ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ರತ್ನಗಿರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಈ ಮಧ್ಯೆ ರಾಣೆ ಅವರು ಸಿಎಂ ವಿರುದ್ಧದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಾವು ಸಿಎಂ ವಿರುದ್ಧ ಹೇಳಿಕೆ ನೀಡುವ ಮೂಲಕ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.
ದೇಶಕ್ಕೆ ಸ್ವಾತಂತ್ರ‍್ಯ ಲಭಿಸಿದ್ದು ಯಾವ ವರ್ಷ ಎಂಬುದನ್ನು ತಿಳಿಯದೇ ಇರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಸೋಮವಾರ ರಾಯಗಡದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ನಾರಾಯಣ ರಾಣೆ ಹೇಳಿದ್ದರು.
ಆಗಸ್ಟ್ 15 ರಂದು ಸ್ವಾತಂತ್ರ‍್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಧ್ವಜಾರೋಹಣವನ್ನು ನಡೆಸಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಸ್ವಾತಂತ್ರ‍್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಣೆ ಹೇಳಿಕೆಯನ್ನು ನೀಡಿದ್ದರು.
ರಾಣೆ ಹೇಳಿಕೆಗೆ ಶಿವಸೇನಾ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಸಚಿವರನ್ನು ಬಂಧಿಸಬೇಕು ಎಂದು ಒತ್ತಾಯಿಸಿತ್ತು ಎಂದು ತಿಳಿಸಿದ್ದಾರೆ.