ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಕೃಷಿಕರು ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ರೋಗದ ಪರಿಹಾರ ಕ್ರಮ ಹಾಗೂ ಸರ್ಕಾರವನ್ನು ಈ ಸಲುವಾಗಿ ಸೆಳೆಯುವ ನಿಟ್ಟಿನಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳು ಕುರಿತು ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಕೊಪ್ಪದ ಟೌನ್ ಹಾಲ್ ನಲ್ಲಿ ಅಡಿಕೆ ಬೆಳೆಗಾರರ ಸಭೆ ನಡೆಯಿತು.
ಈ ಸಭೆಯಲ್ಲಿ ಭಾಗವಹಿಸಿದ್ದ ಇನ್ನೂರಕ್ಕೂ ಅಧಿಕ ಕೃಷಿಕರು, ಅಡಿಕೆಬೆಳೆಗಾರರು ಗೋರಖ್ ಸಿಂಗ್ ವರದಿಯ ಜಾರಿಗೆ ಹಾಗೂ ಶೃಂಗೇರಿಯಲ್ಲಿರುವ ಸಂಶೋಧನಾ ಕೇಂದ್ರಕ್ಕೆ ಅವಶ್ಯಕವಿರುವ ನುರಿತ ವಿಜ್ಞಾನಿಗಳನ್ನು ಶೀಘ್ರವಾಗಿ ನೇಮಕ ಮಾಡಬೇಕೆಂಬ ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಡಿಕೆ ಬೆಳೆಗಾರರ ಸಂಘದ ಹೆಸರನ್ನು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆ ಎಂದು ಬದಲಿಸಿ ಈ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಹ ಈ ವೇಳೆ ನಡೆಯಿತು.
ನೂತನ ಪದಾಧಿಕಾರಿಗಳ ಆಯ್ಕೆ:
ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆಯ ಕ್ಷೇತ್ರಮಟ್ಟದ ಅಧ್ಯಕ್ಷರಾಗಿ ತಲವಾನೆ ಪ್ರಕಾಶ್ ಆಯ್ಕೆಗೊಂಡರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಜೈನ್, ಕ್ಷೇತ್ರ ಖಜಾಂಚಿಯಾಗಿ ಜಿ.ಎಂ ಹರ್ಷ, ಕ್ಷೇತ್ರ ಸಂಘಟನಾ ಕಾರ್ಯದರ್ಶಿಯಾಗಿ ಅರವಿಂದ ಸಿಗದಾಳ್. ಕೊಪ್ಪ ತಾಲೂಕಿನ ಅಧ್ಯಕ್ಷರಾಗಿ ರವೀಂದ್ರ ಕುಕ್ಕುಡಿಗೆ, ಕೊಪ್ಪದ ಕಾರ್ಯದರ್ಶಿಯಾಗಿ ನಾಗೇಶ್ ರಾವ್ ಅಗಳಿ ಆಯ್ಕೆಯಾದರು.
ಶೃಂಗೇರಿ ಹಾಗೂ ನರಸಿಂಹರಾಜಪುರ ತಾಲೂಕುಗಳ ಪದಾಧಿಕಾರಿಗಳನ್ನು ಆಯಾಯ ತಾಲೂಕುಗಳಿಗೆ ತೆರಳಿ ಆಯ್ಕೆ ಮಾಡಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ತೀರ್ಮಾನಿಸಿದರು.
ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ಹಕ್ಕೊತ್ತಾಯ ನಿರ್ಣಯಗಳು ಇಂತಿದೆ:
- ಕ್ಷೇತ್ರದ ಪ್ರತಿ ಗ್ರಾಮದ ಪ್ರತಿ ಅಡಿಕೆ ಬೆಳೆಗಾರರನ್ನೂ ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ಅವರ ಎಲ್ಲಾ ಮಾಹಿತಿಗಳನ್ನೂ ಸಂಘವು ಸಂಗ್ರಹಿಸಿಟ್ಟುಕೊಳ್ಳುವುದು, 100 ರೂ ದೇಣಿಗೆ ಪಡೆದು ಸದಸ್ಯತ್ವ ನೊಂದಣಿ ಆರಂಭಿಸುವುದು.
- ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಕಾಣಿಸಿಕೊಂಡಿರುವ ಎಲೆಚುಕ್ಕಿ ಹಾಗೂ ಹಳದಿ ಎಲೆ ರೋಗಕ್ಕೆ ಕನಿಷ್ಟ ಕಾಲಮಿತಿಯಲ್ಲಿ ನಿರ್ದಿಷ್ಟ ಮತ್ತು ಸರಿಯಾದ ಔಷಧವನ್ನು ಸರ್ಕಾರ ರೈತರಿಗೆ ಒದಗಿಸಬೇಕು ಎಂಬ ಆಗ್ರಹ.
- ರೋಗ ಬಾಧೆಯಿಂದ ಹಾನಿಗೊಳಗಾದ ರೈತರಿಗೆ ಬೆಳೆ ಪುನಶ್ಚೇತನಕ್ಕಾಗಿ ಸರ್ಕಾರ ನೀಡುತ್ತಿರುವ ಸಹಾಯಧನ ಅವೈಜ್ಞಾನಿಕವಾಗಿದ್ದು ಆ ಮೊತ್ತವನ್ನು ಹೆಚ್ಚಿಸಿ ನೇರವಾಗಿ ರೈತರ ಖಾತೆಗೆ ಹಣ ಜಮಾವಣೆಯಾಗುವಂತೆ ಕ್ರಮಕೈಗೊಳ್ಳುವಂತೆ ಆಗ್ರಹಿಸುವುದು.
- ಮಲೆನಾಡು ಭಾಗದಲ್ಲಿ ಆಗಿರುವ ಬೆಳೆಹಾನಿಯನ್ನು ಅಧಿಕಾರಿಗಳಿಂದ ಸಮಗ್ರ ಸಮೀಕ್ಷೆ ನಡೆಸಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು.
- ಮ್ಯಾಮ್ಕೊಸ್ ಸಂಸ್ಥೆ ಈಗಾಗಲೇ ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗವನ್ನು ತೆರೆದಿದೆ. ಶೃಂಗೇರಿ, ತೀರ್ಥಹಳ್ಳಿಯಲ್ಲಿ ಆರಂಭಿಸಿರುವ ಅಡಿಕೆ ಸಂಶೋಧನಾ ಕೇಂದ್ರದ ಮೇಲುಸ್ತುವಾರಿಯನ್ನು ಸರ್ಕಾರ ಮ್ಯಾಮ್ಕೋಸ್ ಸಂಸ್ಥೆಗೆ ವಹಿಸಬೇಕು.
- ಅವೈಜ್ಞಾನಿಕವಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ತಕ್ಷಣ ಸರಿಪಡಿಸುವಂತೆ ಆಗ್ರಹ.
- ಸಂಘಟನೆಯಲ್ಲಿ ಅಡಿಕೆಗೆ ಸಂಬಂದಿಸಿದ ಮ್ಯಾಮ್ಕೋಸ್, ಕ್ಯಾಂಪ್ಕೋ, ತುಮ್ಕೋಸ್ ಸೇರಿದಂತೆ ಅಡಿಕೆ ವಹಿವಾಟು ನಡೆಸುವ ಖರೀದಿದಾರರು,ವ್ಯಾಪಾರಿಗಳನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು.
- ಇದಲ್ಲದೆ ಅಡಿಕೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು, ಕಾಡುಪ್ರಾಣಿಗಳ ಹಾವಳಿ, ಜಮೀನು ದಾಖಲಾತಿಗೆ ಸಂಬಂಧಪಟ್ಟ ಸಮಸ್ಯೆಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ವಿಸ್ಕೃತವಾಗಿ ಚರ್ಚೆ ನಡೆಯಿತು.
ಎಲೆಚುಕ್ಕಿ ಹಾಗೂ ಹಳದಿ ಎಲೆ ರೋಗದ ಕುರಿತು ಪ್ರಯೋಗಶೀಲ ಕೃಷಿಕರನ್ನೊಳಗೊಂಡ ತಾಂತ್ರಿಕ ಪರಿಣಿತರ ತಂಡ ಹಾಗೂ ಮಾಧ್ಯಮ ವಿಭಾಗವನ್ನು ಆರಂಭಿಸಲು ಅಡಿಕೆ ಬೆಳೆಗಾರರ ಸಂಘವು ನಿರ್ಧರಿಸಿದೆ.