ನವದೆಹಲಿ : ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಮಂಡಿಸಿದ್ದ ನಿರ್ಣಯಗಳ ಮೇಲೆ ಮತದಾನ ನಡೆಯುವ ವೇಳೆ ಹಾಜರಿರದ ಸಂಸದರ ವಿವರಗಳನ್ನು ನೀಡುವಂತೆ ಪ್ರಧಾನಿ ಮೋದಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಂಗಳವಾರ ಸೂಚಿಸಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಈ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
‘ನ್ಯಾಯಾಧಿಕರಣ ಸುಧಾರಣಾ ಮಸೂದೆ‘ಯನ್ನು ಸದನದ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸಿ ಕೆಲ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ್ದವು. ಈ ಸಮಯದಲ್ಲಿ ಅನೇಕ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು. ಇದು ಮೋದಿ ಗಮನಕ್ಕೆ ಬಂದಿದ್ದು, ಈ ಕಾರಣಕ್ಕೆ ಅವರು ಗೈರುಹಾಜರಿಯ ವಿವರವನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ, ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಚಪ್ಪಾಳೆ ತಟ್ಟಿ ಮೋದಿ ಅಭಿನಂದಿಸಿದರು. ‘ನಿಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪೋಷಣ್ ಅಭಿಯಾನ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಕುರಿತು ಪ್ರಚಾರವನ್ನು ನಡೆಸಬೇಕು’ ಎಂದು ಸಂಸದರಿಗೆ ಸಲಹೆಯನ್ನು ನೀಡಿದರು.