ಬೆಂಗಳೂರು: ರಾಜ್ಯದ ಬಹಳಷ್ಟು ಗ್ರಾಮ ಮತ್ತು ನಗರಗಳ ಹೆಸರನ್ನು ತಪ್ಪು ತಪ್ಪಾಗಿ ಗೂಗಲ್ ಮ್ಯಾಪ್‌ನಲ್ಲಿ ದಾಖಲಿಸಿರುವುದನ್ನು ಕೂಡಲೇ ಸರಿಪಡಿಸಿ ಬಳಕೆಗೆ ಒದಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗೂಗಲ್ ಇಂಡಿಯಾ ಪ್ರೈ.ಲಿ ಗೆ ಪತ್ರವನ್ನು ಬರೆಯಲಾಗಿದೆ.
ಗೂಗಲ್ ಮ್ಯಾಪ್ ನಲ್ಲಿ ರಾಜ್ಯದ ಬಹಳಷ್ಟು ಗ್ರಾಮ ಮತ್ತು ನಗರಗಳ ಹೆಸರುಗಳನ್ನು ತಪ್ಪು ತಪ್ಪಾಗಿ ದಾಖಲಿಸಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಿಸಿ ಪತ್ರ ಬರೆದಿದೆ. ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಗೂಗಲ್ ಮ್ಯಾಪ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಸಹಾಯವಾಗುತ್ತಿದೆ ಜೊತೆಗೆ ಪ್ರವಾಸಿಗರಿಗೆ ಗೊತ್ತಿರದ ಊರುಗಳಿಗೆ ಹೋದ ಸಂದರ್ಭದಲ್ಲಿ ಪ್ರಸ್ತುತ ವ್ಯಕ್ತಿಗಳಿಗಿಂತ ಹೆಚ್ಚಾಗಿ ಗೂಗಲ್ ಮ್ಯಾಪ್ ಅನ್ನು ಬಳಸುತ್ತಿದ್ದಾರೆ.
ಗೂಗಲ್ ಮ್ಯಾಪ್‌ಗಳನ್ನು ಇಂದು ಜನರು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದರಿಂದ ಅದರಲ್ಲಿರುವ ರಾಜ್ಯದ ನಗರಗಳ ತಪ್ಪು ಹೆಸರುಗಳನ್ನು ಕೂಡಲೇ ಸರಿಪಡಿಸಿ ಬಳಕೆಗೆ ಒದಗಿಸುವಂತೆ ತಿಳಿಸಿದೆ. ಈ ಸಂಬoಧ ಅಗತ್ಯವಿದ್ದಲ್ಲಿ ಪ್ರಾಧಿಕಾರ ಸಹಾಯವನ್ನು ಒದಗಿಸಲು ಸಿದ್ಧವಿದೆ ಎಂದು ಪ್ರಾಧಿಕಾರದಿಂದ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದೆ.