ನವದೆಹಲಿ : ಆಗಸ್ಟ್ 22 ರಂದು ಲಕ್ನೋದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಸಿಕಂದರ್ ಪುರದ ನಿವಾಸಿ ಚಂದ್ರ ಕಿಶೋರ್ ಪರಾಶರ್ ಅವರು ಮುಜಾಫರ್ ಪುರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ಶವಸಂಸ್ಕಾರಕ್ಕೆ ಮೊದಲು ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಇರಿಸಿದ್ದರಿಂದ ನಡ್ಡಾರವರು ರಾಷ್ಟ್ರಧ್ವಜಕ್ಕೆ ಅಗೌರವವನ್ನು ತೋರಿದ್ದಾರೆ ಎಂದು ಅವರು ಆರೋಪಿಸಿದರು.
‘ಬಿಜೆಪಿ ಅದನ್ನು ಉದ್ದೇಶಪೂರ್ವಕವಾಗಿ ಮಾಡಿದೆ ನಡ್ಡಾ ಅವರ ಕೃತ್ಯವು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನವಾಗಿದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ. ಅವರು ತಮ್ಮ ಅರ್ಜಿಯನ್ನು ಬೆಂಬಲಿಸಿ ಕೆಲವು ಚಿತ್ರಗಳನ್ನು ಸಲ್ಲಿಸಿದ್ದಾರೆ
ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜದ ಮೇಲೆ ಪಕ್ಷದ ಧ್ವಜವನ್ನು ಇರಿಸಿದ್ದಕ್ಕಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿತ್ತು. ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಮರನಾಥ ಅಗರ್ವಾಲ್ ಅವರು ಬಿಜೆಪಿ ನಾಯಕರು ಯಾವಾಗಲೂ ರಾಷ್ಟ್ರಕ್ಕಿಂತ ಮೇಲಿನಂತೆ ವರ್ತಿಸುತ್ತಾರೆ ಮತ್ತು ಇಂತಹ ಘಟನೆ ಅವರ ಒಳ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದರು.