Saturday, September 30, 2023
Homeಸುದ್ದಿಗಳುದೇಶಸದನದಲ್ಲಿ ಗದ್ದಲ ಸೃಷ್ಟಿಸಿದ ವಿರೋಧ ಪಕ್ಷಗಳು : ಕಿಡಿಕಾರಿದ ಮೋದಿ

ಸದನದಲ್ಲಿ ಗದ್ದಲ ಸೃಷ್ಟಿಸಿದ ವಿರೋಧ ಪಕ್ಷಗಳು : ಕಿಡಿಕಾರಿದ ಮೋದಿ

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಮುಂಗಾರು ಅಧಿವೇಶನದಲ್ಲಿ ಗದ್ದಲವನ್ನು ಉಂಟು ಮಾಡಿ ಕಲಾಪಗಳನ್ನು ಪದೇ ಪದೇ ಮುಂದೂಡುವoತೆ ಮಾಡಿದ ವಿರೋಧಪಕ್ಷಗಳ ನಡವಳಿಕೆ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣದ ಕುರಿತು ಇಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಸೃಷ್ಟಿಸಿದಂತಹ ಗದ್ದಲದ ಕುರಿತು ಪ್ರಧಾನಿ ಮೋದಿಯವರು ತೀವ್ರವಾಗಿ ಕಿಡಿಕಾರಿದರು ಎಂದು ಪ್ಲಹ್ದಾದ್ ಜೋಶಿಯವರು ಮಾಹಿತಿಯನ್ನು ನೀಡಿದ್ದಾರೆ.

ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದ್ದರೆ, ವಿಪಕ್ಷಗಳು ಕಲಾಪಕ್ಕೆ ಭಂಗ ತರುವ ಮೂಲಕ ಪ್ರಜಾಪ್ರಭುತ್ಬ, ಸಂವಿಧಾನ ಹಾಗೂ ಜನರಿಗೆ ದ್ರೋಹ ಬಗೆಯುತ್ತಿವೆ. ಅಧಿವೇಶನದಲ್ಲಿ ಸಚಿವರ ಕೈಯಿಂದ ಕಾಗದ ಕಸಿದು ಅದನ್ನು ಹರಿದು ಹಾಕಲಾಗುತ್ತದೆ ಎಂದರೆ, ವಿಪಕ್ಷ ನಾಯಕರಿಗೆ ಸಂಸದೀಯ ನಡುವಳಿಕೆ ಬಗ್ಗೆ ಅದೆಷ್ಟು ಗೌರವವಿದೆ ಎಂಬುದು ತಿಳಿಯುತ್ತದೆ ಎಂದು ಪ್ರಧಾನಿ ಮೋದಿ ಅಸಮಾಧಾನ ಹೊರಹಾಕಿದರು.

ಸಭೆಯಲ್ಲಿ ಲೋಕಸಭೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ ಪೆಗಾಸಸ್ ಕುರಿತು ಸ್ಪಷ್ಟನೆ ನೀಡುವ ಸಂದರ್ಭದಲ್ಲಿ, ಟಿಎಂಸಿ ಸಂಸದ ಶಾಂತನು ಸೇನ್ ಕಾಗದವನ್ನು ಹರಿದು ಹಾಕಿದ ಘಟನೆಯನ್ನು ಮೋದಿ ಪ್ರಸ್ತಾಪಿಸಿದರು. ಕೋವಿಡ್ ಹಾವಳಿ ಹಾಗೂ ಅದರಿಂದ ಜನರಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಿದ್ದವಿಲ್ಲದ ವಿಪಕ್ಷಗಳು, ವಿನಾಕಾರಣ ಗೊಂದಲ ಸೃಷ್ಟಿಸುವಲ್ಲಿ ನಿರತವಾಗಿವೆ ಎಂದು ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ತಮ್ಮನ್ನು ಆರಿಸಿ ಕಳಿಸಿದ ಜನರಿಗೆ ದ್ರೋಹ ಬಗೆಯುತ್ತಿರುವ ವಿಪಕ್ಷ ಸಂಸದರು, ಅಧಿವೇಶನದ ಉಳಿದ ಸಮಯವನ್ನಾದರೂ ಸದುಪಯೋಗಪಡಿಸಿಕೊಳ್ಳುವತ್ತ ಗಮನಹರಿಸಲಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆಂದು ಜೋಶಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಮತ್ತೊಬ್ಬ ಕೇಂದ್ರ ಸಚಿವ ಮುರಳೀಧರನ್ ಅವರು, ಸಂಸತ್ತಿನಲ್ಲಿ ಮಸೂದೆಗಳ ಅಂಗೀಕಾರದ ವಿಧಾನವನ್ನು ಟೀಕಿಸಿದ್ದ ಟಿಎಂಸಿ ನಾಯಕ ಡೆರಿಕ್ ಒಬ್ರೈನ್ ಅವರ ಟ್ವೀಟ್ ಕೂಡ ಮೋದಿಯವರನ್ನು ಕೆರಳಿಸಿದೆ ಎಂದು ತಿಳಿಸಿದ್ದಾರೆ.

ಮೊದಲ 10 ದಿನಗಳಲ್ಲಿ ಮೋದಿ-ಶಾ ಅವರು 12 ಮಸೂದೆಗಳನ್ನು ಸರಾಸರಿ7 ನಿಮಿಷಗಳಲ್ಲಿ ಅಂಗೀಕರಿಸಿದ್ದಾರೆ. ಇದೇನು ಶಾಸನಗಳ ಅಂಗೀಕಾರವೋ? “ಪಾಪ್ರಿ ಚಾಟ್” (ತಿನಿಸು) ಮಾಡುವುದೋ? ಎಂದು ಡೆರಿಕ್ ಒಬ್ರೈನ್ ಟ್ವೀಟ್ ಮಾಡಿದ್ದರು.
ಇಂತಹ ಟೀಕೆಗಳು ಸಂಸದೀಯ ಪ್ರಕ್ರಿಯೆ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಅವಹೇಳನ ಮಾಡಿದಂತೆ ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

 

Most Popular

Recent Comments