ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ನಂದಿ ಹಿಲ್ಸ್ ಧಾಮದಲ್ಲಿ ಸಂಭವಿಸಿದ ಭೂಕುಸಿತ ಉಂಟಾಗಿದೆ,
ಈ ಭೂಕುಸಿತಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸುತ್ತಮುತ್ತಲ ಪರಿಸರದಲ್ಲಿ ನಡೆಸಲಾದ ಸ್ಫೋಟ ಕಾರಣವಿರುವ ಶಂಕೆಯನ್ನು ಪರಿಸರ ತಜ್ಞರು ವ್ಯಕ್ತಪಡಿಸಿದ್ದಾರೆ.
ಭೂಕುಸಿತ ನೈಸರ್ಗಿಕವಾಗಿ ಸಂಭವಿಸಿರುವ ಸಾಧ್ಯತೆ ಇದ್ದರೂ, ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಡಲಾಗುತ್ತಿರುವ ಗಣಿಗಾರಿಕೆ ಕೆಲಸಗಳಿಂದಾಗಿ ಭೂ ಕುಸಿತ ಸಂಭವಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಪರಿಸರ ತಜ್ಞರು ಹೇಳಿದ್ದಾರೆ.
ನಂದಿ ಹಿಲ್ಸ್ ನಲ್ಲಿ ಮಂಗಳವಾರ ಬ್ರಹ್ಮಗಿರಿ ಬಳಿಯ ರಂಗಪ್ಪ ಸರ್ಕಲ್ ಎನ್ನುವ ಪ್ರಾಂತ್ಯದಲ್ಲಿ ಭೂಕುಸಿತ ಸಂಭವಿಸಿತ್ತು. ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಆರ್ ಲತಾ, ನಂದಿ ಹಿಲ್ಸ್ ಒಂದು ಬೃಹತ್ ಶಿಲಾಕಲ್ಲಾಗಿದ್ದು ಕಾಲಾಂತರದಲ್ಲಿ ಅದರ ಮೇಲೆ ಮಣ್ಣು, ಕಲ್ಲುಗಳು ತುಂಬಿಕೊoಡು ಪರ್ವತ ರೂಪವನ್ನು ತಾಳಿದೆ. ಚಿಕ್ಕಬಳ್ಳಾಪುರದಲ್ಲಿ ಸಾಮಾನ್ಯವಾಗಿ ವಾರ್ಷಿಕ 700- 750 ಮಿಮೀ. ಮಳೆಯಾಗುತ್ತದೆ. ಇದರಿಂದಾಗಿ ಮಣ್ಣು ಮತ್ತು ಕಲ್ಲುಗಳು ಸವೆದು ನೀರಲ್ಲಿ ಕೊಚ್ಚಿಕೊಂಡು ಹೋಗಿ ಭೂಕುಸಿತಕ್ಕೆ ಕಾರಣವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.