ಬೆಂಗಳೂರು: ನಗರದ ವಿವಿಧ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದ ಇನ್ಸ್‌ಪೆಕ್ಟರ್ ಒಬ್ಬರು ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನ ಠಾಣೆಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದ ಮಹಮ್ಮದ್ ರಫೀಕ್ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ.
ಇಂದು ರಫೀಕ್ ಎಂದಿನಂತೆ ಬೆಳಗ್ಗೆ ಎದ್ದು ಸ್ಥಾನಕ್ಕೆ ತೆರಳಿದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ವೈದ್ಯರನ್ನು ಮನೆಗೆ ಕರೆಸಿಕೊಂಡಿದ್ದಾರೆ, ಆದರೆ ಅಷ್ಟೊತ್ತಿಗಾಗಲೇ ರಫೀಕ್ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.
ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮಹಮ್ಮದ್ ರಫೀಕ್ ಸ್ನೇಹ ಜೀವಿಯಾಗಿದ್ದರು. ರಫೀಕ್ ಇತ್ತೀಚೆಗೆ ಖಾಸಗಿ ಚಾನಲ್ ಒಂದರಲ್ಲಿ ಹಾಡುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸುಬ್ರಹ್ಮಣಿ ಜೊತೆ ಶೋ ಒಂದರಲ್ಲಿ ಭಾಗವಹಿಸಿದ್ದರು. ಅಲ್ಲದೆ, ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಗೋವುಗಳಿಗೆ ರಕ್ಷಣೆಯನ್ನು ನೀಡಿ ಅವುಗಳಿಗೆ ಆಹಾರವನ್ನು ನೀಡಿ ಆರೈಕೆಯನ್ನು ಮಾಡುತ್ತಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕರುವೊಂದನ್ನು ಸಾಕುತ್ತಿದ್ದರು. ಆ ಬಳಿಕ ವರ್ಗಾವಣೆಗೊಂಡಾಗ ಆ ಕರುವನ್ನು ಜೊತೆಯಲ್ಲೇ ಕರೆದೊಯ್ದು ಪ್ರಾಣಿ ಪ್ರೀತಿಯನ್ನು ತೋರಿಸಿದ್ದರು ಎಂದು ಸಿಬ್ಬಂದಿ ವರ್ಗದವರು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.