ಮೈಸೂರು: ಮೈಸೂರಿನಲ್ಲಿ 2 ಕೆಜಿ ಬೃಹತ್ ಗಾತ್ರದ ನಿಂಬೆ ಹಣ್ಣು ಸಿಕ್ಕಿದ್ದು, ನಿಂಬೆ ಹಣ್ಣನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ.
ಮೈಸೂರಿನ ಎಚ್.ಡಿ ಕೋಟೆಯ ಸರಗೂರು ತಾಲೂಕಿನ ಬಿದರಹಳ್ಳಿ ಸರ್ಕಲ್ ಬಳಿ ಬೇಕರಿಯ ಮಾಲೀಕ ಸನೋಜ್ ರವರ ಹಿತ್ತಲಿನಲ್ಲಿ ಅಪರೂಪದ ಈ ನಿಂಬೆ ಹಣ್ಣು ಬೆಳೆದಿದೆ. ಈ ನಿಂಬೆ ಗಿಡದಲ್ಲಿ 3 ನಿಂಬೆ ಹಣ್ಣುಗಳು ಬಿಟ್ಟಿದೆ. ಆದರೆ ಒಂದರ ಗಾತ್ರ ಮಾತ್ರ ಬರೋಬ್ಬರಿ 2 ಕೆಜಿ 150 ಗ್ರಾಂನಷ್ಟು ಇದೆ. ಈ ಅಧಿಕ ತೂಕವಿರುವ ಅಪರೂಪದ ನಿಂಬೆ ಹಣ್ಣನ್ನು ನೋಡಿ ಸ್ಥಳೀಯರು ಅಚ್ಚರಿಗೊಂಡಿದ್ದಾರೆ.
ಈ ನಿಂಬೆ ಹಣ್ಣಿನ ಗಿಡದಲ್ಲಿ ಇನ್ನೂ 2 ನಿಂಬೆ ಹಣ್ಣಿನ ಕಾಯಿಗಳಿದ್ದು, ಅವುಗಳು ಕೂಡ ಗಾತ್ರ ಬರುವವರೆಗೂ ಕಾವಲಿದ್ದು ಸನೋಜ್ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಕೃಷಿ ಇಲಾಖೆ ತಜ್ಞರು ಇಂಥ ಗಜನಿಂಬೆ ಕಾಯಿ ಗಿಡವನ್ನು ಪೋಷಿಸಿ, ತಳಿಗಳನ್ನು ಅಭಿವೃದ್ಧಿಪಡಿಸಿದರೆ ಉತ್ತಮ ಎಂದು ಸ್ಥಳೀಯರಿಗೆ ಹೇಳಿದ್ದಾರೆ.