ಶಿವಮೊಗ್ಗ: ಮೃತಪಟ್ಟ ವೃದ್ದೆಯ ಮೃತದೇಹವನ್ನು ಮೂರು ದಿನವಾದರೂ ಸಂಸ್ಕಾರ ನಡೆಸದೆ ರಸ್ತೆಗಾಗಿ ಪಟ್ಟು ಹಿಡಿದು ಕುಳಿತಿರುವ ಘಟನೆ ಜಿಲ್ಲೆಯ ಗೌತಮಪುರ ಗ್ರಾಮದಲ್ಲಿ ನಡೆದಿದೆ.
ಸಾಗರ ತಾಲ್ಲೂಕಿನ ಗೌತಮಪುರ ಕಾಲನಿಯ ವೃದ್ದೆ ರಾಜಮ್ಮ (70) ಮೃತಪಟ್ಟು ಮೂರು ದಿನವಾದರೂ ಅವರ ಕುಟುಂಬದವರು ಅಂತ್ಯ ಸಂಸ್ಕಾರವನ್ನು ನಡೆಸದೆ ರಸ್ತೆಗಾಗಿ ಪಟ್ಟು ಹಿಡಿದು ಅಂತ್ಯ ಸಂಸ್ಕಾರಕ್ಕೆ ಶವವನ್ನು ಕೊಂಡೊಯ್ಯಲು ರಸ್ತೆ ಇಲ್ಲದಿರುವುದರಿಂದ ಶವವಿಟ್ಟುಕೊಂಡು ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದಾರೆ.
ಮೂರು ದಿನದ ಹಿಂದೆ ರಾಜಮ್ಮ ಮೃತಪಟ್ಟಿರುವುದಿಂದ ಶವ ಈಗಾಗಲೇ ವಾಸನೆ ಬರಲಾರಂಭಿಸಿದೆ. ಶವ ಕೊಳೆತು ನಾರುತ್ತಿದ್ದರೂ, ರಸ್ತೆ ಇಲ್ಲದೇ ಶವವನ್ನು ಸಾಗಿಸುವುದಿಲ್ಲ ಎಂದು ಕುಟುಂಬದವರು ಆಗ್ರಹಿಸುತ್ತಿದ್ದಾರೆ. ‘ ಗ್ರಾಮ ಪಂಚಾಯಿತಿ ಜಾಗವನ್ನು ಒತ್ತುವರಿ ಮಾಡಿ ನಮ್ಮ ಮನೆಗೆ ಬರುವ ರಸ್ತೆ ಬಂದ್ ಮಾಡಲಾಗಿದೆ. ಕಳೆದ 24 ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಒತ್ತುವರಿ ತೆರವು ಮಾಡಿ ರಸ್ತೆ ಬಿಡಿಸಿಕೊಟ್ಟಿಲ್ಲ. ಇದೀಗ ಶವವನ್ನು ಕೊಂಡೊಯ್ಯಲೂ ರಸ್ತೆಯಿಲ್ಲ’ ಎಂದು ಕುಟುಂಬದವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು, ಗೌತಮಪುರ ಗ್ರಾಮಪಂಚಾಯಿತಿ ಅಧಿಕಾರಿಗಳು ಆಗಮಿಸಿ ಮನವೊಲಿಸುವ ಕೆಲಸವನ್ನು ಮಾಡಿದರೂ ಕುಟುಂಬದವರು ಮೊದಲು ರಸ್ತೆಯನ್ನು ಮಾಡಿಕೊಡಿ, ಆಮೇಲೆ ಶವ ಸಂಸ್ಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ.