ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ತಕ್ಷಣ ಜಾರಿಗೆ ಬರುವಂತೆ ಮರು ನಾಮಕರಣ ಮಾಡಲಾಗಿದೆ.
ಈ ಮುಂಚೆ ಹೈದರಾಬಾದ್ ಕರ್ನಾಟಕ ಎಂಬುದಾಗಿದ್ದ ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿದ್ದರೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಪ್ರದೇಶ ಅಭಿವೃದ್ಧಿ ಮಂಡಳಿಯನ್ನಾಗಿ ನಾಮಕರಣ ಮಾಡಲಾಗಿದ್ದರೆ ಈಗ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಹಾಗೂ ಮುಂಬೈ ಕರ್ನಾಟಕದ ಒಂದು ಜಿಲ್ಲೆ ಸೇರಿ ಏಂಟು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನೂ ಬದಲಾಯಿಸಲಾಗಿದೆ.
ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಕಲಬುರಗಿ ಕೇಂದ್ರೀಯ ಬಸ್ ನಿಲ್ದಾಣದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮರು ನಾಮಕರಣ ಆದೇಶ ಪತ್ರವನ್ನು NEKRTC ಅಧ್ಯಕ್ಷರಾಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುರ್ಮಾರಾವ್ ಎಂ ಅವರಿಗೆ ಹಸ್ತಾಂತರಿಸಿ, ಈ ಕೂಡಲೇ ಕಾರ್ಯಾನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ರಾಜ್ಯದ KSRTC ಹೆಸರು ಹಾಗೂ ಲೋಗೋಕ್ಕೆ ಯಾವುದೇ ಧಕ್ಕೆಯಿಲ್ಲ. ಕೇರಳ ಸರ್ಕಾರವು KSRTC ಹೆಸರು ಹಾಗೂ ಲೋಗೋ ಬಳಕೆಗೆ ಆಕ್ಷೇಪಿಸಿ ಅಪ್ಲಿಟೆಡ್ ಟ್ರಿಬ್ಯೂನಲ್ ನಲ್ಲಿ ಪ್ರಶ್ನಿಸಿ ದೂರು ದಾಖಲಿಸಿತ್ತು. ಆದರೆ ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ಟ್ರಿಬ್ಯುನಲ್ ತೆಗೆದು ಹಾಕಿದೆ. ಹೀಗಾಗಿ ಕೇರಳದ ಆಕ್ಷೇಪ ಮುಗಿದಂತಾಗಿದೆ. ಈಗ ಏನಿದ್ದರೂ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಬಹುದಾಗಿದೆ. KSRTC ಹೆಸರು ಮೊದಲು ಬಳಕೆ ಕುರಿತಾಗಿ ಇಲಾಖೆ ಬಳಿ ದಾಖಲೆಗಳಿವೆ. ಹೀಗಾಗಿ KSRTC ಹೆಸರಿಗೆ ಯಾವುದೇ ಧಕ್ಕೆಯಿಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ. KSRTC ಹೆಸರು ಇನ್ನು ನೆನಪು ಮಾತ್ರ, ಇನ್ನು ಮುಂದೆ ಕರ್ನಾಟಕ ಈ ಹೆಸರನ್ನು ಬಳಸುವಂತಿಲ್ಲ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು ಅಲ್ಲದೆ ಅನೇಕರು KSRTC ಗೆ ಹೊಸ ಹೆಸರುಗಳನ್ನೂ ಸೂಚಿಸಿದ್ದರು.