ಮೈಸೂರು: ಮೈಸೂರು ಕಾನೂನುಬಾಹಿರ ಮಕ್ಕಳ ದತ್ತು ಮತ್ತು ಸಾಗಾಣಿಕೆ ದಂಧೆಗಳ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ ಎಂದು ಸರ್ಕಾರೇತರ ಸಂಸ್ಥೆಗಳು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರು ನೀಡುತ್ತಿದ್ದ ನಿರಂತರ ಎಚ್ಚರಿಕೆಗಳು ನಿಜವಾಗಿದ್ದು, ಮೈಸೂರು ಮತ್ತು ನಂಜನಗೂಡು ಪೊಲೀಸರು ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಅಕ್ರಮವಾಗಿ ಮಾರಾಟ ಮಾಡುವವರನ್ನು ಪತ್ತೆ ಮಾಡಿದ್ದಾರೆ.
ಆಶ್ಚರ್ಯಕರ ವಿಷಯವೆಂದರೆ ಅಲ್ಲಿ ಇರುವಂತಹ ಖಾಸಗಿ ಆಸ್ಪತ್ರೆಯೂ ಮಗುವನ್ನು ದತ್ತು ಪಡೆದ ದಂಪತಿಗಳನ್ನು ತನ್ನ ಜೈವಿಕ ಪೋಷಕರಾಗಿ ತೋರಿಸುವ ಸುಳ್ಳು ದಾಖಲೆಗಳನ್ನು ಸೃಷ್ಟಿಸುವಲ್ಲಿ ತೊಡಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂಜನಗೂಡು ಮಕ್ಕಳ ಕಳ್ಳ ಸಾಗಣೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬoಧಿಸಿದoತೆ ಬಗೆದಷ್ಟೂ ಹೆಚ್ಚಿನ ಮಾಹಿತಿಯು ಪೊಲೀಸರಿಗೆ ಲಭ್ಯವಾಗುತ್ತಿದೆ. ಒಂದು ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಮತ್ತೊಂದು ಪ್ರಕರಣದ ಜಾಡು ಸಿಕ್ಕಿದೆ.
ಮಕ್ಕಳ ಮಾರಾಟದ ಜಾಲ ಪ್ರಕರಣದ ತನಿಖೆಗೆ ಇಳಿದಂತಹ ಪೊಲೀಸರಿಗೆ ಈಗಾಗಲೇ ಸಿಕ್ಕಿಬಿದ್ದಿರುವ ಶ್ರೀಮತಿ ಅಲಿಯಾಸ್ ಸರಸ್ವತಿ ನಾಡಿಗ್ ಹಾಗೂ ಮಗಳು ಲಕ್ಷ್ಮಿ ಮತ್ತೊಂದು ಮಗುವನ್ನೂ ಸಹ ಮಾರಾಟ ಮಾಡಿರುವುದಾಗಿ ತನಿಖೆಯ ವೇಳೆ ಬಾಯಿಬಿಟ್ಟಿದ್ದಾರೆ.
ಎರಡನೇ ಪ್ರಕರಣದ ಕುರಿತು ಮಾಹಿತಿಯನ್ನು ನೀಡಿದ ಎಸ್‌ಪಿ ಆರ್.ಚೇತನ್, ನಂಜನಗೂಡು ಪಟ್ಟಣದ ಮಂಜುಳಾ ಎಂಬವರಿಗೆ ಸೇರಿದ 8 ತಿಂಗಳ ಮಗುವನ್ನು ಹಣಕ್ಕಾಗಿ ಕೊಳ್ಳೇಗಾಲದ ದಂಪತಿಗೆ ಮಾರಾಟ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಶ್ರೀಮತಿ ಬಾಯಿಬಿಟ್ಟಿದ್ದಾಳೆ. ಮಂಜುಳಾ ಗೃಹಿಣಿಯಾಗಿದ್ದು, ಪತಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾನೆ. ಬಡತನದ ಹಿನ್ನೆಲೆಯಲ್ಲಿ ಮಗು ಮಾರಾಟದ ಜಾಲಕ್ಕೆ ಸಿಲುಕಿರುವ ಸಾಧ್ಯತೆಯಿದೆಯೆಂದು ತಿಳಿಸಿದರು.
ಎರಡೂ ಪ್ರಕರಣಗಳಲ್ಲಿಯೂ ಎನ್.ಆರ್.ಮೊಹಲ್ಲಾದ ಎಸ್‌ಎಲ್‌ಇಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳು ಜನಿಸಿರುವುದು ಎಂದು ತಿಳಿದುಬಂದಿದೆ, ಈ ಪ್ರಕರಣದಲ್ಲಿ ಆಸ್ಪತ್ರೆಯ ಪಾತ್ರವೂ ಇರುವ ಕುರಿತು ಸಂಶಯವು ವ್ಯಕ್ತವಾಗಿದೆ.
ಜ್ಯೋತಿ ಎಂಬುವವರಿoದ ಪಡೆದ ಮೊದಲ ಮಗುವನ್ನು ಹೊಳೆನರಸೀಪುರದ ದಂಪತಿಗೆ 4 ಲಕ್ಷ ರೂ.ಗೆ ಮಾರಾಟ ಮಾಡಿರುವ ಪ್ರಕರಣದ ತನಿಖೆ ಪ್ರಾರಂಭಿಕ ಹಂತದಲ್ಲಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು. ಎರಡು ಪ್ರಕರಣಗಳಲ್ಲಿ 3 ಹಾಗೂ 8 ತಿಂಗಳ ಎರಡು ಶಿಶುಗಳನ್ನು ರಕ್ಷಿಸಿದ್ದು, ಮಕ್ಕಳ ಆರೈಕೆ ಕೇಂದ್ರದ ಸುಪರ್ದಿಗೆ ನೀಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.