ಕೊಪ್ಪ/ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚುನಾವಣಾ ಆಯೋಗ ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಗುರುವಾರ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಆರಂಭವಾದ ಮೊದಲ ದಿನವೇ ಜಿಲ್ಲೆಯ ಇಬ್ಬರು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ ಎನ್ ಜೀವರಾಜ್ ಅವರು ಮೊದಲ ದಿನವೇ ತಮ್ಮ ಉಮೇದುವಾರಿಗೆ ಸಲ್ಲಿಸಿದ್ದಾರೆ.
ಬೆಳ್ಳಿ ಪ್ರಕಾಶ್ ಅವರು ತಮ್ಮ ಪತ್ನಿ ಕವಿತಾ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಜೊತೆ ತೆರಳಿ ಕಡೂರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಮಾಜಿ ಶಾಸಕ, ಶೃಂಗೇರಿ ಅಭ್ಯರ್ಥಿ ಡಿ ಎನ್ ಜೀವರಾಜ್ ಕೊಪ್ಪದಲ್ಲಿ ತಾಲ್ಲೂಕು ಕಛೇರಿಯಲ್ಲಿ ಕ್ಷೇತ್ರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕು ಕಚೇರಿ ಹೊರಬಾಗದಲ್ಲಿ ಸೇರಿದ್ದ ಕಾರ್ಯಕರ್ತರು ಜೀವರಾಜ್ ಪರ ಘೋಷಣೆ ಕೂಗಿದರು. ಅದಕ್ಕು ಮುನ್ನ ಬೆಳಿಗ್ಗೆ ಹಿಂಬರವಳ್ಳಿ ಗಣಪತಿ, ವೀರಭದ್ರ, ಅರಳಿಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಜೀವರಾಜ್ ಪತ್ನಿ ಹಾಗೂ ಆಪ್ತರು ಇದ್ದರು.
ನಾಳೆ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು 16 ರಂದು ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಏಳು ದಿನಗಳಲ್ಲಿ ಎರಡು ದಿನ ಸರ್ಕಾರಿ ರಜೆ ಇರಲಿದ್ದು, ಐದು ದಿನಗಳು ಮಾತ್ರ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಇದೆ. ಅಭ್ಯರ್ಥಿಗಳು ಶುಭ ದಿನ, ಶುಭ ಗಳಿಗೆ ನೋಡಿಕೊಂಡು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಆನ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ: ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಚುನಾವಣೆ ಆಯೋಗದ ವೆಬ್ಸೈಟ್ನಲ್ಲಿ ಎಲ್ಲಾ ದಾಖಲೆಗಳೊಂದಿಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ.
ಮರಳಿ ಜೆಡಿಎಸ್ ಗೆ ಬಂದ ದತ್ತಾ, 18ಕ್ಕೆ ನಾಮಪತ್ರ ಸಲ್ಲಿಕೆ
ಚಿಕ್ಕಮಗಳೂರು: ಕಡೂರು ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಶಾಸಕ ವೈಎಸ್ಸಿ ದತ್ತಾ ಬೇಸರಗೊಂಡಿದ್ದರು. ಇಂದು ಅವರನ್ನು ಜೆಡಿಎಸ್ ನ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಇತರೆ ನಾಯಕರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಮಾಜಿ ಶಾಸಕ ವೈಎಸ್ ವಿ ದತ್ತಾ ಜೆಡಿಎಸ್ ಗೆ ವಾಪಸ್ಸು ಆಗುವ ನಿರ್ಧಾರ ಪ್ರಕಟಿಸಿದ್ದಾರೆ. ಅಲ್ಲದೇ ಕಡೂರು ಕ್ಷೇತ್ರದಿಂದ ಅವರಿಗೆ ಟಿಕೆಟ್ ಫಿಕ್ಸ್ ಆಗಿದೆ. ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮಾಜಿ ಶಾಸಕ ವೈಎಸ್ ವಿ ದತ್ತಾ ಅವರನ್ನು ಹಾಸನದ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಹೆಚ್ ಡಿ ರೇವಣ್ಣ ಭೇಟಿಯಾದರು. ಅವರೊಂದಿಗೆ ಕೆಲ ಕಾಲ ಚರ್ಚಿಸಿ, ಜೆಡಿಎಸ್ ಗೆ ವಾಪಾಸ್ಸು ಬರುವಂತೆ ಮನವೊಲಿಸಿದರು. ಈ ಮನವೊಲಿಕೆ ಪ್ರಯತ್ನ ಯಶಸ್ವಿಯಾಗಿದೆ.
ಈ ಬಗ್ಗೆ ಮಾತನಾಡಿದಂತ ಸಂಸದ ಪ್ರಜ್ವಲ್ ರೇವಣ್ಣ, ಕಡೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ವೈಎಸ್ ವಿ ದತ್ತಾ ಕಣಕ್ಕೆ ಇಳಿಯಲಿದ್ದಾರೆ. ಅವರಿಗೆ ಪಕ್ಷದಿಂದ ಟಿಕೆಟ್ ಸದ್ಯದಲ್ಲೇ ಘೋಷಣೆಯಾಗಲಿದ್ದು, ಇಂದಿನಿಂದಲೇ ಪ್ರಚಾರ ಆರಂಭಿಸಲಿದ್ದಾರೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ, ವೈಎಸ್ ವಿ ದತ್ತಾ ಅವರು ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ, ಅವರು ನಾಮಪತ್ರ ಸಲ್ಲಿಕ ದಿನ ದೇವೇಗೌಡರು ಆಗಮಿಸಲಿದ್ದಾರೆ ಎಂದರು.
ಈ ಬಳಿಕ ಮಾತನಾಡಿದಂತ ಮಾಜಿ ಶಾಸಕ ವೈಎಸ್ ವಿ ದತ್ತಾ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮಾತಿಗೆ ನಾನು ಬೆಲೆ ಕೊಡುತ್ತೇನೆ. ಹೆಚ್ ಡಿ ದೇವೇಗೌಡ ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದಿದ್ದಾರೆ. ಹಾಗಾಗಿ ದೇವೇಗೌಡರ ಮಾತಿಗೆ ಬೆಲೆಕೊಟ್ಟು ಪಕ್ಷಕ್ಕೆ ವಾಪಾಸ್ಸು ಆಗುತ್ತಿದ್ದೇನೆ. ಏಪ್ರಿಲ್ 18 ರಂದು ಕಡೂರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇವೆ. ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದು ಈ ತೀರ್ಮಾನ ಮಾಡಿದ್ದೇನೆ ಎಂಬುದಾಗಿ ತಿಳಿಸಿದರು.