ವಿರೋಧಿಸುವ ವಿಪಕ್ಷಗಳು “ಕೇಸರಿಬಾತ್” ತಿನ್ನುವುದನ್ನು ನಿಷೇಧಿಸಲಿ : ಆರಗ ಜ್ಞಾನೇಂದ್ರ

ಬೆಂಗಳೂರು: ಆಯುಧ ಪೂಜೆಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕಾಪು ಹಾಗೂ ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕೇಸರಿ ದಿರಿಸಿನಲ್ಲಿ ಫೋಟೋ ತೆಗೆಸಿಕೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರರವರು ಕೇಸರಿ ಬಣ್ಣ ಕೇವಲ ಬಿಜೆಪಿ ಪಕ್ಷದ ಪ್ರತೀಕವಲ್ಲ. ಪೊಲೀಸರು ಕೇಸರಿ ಶಲ್ಯ ಧರಿಸಿದ ಬಗ್ಗೆ ರಾಜಕೀಯ ಮಾಡುವ ವಿಪಕ್ಷಗಳು ಮುಂದೆ ಕೇಸರಿ ಬಾತ್ ನಿಷೇಧಿಸಬೇಕು ಎಂದರೆ ಒಪ್ಪಲಾಗುತ್ತದೆಯೇ? ಎಂದು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ದಸರಾ ಪೂಜೆಯ ವೇಳೆ ಪೊಲೀಸರು ಕೇಸರಿ ಶಲ್ಯ ಧರಿಸಿರುವುದು ವೈಯಕ್ತಿಕ ಮತ್ತು ಸಾಂಪ್ರದಾಯಿಕ ವಿಚಾರ. ಇದರ ಮೂಲಕ ಪೊಲೀಸ್ ಇಲಾಖೆ ಶಿಷ್ಟಾಚಾರದ ಉಲ್ಲಂಘನೆಯನ್ನು ಮಾಡಿಲ್ಲ. ಕೇಸರಿ ಒಂದು ಸಾಂಕೇತಿಕ ಉಡುಪು ಮಾತ್ರ, ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ ಯಾರು ಬೇಕಾದರೂ ಕೇಸರಿ ಬಣ್ಣದ ದಿರಿಸನ್ನು ಧರಿಸಬಹುದು. ಹೀಗಾಗಿ ಶಲ್ಯ ಧರಿಸಿದ್ದರಲ್ಲಿ ಪೊಲೀಸರ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಪಕ್ಷಗಳು ಕೇಸರಿ ಶಲ್ಯ ಧರಿಸಿದ ಬಗ್ಗೆ ಟೀಕಿಸುವ ಮೂಲಕ ಒಂದು ಸಮುದಾಯ ಓಲೈಕೆ ಮಾಡುವುದನ್ನು ಕೈಬಿಡಬೇಕು. ವಿಪಕ್ಷಗಳ ಟೀಕೆಯಿಂದ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲ. ಕೆಲ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಮುಸಲ್ಮಾನ ಪೊಲೀಸ್ ಸಿಬ್ಬಂದಿ ನಮಾಜ್ ಮಾಡಿ ಬರುತ್ತಾರೆ. ಅದನ್ನು ನಾವು ವಿರೋಧಿಸದೆ ಸಂಸ್ಕೃತಿಯ ಪ್ರತೀಕವಾಗಿ ಕಾಣುತ್ತೇವೆ ಎಂದರು.

ಈಗ ಪೊಲೀಸರು ಪೂಜೆಯ ವೇಳೆ ಶಲ್ಯ ಧರಿಸಿದ್ದನ್ನು ಬಿಜೆಪಿ ಬೆಂಬಲಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಟೀಕೆಗೆ ಹೆದರಿ ಕೇಸರಿ ಬಣ್ಣವನ್ನು ನಿಷೇಧಿಸಲು ಸಹ ಸಾಧ್ಯವಿಲ್ಲ. ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ರಾಜಕೀಯ ಮಾಡಿದವರನ್ನು ಜನರು ಎಲ್ಲಿಟ್ಟಿದ್ದಾರೆ? ಎಂದು ವಿಪಕ್ಷ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು

Most Popular

Recent Comments