ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು, ಕೆಪಿಸಿಸಿ ಕಚೇರಿಯಲ್ಲಿಯೇ ಕುಳಿತು ಸತ್ಯ ಹೇಳಿರುವ ಕಾಂಗ್ರೆಸ್ ಮುಖಂಡರಿಗೆ ನನ್ನ ಧನ್ಯವಾದಗಳು ಎಂದು ನಳಿನ್ ಕುಮಾರ್ ಕಟೀಲ್ ರವರು ಟ್ವಿಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಕುರಿತು ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ. ಎ ಸಲೀಂ ಹಾಗೂ ಮಾಜಿ ಸಂಸದ ವಿ. ಎಸ್ ಉಗ್ರಪ್ಪ ನಡೆಸಿದ ಸಂಭಾಷಣೆಯ ಕುರಿತು ನಳಿನ್ ಕುಮಾರ್ ಈ ರೀತಿಯಾಗಿ ಹೇಳಿದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಅವರ ಪಕ್ಷದವರೇ ಹೇಳಿರುವ ಮಾತುಗಳನ್ನು ರಾಜ್ಯದ ಜನ ಕೇಳಿದ್ದಾರೆ, ಡಿಕೆಶಿ ಮೇಲೆ ಈ.ಡಿ, ಸಿಬಿಐ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದು ಹೇಳಿದ್ದವರಿಗೆ ಅವರದ್ದೇ ಪಕ್ಷದ ಮುಖಂಡರು ಸಾಕ್ಷ್ಯವನ್ನು ನೀಡಿದ್ದಾರೆ ಎಂದು ತಿಳಿಸಿದರು.
”ತಕ್ಕಡಿ ಮೇಲೇಳುತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ಸಿಗೆ ಇನ್ನು ಮುಂದೆ ಭವಿಷ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರೇ ಗುಟ್ಟಾಗಿ ಒಪ್ಪಿಕೊಂಡಿದ್ದಾರೆ. ಶಿವಕುಮಾರ್ ರಾಜ್ಯಾಧ್ಯಕ್ಷರಾಗಿ ಇದ್ದರೆ ಪಕ್ಷವೇ ನಿರ್ನಾಮವಾಗಲಿದೆ ಎಂದು ಕಾಂಗ್ರೆಸ್ಸಿಗರು ಹೇಳಿರುವುದು ತಡವಾಗಿಯಾದರೂ ಜ್ಞಾನೋದಯವಾದಂತಾಗಿದೆ” ಎಂದು ನಳಿನ್ ಕುಮಾರ್ ತಿಳಿಸಿದರು.
”ಡಿ.ಕೆ.ಶಿವಕುಮಾರ್ ದೊಡ್ಡ ಸ್ಕ್ಯಾಮ್, ಕಲೆಕ್ಷನ್ ಗಿರಾಕಿ, ಅವರ ಹುಡುಗರ ಬಳಿ 50,100 ಕೋಟಿ ಇದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿರುವುದರಿಂದ ಇವರ ಮೇಲೆ ಆದ ಐಟಿ, ಸಿಬಿಐ ತನಿಖೆ ರಾಜಕೀಯ ಪ್ರೇರಿತವಲ್ಲ ಎಂದು ಜನರಿಗೆ ಮನವರಿಕೆಯಾಗಿದೆ” ಎಂದರು.
”ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಸತ್ಯವನ್ನು ಹೇಳಿರುವ ಕಾಂಗ್ರೆಸ್ ಮುಖಂಡರಿಗೆ ಧನ್ಯವಾದಗಳು. ನಿಮ್ಮ ಮಾತುಗಳನ್ನು ಜನರಿಗೆ ತಲುಪಿಸಿರುವ ಮಾಧ್ಯಮಗಳಿಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.